

ಮೈಸೂರು: ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ್ ಬಿಜೆಪಿ ಸೇರ್ಪಡೆಯಿಂದ ಕಾಂಗ್ರೆಸ್‌ಗೆ ಏನೂ ನಷ್ಟ ಇಲ್ಲ ಎಂದು ಸಂಸದೀಯ ವ್ಯವಹಾರ, ಪ್ರವಾಸೋದ್ಯಮ ಸಚಿವ ಎಚ್.ಕೆ.ಪಾಟೀಲ್ ಹೇಳಿದರು.
ಕಾಂಗ್ರೆಸ್ ಸಮುದ್ರವಿದ್ದಂತೆ. ಪಕ್ಷದ ತತ್ವ-ಸಿದ್ಧಾಂತ, ಸರ್ಕಾರದ ಗ್ಯಾರಂಟಿ ಯೋಜನೆಗಳನ್ನು ಬೆಂಬಲಿಸುವವರು ಪಕ್ಷದಲ್ಲಿರುತ್ತಾರೆ. ಬಡವ-ಬಲ್ಲಿದರನ್ನು ಮೇಲೆತ್ತುವ ಯೋಜನೆಗಳನ್ನು ವಿರೋಧಿಸುವವರು ಪಕ್ಷ ಬಿಟ್ಟು ಹೋಗುತ್ತಾರೆ. ಕಾಂಗ್ರೆಸ್ ಯಾವುದೇ ನಾಯಕರ ಮೇಲೆ ಕಣ್ಗಾವಲು ಇರಿಸುವುದಿಲ್ಲ. ಹೀಗಾಗಿ ಹೋಗುವವರು ಹೋಗುತ್ತಾರೆ, ಇರುವವರು ಇರುತ್ತಾರೆ ಎಂದು ಸುದ್ದಿಗೋಷ್ಠಿಯಲ್ಲಿ ಕುಟುಕಿದರು.
ಜಗದೀಶ ಶೆಟ್ಟರ್ ಪಕ್ಷ ತೊರೆದಿರುವುದರಿಂದ ಲೋಕಸಭಾ ಚುನಾವಣೆಯಲ್ಲಿ ಯಾವುದೇ ಪರಿಣಾಮ ಬೀರುವುದಿಲ್ಲ. ಇಂದಿರಾ ಗಾಂಧಿ ಕಾಲದಲ್ಲಿ ಏನಾಯಿತು? ಕಳೆದ ವಿಧಾನಸಭೆ ಚುನಾವಣೆಯಲ್ಲಿ ಏನಾಗಿದೆ? ಎಂದು ಎಲ್ಲರಿಗೂ ಗೊತ್ತು. 17 ಶಾಸಕರು ಪಕ್ಷ ಬಿಟ್ಟು ಹೋದರೂ ಏನಾಯಿತು? ವಿಧಾನಸಭೆ ಚುನಾವಣೆಯಲ್ಲಿ ನಾವು 135 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಲಿಲ್ಲವೇ ಎಂದು ಪ್ರಶ್ನಿಸಿದರು.
ಶಾಸಕ ಲಕ್ಷ್ಮಣ್ ಸವದಿ ಒಬ್ಬ ಜಂಟಲ್‌ಮನ್. ಅವರು ಪಕ್ಷ ಬಿಡುವುದಿಲ್ಲ ಎಂದಿದ್ದಾರೆ. ಈ ಮಾತಿಗೆ ಅವರು ಬದ್ಧರಾಗಿರುತ್ತಾರೆ ಎಂಬ ನಂಬಿಕೆ ಇದೆ ಎಂದರು.
ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ಸಂಸದ ಬಿ.ವೈ.ರಾಘವೇಂದ್ರ ಅವರನ್ನು ಮತ್ತೆ ಗೆಲ್ಲಿಸಿ ಎಂದು ಕಾಂಗ್ರೆಸ್‌ನ ಹಿರಿಯ ಶಾಮನೂರು ಶಿವಶಂಕರಪ್ಪ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ಅವರು ನಮ್ಮ ಪಕ್ಷದ ಹಿರಿಯ ನಾಯಕರು, ಆ ರೀತಿಯಲ್ಲಿ ಅವರು ಹೇಳಿರಲ್ಲ ಎಂದನಿಸುತ್ತದೆ. ಮಾಧ್ಯಮಗಳು ತಪ್ಪು ಗ್ರಹಿಕೆಯಿಂದ ಈ ರೀತಿ ಅರ್ಥೈಸಿರಬಹುದು. ನಾನು ಅವರ ಹೇಳಿಕೆಯನ್ನು ಗಮನಿಸಿ ನಂತರ ಮಾತನಾಡುತ್ತೇನೆ ಎಂದರು