ಬಿಜೆಪಿ ಅತೃಪ್ತರಿಗೆ ಜಗದೀಶ ಶೆಟ್ಟರ್ ಗಾಳ

Jagadish Shetter And Pradeep Shetter
Published on

ಪ್ರಕಾಶ ಎಸ್. ಶೇಟ್ ಹುಬ್ಬಳ್ಳಿ

ಶೆಟ್ಟರ್ ಕುಟುಂಬದ ಮತ್ತೊಂದು ಕುಡಿ ವಿಧಾನ ಪರಿಷತ್ ಸದಸ್ಯ ಪ್ರದೀಪ ಶೆಟ್ಟರ್ ಬಿಜೆಪಿ ವಿರುದ್ಧ ತಿರುಗಿ ಬಿದ್ದಿದ್ದಾರೆ. ಲೋಕಸಭೆ ಚುನಾವಣೆಗೂ ಮುನ್ನ ಈ ತೆರನಾಗಿ ಒಬ್ಬರಾದ ಮೇಲೊಬ್ಬರು ತಿರುಗಿ ಬೀಳುತ್ತಿರುವುದು ಜಿಲ್ಲಾ ಬಿಜೆಪಿಯಲ್ಲಿ ತಳಮಳ ಸೃಷ್ಟಿಸಿದರೆ, ಕೈ ಬಲ ಹೆಚ್ಚಿಸಿಕೊಳ್ಳಲು ಜಗದೀಶ ಶೆಟ್ಟರ್ ಅವರು ಬಿಜೆಪಿ ಅತೃಪ್ತರಿಗೆ ಗಾಳ ಹಾಕುತ್ತಿದ್ದಾರೆ.

ಕಳೆದ ವಿಧಾನಸಭೆ ಚುನಾವಣೆಯ ಹೊತ್ತಲ್ಲೇ ಪ್ರದೀಪ ಶೆಟ್ಟರ್ ಅವರು ಅಣ್ಣ ಜಗದೀಶ ಶೆಟ್ಟರ್ ಹಾದಿ ಹಿಡಿಯಬಹುದು ಎಂದು ನಿರೀಕ್ಷಿಸಲಾಗಿತ್ತು. ಆದರೆ, ತಾನು ಬಿಜೆಪಿಯ ನಿಷ್ಠಾವಂತ ಕಾರ್ಯಕರ್ತ, ಬಿಜೆಪಿ ಬಿಟ್ಟು ಹೋಗುವ ಪ್ರಶ್ನೆಯೇ ಇಲ್ಲ ಎಂದು ಪ್ರದೀಪ ಬಿಜೆಪಿಯಲ್ಲಿಯೇ ಉಳಿದಿದ್ದರು. ಸಕ್ರಿಯವಾಗಿ ಚುನಾವಣೆಯಲ್ಲಿ ತೊಡಗಿಸಿಕೊಳ್ಳದಿದ್ದರೂ ಮತಯಾಚನಾ ಸಭೆಯಲ್ಲಿ ಪ್ರದೀಪ ಶೆಟ್ಟರ್ ತಪ್ಪದೆ ಪಾಲ್ಗೊಳ್ಳುತ್ತಿದ್ದರು. ಆಗ ಬಿಜೆಪಿ ವಿರುದ್ಧ ಏನನ್ನೂ ಮಾತನಾಡದ ಪ್ರದೀಪ ಈಗ ಗುಟುರು ಹಾಕಿದ್ದಾರೆ. ಅಂದು ಬಿಜೆಪಿ ತೊರೆಯುವ ವೇಳೆ ಜಗದೀಶ ಶೆಟ್ಟರ್ ಅವರು ಮಾಡಿದ ಮಾತುಗಳನ್ನೇ ಪ್ರದೀಪ ಪುನರಾವರ್ತನೆ ಮಾಡಿರುವುದು ಅಚ್ಚರಿ ಮೂಡಿಸುವಂತೆ ಮಾಡಿದೆ. ಮುಂದಿನ ನಿರ್ಧಾರ ಏನು ಎನ್ನುವುದನ್ನು ಇದು ಸೂಚ್ಯವಾಗಿ ಹೇಳುತ್ತಿದೆ.

ಮುನೇನಕೊಪ್ಪ ನಂತರದಲ್ಲಿ

ಪ್ರದೀಪಗೂ ಮುನ್ನ ಬಿಜೆಪಿಯಲ್ಲಿನ ಬೆಳವಣಿಗೆಯ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದವರು ಮಾಜಿ ಸಚಿವ ಶಂಕರಪಾಟೀಲ ಮುನೇನಕೊಪ್ಪ. ಜಗದೀಶ ಶೆಟ್ಟರ್ ಅವರು ಮುಖ್ಯಮಂತ್ರಿ ಆಗಿದ್ದಾಗ ಮುನೇನಕೊಪ್ಪ ಮುಖ್ಯಮಂತ್ರಿಗಳ ಸಂಸದೀಯ ಕಾರ್ಯದರ್ಶಿಯಾಗಿದ್ದವರು. ಹಿಂದಿನ ಬಸವರಾಜ ಬೊಮ್ಮಾಯಿ ಸಂಪುಟದಲ್ಲಿ ಮುನೇನಕೊಪ್ಪ ಸಚಿವರಾಗುವಂತೆ ನೋಡಿಕೊಂಡವರು ಶೆಟ್ಟರ್. ಈ ಕಾರಣಕ್ಕಾಗಿಯೇ ಮುನೇನಕೊಪ್ಪ ಅವರು ಜಗದೀಶ ಶೆಟ್ಟರ್ ಅವರಿಗೆ ನಿಷ್ಠರಾಗಿರುವುದು ಸುಳ್ಳಲ್ಲ.

ವಿಧಾನಸಭೆ ಚುನಾವಣೆಯಲ್ಲಿ ಸೋತಿರುವ ಮುನೇನಕೊಪ್ಪ ಧಾರವಾಡ ಲೋಕಸಭೆ ಕ್ಷೇತ್ರದಿಂದ ಕಾಂಗ್ರೆಸ್ ಟಿಕೆಟ್ ಪಡೆಯುವ ಅಭಿಲಾಷೆ ಇಟ್ಟುಕೊಂಡು ಶೆಟ್ಟರ್ ಹಾದಿಯಲ್ಲಿ ಸಾಗಬಹುದು ಎನ್ನಲಾಗುತ್ತಿದೆ. ಸದ್ಯಕ್ಕೆ ತಾವು ಬಿಜೆಪಿ ಬಿಟ್ಟು ಹೋಗುವುದಿಲ್ಲವೆಂದು ಮುನೇನಕೊಪ್ಪ ಹೇಳಿಕೊಂಡಿದ್ದರೂ ಜನವರಿಯಲ್ಲಿ ಸೂಕ್ತ ನಿರ್ಧಾರ ಕೈಗೊಳ್ಳುವುದಾಗಿ ಪ್ರಕಟಿಸಿದ್ದಾರೆ. ತನ್ಮೂಲಕ ಕಾಂಗ್ರೆಸ್​ಗೆ ಸೇರುವ ಸೂಕ್ಷ್ಮ ಸುಳಿವು ನೀಡಿದ್ದಾರೆ. ಮುನೇನಕೊಪ್ಪ ಅವರೇ ಕಾಂಗ್ರೆಸ್ ಸೇರುವ ಅಪರೋಕ್ಷ ಸುಳಿವು ನೀಡಿರುವಾಗ ಪ್ರದೀಪ ಶೆಟ್ಟರ್ ಅವರು ಜಗದೀಶ ಶೆಟ್ಟರ್ ಅವರನ್ನು ಹಿಂಬಾಲಿಸದೆ ಇರುತ್ತಾರೆಯೇ ಎನ್ನುವ ಮಾತಿಗೆ ಈಗ ಪುಷ್ಟಿ ಬಂದಿದೆ.

ಗೊಂದಲ ಸೃಷ್ಟಿಸುವ ಉದ್ದೇಶ

ಧಾರವಾಡ ಸಂಸದ ಪ್ರಲ್ಹಾದ ಜೋಶಿ ಅವರು ಕ್ಷೇತ್ರ ಬದಲಾಯಿಸುತ್ತಾರೆ ಎನ್ನುವ ಸುದ್ದಿ ಹರಡಿತ್ತು. ಆದರೆ, ಕ್ಷೇತ್ರ ಬದಲಾಯಿಸುವ ಬಗ್ಗೆ ಪಕ್ಷದ ವೇದಿಕೆಯಲ್ಲಿ ಯಾವುದೇ ಚರ್ಚೆ ನಡೆದಿರಲಿಲ್ಲ, ಸ್ವತಃ ಜೋಶಿ ಇಂತಹ ಯಾವುದೇ ಇರಾದೆ ಹೊಂದಿಲ್ಲ. ಆದಾಗ್ಯೂ ವಿನಾಕಾರಣ ಇಂಥ ಸುದ್ದಿ ಹರಿಯಬಿಟ್ಟು ಗೊಂದಲ ಸೃಷ್ಟಿಸಲಾಗುತ್ತಿದೆ. ಇದರಿಂದ ಲಾಭ ಮಾಡಿಕೊಳ್ಳುವ ಉದ್ದೇಶ ಕೆಲವರಿಗೆ ಇರಬಹುದು ಎನ್ನುತ್ತಾರೆ ಶಾಸಕ ಮಹೇಶ ಟೆಂಗಿನಕಾಯಿ.

ಮಾಜಿ ಶಾಸಕರ ಸಂಪರ್ಕ

ಬಿಜೆಪಿಯ ಕೆಲ ಮುಖಂಡರನ್ನು ಕಾಂಗ್ರೆಸ್​ಗೆ ಸೆಳೆಯುವ ಪ್ರಯತ್ನವನ್ನು ಜಗದೀಶ ಶೆಟ್ಟರ್ ಬಳಗ ಮಾಡುತ್ತಿದೆ. ಅದರಲ್ಲೂ ಬಿಜೆಪಿ ಟಿಕೆಟ್ ವಂಚಿತ ಮಾಜಿ ಶಾಸಕರನ್ನು ಈಗಾಗಲೇ ಸಂರ್ಪಸಿದೆ ಎಂದು ತಿಳಿದು ಬಂದಿದೆ. ಈ ಪೈಕಿ ಬಿಜೆಪಿ ಟಿಕೆಟ್ ವಂಚಿತ ಶಿರಹಟ್ಟಿ ಮಾಜಿ ಶಾಸಕ ರಾಮಣ್ಣ ಲಮಾಣಿ, ಹಾವೇರಿ ಮಾಜಿ ಶಾಸಕ ನೆಹರು ಓಲೇಕಾರ, ಕುಂದಗೋಳದ ಮಾಜಿ ಶಾಸಕ ಎಸ್.ಐ. ಚಿಕ್ಕನಗೌಡರ ಹೆಸರು ಮುಂಚೂಣಿಯಲ್ಲಿದೆ.

ಬಿಜೆಪಿ ಕಾರ್ಯಕರ್ತರ ಪಕ್ಷ. ನಿಷ್ಠಾವಂತ ಕಾರ್ಯಕರ್ತರಿಗೆ ಮನ್ನಣೆ ಸಿಕ್ಕೇ ಸಿಗುತ್ತದೆ. ಲಿಂಗಾಯತರನ್ನು ಕಡೆಗಣಿಸಲಾಗಿದೆ ಎನ್ನುವ ಪ್ರದೀಪ ಶೆಟ್ಟರ್ ಆರೋಪದಲ್ಲಿ ಹುರುಳಿಲ್ಲ. ಬಕೆಟ್ ಹಿಡಿದವರಿಗೆ ಮಾತ್ರ ಆದ್ಯತೆ ಸಿಗುತ್ತದೆ ಎನ್ನುವುದು ಸರಿಯಲ್ಲ. ಹಾಗಿದ್ದರೆ ಜಗದೀಶ ಶೆಟ್ಟರ್ ಅವರನ್ನು ಪಕ್ಷ ಮುಖ್ಯಮಂತ್ರಿ ಮಾಡಿತ್ತಲ್ಲ, ಇದನ್ನು ಏನೆಂದು ವ್ಯಾಖ್ಯಾನಿಸಬೇಕು? -ಮಹೇಶ ಟೆಂಗಿನಕಾಯಿ ಶಾಸಕ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net