

ಯಲ್ಲಾಪುರ: ಉದ್ಯೋಗ, ಕುಟುಂಬ, ವಿವಾಹ ಎಲ್ಲ ತೊರೆದು ರಾಷ್ಟ್ರಕ್ಕಾಗಿ ತಮ್ಮ ಬದುಕು ಸಮರ್ಪಿಸಿದ ಜಗನ್ನಾಥರಾವ್ ಜೋಶಿಯವರ ಜೀವನ ಎಲ್ಲರಿಗೂ ಮಾದರಿಯಾಗಿದೆ ಎಂದು ಚಿಂತಕ ರೋಹಿತ್ ಚಕ್ರತೀರ್ಥ ಹೇಳಿದರು.
ಪಟ್ಟಣದ ವಿಶ್ವದರ್ಶನ ಸಂಸ್ಥೆಯ ಶ್ರೀಗಂಗಾಧರೇಂದ್ರ ಸರಸ್ವತೀ ಸಭಾಭವನದಲ್ಲಿ ವಿಶ್ವದರ್ಶನ ಶಿಕ್ಷಣ ಸಂಸ್ಥೆ ಮತ್ತು ಅಖಿಲ ಭಾರತೀಯ ಸಾಹಿತ್ಯ ಪರಿಷದ್ ತಾಲೂಕು ಘಟಕದ ಆಶ್ರಯದಲ್ಲಿ ಶನಿವಾರ ಆಯೋಜಿಸಿದ್ದ ರಾಷ್ಟ್ರನಮನ ಕಾರ್ಯಕ್ರಮದಲ್ಲಿ ಕವಿ ತಿಮ್ಮಣ್ಣ ಭಟ್ ವಿರಚಿತ ‘ಜಗನ್ನಾಥರಾವ್ ಜೋಷಿ’ ಕೃತಿ ಬಿಡುಗಡೆಗೊಳಿಸಿ ಅವರು ಮಾತನಾಡಿದರು. ಮಾಜಿ ಪ್ರಧಾನಿ ಅಟಲ್ಬಿಹಾರಿ ವಾಜಪೇಯಿ ಅವರಿಗೆ ಸಮನಾದ ವ್ಯಕ್ತಿತ್ವ ಹೊಂದಿದ್ದ ಜಗನ್ನಾಥರಾವ್ ಜೋಶಿ, ಅಧಿಕಾರಕ್ಕೇರದೆ ಇದ್ದರೂ ಶ್ರೇಷ್ಠ ವ್ಯಕ್ತಿತ್ವದಿಂದ ರಾಷ್ಟ್ರದ ಗಮನ ಸೆಳೆದಿದ್ದರು. ಅವರು ಕರ್ನಾಟಕದವರೆಂಬುದು ನಮಗೆ ಅಭಿಮಾನದ ಸಂಗತಿ. ಅವರ ವ್ಯಕ್ತಿತ್ವವನ್ನು ಪರಿಚಯಿಸುವ ಕೃತಿ ಎಲ್ಲರ ಬದುಕಿಗೆ ಮಾರ್ಗದರ್ಶಿಯಾಗಬೇಕು ಎಂದು ಹೇಳಿದರು.
ಸಾಹಿತಿ ವನರಾಗ ಶರ್ಮಾ ಅಧ್ಯಕ್ಷತೆ ವಹಿಸಿದ್ದರು. ಬಳಿಕ ನಡೆದ ಮಕ್ಕಳ ಕವಿಗೋಷ್ಠಿಯಲ್ಲಿ ಶಾಲೆಯ ವಿದ್ಯಾರ್ಥಿಗಳು ಕವನ ವಾಚಿಸಿದರು. ಸಂಸ್ಥೆಯ ಕಾರ್ಯದರ್ಶಿ ನರಸಿಂಹ ಕೋಣೆಮನೆ, ಶಿಕ್ಷಣ ಸಂಸ್ಥೆಯ ವ್ಯವಸ್ಥಾಪಕ ಅಜೇಯ ಭಾರತೀಯ, ಇಡಗುಂದಿ ವಿಶ್ವದರ್ಶನ ಪ್ರೌಢಶಾಲೆ ಮುಖ್ಯಾಧ್ಯಾಪಕ ಪ್ರಸನ್ನ ಹೆಗಡೆ, ಅಖಿಲ ಭಾರತೀಯ ಸಾಹಿತ್ಯ ಪರಿಷದ್ ತಾಲೂಕಾಧ್ಯಕ್ಷ ಗಣಪತಿ ಕಂಚಿಪಾಲ, ಕೃತಿಕಾರ ತಿಮ್ಮಣ್ಣ ಭಟ್ಟ ಇತರರಿದ್ದರು.