ರಾಜಕಾರಣಿಗಳಿಗೆ ಜಗನ್ನಾಥರಾವ್ ಜೋಶಿ ಆದರ್ಶ

Jagannathrao Joshi
Published on

ಅಕ್ಕಿಆಲೂರ: ದೇಶಭಕ್ತಿ, ರಾಷ್ಟ್ರೀಯತೆ ವಿಚಾರದಲ್ಲಿ ಇಂದಿನ ರಾಜಕಾರಣಿಗಳಿಗೆ ಜಗನ್ನಾಥ್ ರಾವ್ ಜೋಶಿ ಆದರ್ಶವಾಗಿದ್ದಾರೆ ಎಂದು ಜಿಪಂ ಮಾಜಿ ಸದಸ್ಯ ಮಾಲತೇಶ ಸೊಪ್ಪಿನ ಅಭಿಪ್ರಾಯ ವ್ಯಕ್ತಪಡಿಸಿದರು.

ಸ್ಥಳೀಯ ಚನ್ನವೀರೇಶ್ವರ ಪ್ರಸಾದ ನಿಲಯದಲ್ಲಿ ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ಶುಕ್ರವಾರ ಆಯೋಜಿಸಿದ್ದ ತಿಮ್ಮಪ್ಪ ಭಟ್ ರಚಿಸಿದ ಕರ್ನಾಟಕದ ಕೇಸರಿ ಜಗನ್ನಾಥ ರಾವ್ ಜೋಶಿ ಪುಸ್ತಕ ಬಿಡುಗಡೆ ಮಾಡಿ ಮಾತನಾಡಿದರು.

ಭಾರತದ ಯಾವುದೇ ರಂಗದಲ್ಲೂ ಕಾರ್ಯನಿರ್ವಹಿಸುವ ಪ್ರತಿಯೊಬ್ಬ ವ್ಯಕ್ತಿ ದೇಶಭಕ್ತಿ ಮತ್ತು ರಾಷ್ಟ್ರೀಯತೆಯನ್ನು ಜೀವಾಳವಾಗಿಸಿಕೊಳ್ಳಬೇಕು. ನೈತಿಕ ಹಾಗೂ ಬದ್ಧತೆ ನಮ್ಮ ವ್ಯಕ್ತಿತ್ವವನ್ನು ಆದರ್ಶಗೊಳಿಸುತ್ತದೆ. ಸಮಾಜ ಸೇವೆ ಎಲ್ಲರ ಕರ್ತವ್ಯ ಎಂದು ನಡೆದು ತೋರಿದ ಜಗನ್ನಾಥ ರಾವ್ ಜೋಶಿ, ಮೌಲ್ಯಯುತ ರಾಜಕಾರಣಕ್ಕೆ ನಾಂದಿ ಹಾಡಿದರು. ಅವರ ತತ್ವಾದರ್ಶವು ಸಿದ್ಧಾಂತ ಮತ್ತು ವೈಚಾರಿಕತೆಯ ಹೊರತಾಗಿ ಎಲ್ಲರಿಗೂ ಮಾದರಿ ಎಂದು ಹೇಳಿದರು.

ಕಸಾಪ ತಾಲೂಕು ಅಧ್ಯಕ್ಷ ಷಣ್ಮುಖಪ್ಪ ಮುಚ್ಚಂಡಿ ಮಾತನಾಡಿ, ಕನ್ನಡ ನಾಡಿನಲ್ಲಿ ಜನಿಸಿ, ತಮ್ಮ ವಿಚಾರ ಧಾರೆಗಳ ಮೂಲಕ ದೇಶಕ್ಕೆ ಪರಿಚಯವಾದ ಮಹಾನ್ ಚೇತನ ಜಗನ್ನಾಥ ರಾವ್ ಜೋಶಿ. ಅವರು ಎಲ್ಲ ಹಂತದ ರಾಜಕೀಯ ಅನುಭವ ಹೊಂದಿದ್ದರು. ಅವರ ವ್ಯಕ್ತಿತ್ವವನ್ನು ಇಂದಿನ ಯುವ ಸಮುದಾಯಕ್ಕೆ ಪರಿಚಯಿಸುವ ಕಾರ್ಯ ಮಾಡುತ್ತಿರುವುದು ಹೆಮ್ಮೆಯ ಸಂಗತಿ ಎಂದು ಹೇಳಿದರು.

ಸಾಮಾಜಿಕ ಕಾರ್ಯಕರ್ತ ಗುರುರಾಜ ಮಾತನಾಡಿದರು. ಅಕ್ಕಿಆಲೂರ ಹೋಬಳಿ ಕಸಾಪ ಅಧ್ಯಕ್ಷೆ ಶೋಭಾ ಪಾಟೀಲ, ನಾಗರಾಜ ಸಿಂಗಾಪುರ, ದೀಪಾ ವಿರೂಪಣ್ಣನವರ, ರಾಜು ಹೈಬತ್ತಿ ಇತರರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net