

ನರಗುಂದ: ಕರ್ನಾಟಕದಲ್ಲಿ ಜನಸಂಘ ಹಾಗೂ ಬಿಜೆಪಿಯನ್ನು ಕಟ್ಟಿ ಬೆಳೆಸುವಲ್ಲಿ ಅವಿರತವಾಗಿ ಶ್ರಮಿಸಿದ ನರಗುಂದದ ಜಗನ್ನಾಥರಾವ್ ಜೋಶಿಯವರ ದೇಶಾಭಿಮಾನ ಪ್ರತಿಯೊಬ್ಬರಿಗೂ ಪ್ರೇರಣಾದಾಯಕ ಎಂದು ಶಾಸಕ ಸಿ.ಸಿ. ಪಾಟೀಲ ಬಣ್ಣಿಸಿದರು.
ಪಟ್ಟಣದ ದಂಡಾಪೂರ ಬಡಾವಣೆಯ ಜಗನ್ನಾಥರಾವ್ ಜೋಶಿ ಸ್ಮಾರಕ ಭವನದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ದಿ.ಜಗನ್ನಾಥರಾವ್ ಜೋಶಿಯವರ ಜನ್ಮ ದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಸಮರ್ಪಣಾ ಭಾವದ ಜಗನ್ನಾಥ ಜೋಶಿಯವರು 1920 ಜೂ.23 ರಂದು ನರಗುಂದದಲ್ಲಿ ಜನಿಸಿದ್ದರು. ರಾಷ್ಟ್ರ ರಾಜಕಾರಣದಲ್ಲಿ ಕೆಲವು ದಶಕಗಳ ಕಾಲ ಸೇವೆ ಸಲ್ಲಿಸಿದ ಅವರು ಕರ್ನಾಟಕದ ಕೇಸರಿ ಎಂದೇ ಹೆಸರಾಗಿದ್ದರು.
ಅತ್ಯಂತ ಚಿಕ್ಕ ವಯಸ್ಸಿನಲ್ಲಿಯೇ ದೇಶಭಕ್ತಿ ಬೆಳೆಸಿಕೊಂಡು ದೇಶಸೇವೆಯ ಕಾರ್ಯದಲ್ಲಿ ತೊಡಗಿಸಿಕೊಳ್ಳಲು ಅಣಿಯಾದರು. ವಾಕ್ ಸಿದ್ಧಿಗೆ ಹೆಸರಾಗಿದ್ದ ಜೋಶಿಯವರ ಸಮಾಜ ಸೇವೆ ಸ್ಮರಣೀಯವಾದದ್ದು.
ದೇಶ ಭಕ್ತರಾಗಿ ನರಗುಂದದ ಹಿರಿಮೆಯನ್ನು ಇಡೀ ಜಗತ್ತಿಗೆ ಪ್ರಸರಿಸಿದ್ದಾರೆ. ಇಂತಹ ಮಹಾನ್ ಪುರುಷರ ಸಾಮಾಜಿಕ ಚಿಂತನೆ, ಜೀವನಾದರ್ಶ, ಹೋರಾಟದ ಮನೋಭಾವನೆಗಳು ಇಂದಿನ ಯುವಕರಿಗೆ ಪ್ರೇರಣೆಯಾಗಬೇಕು ಎಂದು ತಿಳಿಸಿದರು.
ಚಂಬಣ್ಣ ವಾಳದ, ಜಿ.ಟಿ. ಗುಡಿಸಾಗರ, ಬಿಜೆಪಿ ನರಗುಂದ ಮಂಡಲ ಅಧ್ಯಕ್ಷ ಅಜ್ಜನಗೌಡ ಪಾಟೀಲ, ಸಿದ್ದನಗೌಡ ಪಾಟೀಲ, ಸಂಗಣ್ಣ ಕಳಸಾ, ಪ್ರಶಾಂತ ಜೋಶಿ, ರಾಚನಗೌಡ ಪಾಟೀಲ, ಪವಾಡೆಪ್ಪ ವಡ್ಡಿಗೇರಿ, ಸಿದ್ದೇಶ ಹೂಗಾರ, ಈರಣ್ಣ ಹೊಂಗಲ್, ಶಂಕರಗೌಡ ಪಾಟೀಲ, ನಾಗರಾಜ ಚಿತ್ರಗಾರ, ಕಾರ್ತಿಕ್ ಚೌಧರಿ, ಶರಣಪ್ಪ ನವಲಗುಂದ, ಸುರೇಶ ಪೂಜಾರ, ರಾಮಚಂದ್ರ ಪವಾರ, ಪ್ರವೀಣ ಸುಬೇದಾರ, ಪ್ರವೀಣ ಪವಾರ, ನಾಗರಾಜ ದಿವಾಕರ್, ಕುಮಾರ ಬೆಳವಟಗಿ, ಸುರೇಶ ಹುದ್ದಾರ ಇತರರಿದ್ದರು.