

ಚಿಟಗುಪ್ಪ: ದೇಶದ ಸಾಂಸ್ಕೃತಿಕ ರಾಯಭಾರಿಯಾಗಿರುವ ವಿಶ್ವಕರ್ಮರ ಕೊಡುಗೆ ಅತ್ಯಮೂಲ್ಯವಾಗಿದೆ ಎಂದು ಯಾದಗಿರಿ ಆನೆಗುಂದಿ ಮಹಾಸಂಸ್ಥಾನ ಸರಸ್ವತಿ ಪೀಠ ವಿಶ್ವಕರ್ಮ ಏಕದಂಡಿಗಿ ಮಠದ ಶ್ರೀ ಶ್ರೀನಿವಾಸ ಮಹಾಸ್ವಾಮೀಜಿ ನುಡಿದರು.
ಮೀನಕೇರಾ ಗ್ರಾಮದ ಜಗದ್ಗುರು ಮೌನೇಶ್ವರ, ಹಿರೋಡೇಶ್ವರ ಮಂದಿರದಲ್ಲಿ ಜಾತ್ರೋತ್ಸವ ನಿಮಿತ್ತ ಶುಕ್ರವಾರ ಜಗನ್ಮಾತೆ ಕಾಳಿಕಾದೇವಿ ಪಲ್ಲಕ್ಕಿ ಉತ್ಸವ, ಸಾಮೂಹಿಕ ಉಪನಯನ ಮತ್ತು ಪುರಾಣ ಪ್ರವಚನ ಕಾರ್ಯಕ್ರಮ ಉದ್ಘಾಟಿಸಿದ ಅವರು, ಅಮರಶಿಲ್ಪಿ ಜಕಣಾಚಾರ್ಯ ಸೇರಿ ಅನೇಕ ಮಹಾನ್ ಶಿಲ್ಪಾಚಾರ್ಯರು ತಮ್ಮ ಕಲಾ ಕೌಶಲದ ಮೂಕ ಅದ್ಭುತವಾದ ಶಿಲ್ಪಗಳನ್ನು ರಚಿಸಿದ್ದಾರೆ. ಇವುಗಳನ್ನು ನೋಡಲು ದೇಶ ವಿದೇಶಗಳಿಂದ ಅಸಂಖ್ಯ ಪ್ರವಾಸಿಗರು ಆಗಮಿಸುತ್ತಿದ್ದು, ಆದಾಯವೂ ಹರಿದು ಬರುತ್ತಿದೆ. ಆದರೆ ನಮ್ಮ ಶಿಲ್ಪಿಗಳು ಮತ್ತು ವಿಶ್ವಕರ್ಮ ಸಮಾಜವನ್ನು ಮಾತ್ರ ಯಾರೂ ಪರಿಗಣಿಸುವುದಿಲ್ಲ ಎಂಬ ನೋವಿದೆ ಎಂದರು.
ವಿಶ್ವಕರ್ಮರು ವೈದಿಕ ಪದ್ಧತಿಯೊಂದಿಗೆ ಪಂಚಕಸುಬುಗಳನ್ನು ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಶ್ರಮಿಸಬೇಕು. ಭಾನುವಾರ ವಿಶ್ವಕರ್ಮ ಬ್ರಾಹ್ಮಣ ಸಮಾಜದ ವಟುಗಳಿಗೆ ಉಪನಯನ ಆಯೋಜಿಸಿದ್ದು, ಸಮಾಜದವರು ಸದುಪಯೋಗ ಪಡೆದುಕೊಳ್ಳಬೇಕು ಎಂದು ಸಲಹೆ ನೀಡಿದರು.
ಧನಾಶ್ರೀ ಭವಾನಿ ಮಂದಿರದ ಮಾತೋಶ್ರೀ ಶಶಿಕಲಾ ಅವರು ಸಾವಿರ ದೀಪೋತ್ಸವಕ್ಕೆ ಚಾಲನೆ ನೀಡಿದರು. ಸಾಹಿತಿ ಕಾಶೀನಾಥ ನೀಲಾ ಮಾತನಾಡಿದರು. ಉದ್ಯಮಿ ವಿನೋದಕುಮಾರ ಟೆಂಗಳಿ, ವಿನೋದ ಮುತ್ಯಾ, ವೀರುಪಾಕ್ಷಯ್ಯ ಸ್ವಾಮಿ ಸ್ವಂತ, ಶರಣಕುಮಾರ, ಕೃಷ್ಣ ಮಳಸಾಪುರ ಇತರರಿದ್ದರು.