ಜಗಳೂರಲ್ಲಿ ಮತದಾನ ಜಾಗೃತಿ ಪಥ ಸಂಚಲನ

Jagaluru, Voting, Awareness,
Published on

ಜಗಳೂರು: ಜಗಳೂರು ಠಾಣೆಯ ಪೊಲೀಸರು, ರೈಲ್ವೆ ಪ್ರೊಟೆಕ್ಷನ್ ಕಮಾಂಡೊ ಫೋರ್ಸ್‌ ನೇತೃತ್ವದ ತಂಡದವರು ಬುಧವಾರ ತಾಲೂಕಿನ ವಿವಿಧ ಗ್ರಾಮಗಳಲ್ಲಿ ಸಂಚಲನ ನಡೆಸಿ, ನಿರ್ಭೀತ ಮತದಾನದ ಬಗ್ಗೆ ಜಾಗೃತಿ ಮೂಡಿಸಿದರು.

ತಾಲೂಕಿನ ಬಿದರಕೆರೆ, ಬಿಸ್ತುವಳ್ಳಿ, ಬುಳ್ಳೇನಹಳ್ಳಿ, ಜಗಳೂರು ಪಟ್ಟಣದ ಅಂಬೇಡ್ಕರ್ ವೃತ್ತದಿಂದ ಮುಸ್ಲಿಂ ಕಾಲನಿ, ಸಾರ್ವಜನಿಕ ಆಸ್ಪತ್ರೆಯ ಮುಖ್ಯರಸ್ತೆ, ಗಾಂಧಿವೃತ್ತ ಮಾರ್ಗವಾಗಿ ಜಗಳೂರು- ದಾವಣಗೆರೆ ರಸ್ತೆಯಲ್ಲಿ ಪಥ ಸಂಚಲನ ನಡೆಸಿದರು.

ನಂತರ ದೊಣೆಹಳ್ಳಿ, ಮುಸ್ಟೂರು, ಸಿದ್ದಿಹಳ್ಳಿ, ಸೊಕ್ಕೆ, ಗಡಿಮಾಕುಂಟೆ, ಗೌರಿಪುರ ಗ್ರಾಮಗಳಲ್ಲಿ ಪೊಲೀಸರು, ರೈಲ್ವೆ ಪ್ರೊಟೆಕ್ಷನ್ ಫೋರ್ಸ್‌ ಸಿಬ್ಬಂದಿ ಜನರಲ್ಲಿ ಅರಿವು ಮೂಡಿಸಿದರು.

ಪಿಐ ಡಿ. ಶ್ರೀನಿವಾಸ್ ರಾವ್ ಮಾತನಾಡಿ, ಮತದಾನ ಸಂವಿಧಾನದತ್ತ ಹಕ್ಕು. ಆದರೆ, ಈ ವೇಳೆ ಮತದಾರರು ಯಾವುದೇ ಗಲಭೆ, ಗಲಾಟೆ, ಗೊಂದಲಗಳಿಗೆ ಅವಕಾಶ ನೀಡದೇ ನಿರ್ಭೀತಿಯಿಂದ ಮತದಾನ ಮಾಡಬೇಕು. ಪಕ್ಷದ ಆಸೆ, ಆಮಿಷಗಳಿಗೆ ಮತ ಮಾರಾಟ ಮಾಡಿಕೊಳ್ಳುವುದು ಕಾನೂನು ಬಾಹಿರ ಚಟುವಟಿಕೆ ಆಗಿದೆ. ಹಾಗಾಗಿ, ಹಕ್ಕು ಚಲಾಯಿಸುವುದು ನಿಮ್ಮ ಕರ್ತವ್ಯ ಎಂದರು.

ಚುನಾವಣೆ ಸಂದರ್ಭದಲ್ಲಿ ಅಕ್ರಮ ಚಟುವಟಿಕೆಗಳು ಕಂಡುಬಂದರೆ ಅಥವಾ ಏನಾದರೂ ಸಮಸ್ಯೆಗಳಿದ್ದರೆ ತಕ್ಷಣವೇ ಪೊಲೀಸ್ ಇಲಾಖೆಯ 112 ಟೋಲ್ ಫ್ರೀ ಸಂಖ್ಯೆಗೆ ಕರೆ ಮಾಡುವಂತೆ ಮನವಿ ಮಾಡಿದರು. ಪಿಎಸ್‌ಐಗಳಾದ ಡಿ.ಎಸ್.ಸಾಗರ್, ಆಶಾ, ಆರ್‌ಪಿಎಫ್ ನೇತೃತ್ವ ವಹಿಸಿದ್ದ ಮೇಘರಾಜ್ ಸೇರಿದಂತೆ 70ಕ್ಕೂ ಹೆಚ್ಚು ಸಿಬ್ಬಂದಿ ಪಾಲ್ಗೊಂಡಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net