ಗ್ರಾಮೀಣ ಪ್ರತಿಭೆ ಉತ್ತೇಜಿಸಲು ಆದ್ಯತೆ

Jagaluru, Volleyball, Sports,
Published on

ಡಾ. ಯತೀಶದ ಕರ್ಪಣ್ಣನವರ್ ಹೇಳಿಕೆ I ಅಸಗೋಡಲ್ಲಿ ವಾಲಿಬಾಲ್ ಪಂದ್ಯಾವಳಿಗೆ ಚಾಲನೆ

ಜಗಳೂರು: ಗ್ರಾಮೀಣ ಭಾಗದ ಪ್ರತಿಭಾವಂತ ಕ್ರೀಡಾಪಟುಗಳನ್ನು ಉತ್ತೇಜಿಸಲು ವಾಲಿವಾಲ್ ಪಂದ್ಯಾವಳಿ ಆಯೋಜಿಸಲಾಗಿದೆ ಎಂದು ಡಾ. ಯತೀಶದ ಕರ್ಪಣ್ಣನವರ್ ಹೇಳಿದರು.

ಡಾ. ದಿ. ಕೆ.ಎಚ್ ಹನುಮಂತಪ್ಪ ಅವರ 2ನೇ ವರ್ಷದ ಪುಣ್ಯಸ್ಮರಣೆ ಹಾಗೂ ದಸರಾ ಹಬ್ಬದ ಪ್ರಯುಕ್ತ ತಾಲೂಕಿನ ಅಸಗೋಡು ಗ್ರಾಮದ ಸರ್ಕಾರಿ ಶಾಲಾ ಆವರಣದಲ್ಲಿ ಗುರುವಾರ ಆಯೋಜಿಸಿದ್ದ ವಾಲಿಬಾಲ್ ಪಂದ್ಯಾವಳಿಗೆ ಚಾಲನೆ ನೀಡಿ ಮಾತನಾಡಿದರು.

ಹಳ್ಳಿಗರಲ್ಲಿ ಕ್ರೀಡಾಸಕ್ತಿ ಹೆಚ್ಚಾಗಿರುತ್ತದೆ. ಆದರೆ, ಅವರಿಗೆ ಸೂಕ್ತ ವೇದಿಕೆ ಸಿಗುತ್ತಿಲ್ಲ. ಅಸಗೋಡು ಗ್ರಾಪಂ ವ್ಯಾಪ್ತಿಯ ಗ್ರಾಮೀಣ ಕ್ರೀಡಾಪಟುಗಳು ಆಡಲು ಅವಕಾಶ ನೀಡಿದೆ. ಇಲ್ಲಿ ಉತ್ತಮ ಪ್ರದರ್ಶನ ನೀಡಿ ಗೆದ್ದವರಿಗೆ ಬಹುಮಾನ ನೀಡಲಾಗುತ್ತದೆ. ಪ್ರತಿ ಆಟಗಾರರು ನ್ಯಾಯಯುತವಾಗಿ ಆಡಬೇಕು ಎಂದು ಸಲಹೆ ನೀಡಿದರು.

ನಮ್ಮ ತಂದೆ ಡಾ. ಹನುಮಂತಪ್ಪ ಅಸಗೋಡು ಗ್ರಾಮದಲ್ಲಿ ಅಂದಾಜು 40 ವರ್ಷ ಸೇವೆ ಮಾಡಿ ಜನಮಾನಸದಲ್ಲಿ ಉಳಿದಿದ್ದಾರೆ. ಅವರ ನೆನಪಿಗಾಗಿ ಪ್ರತಿ ವರ್ಷ ಕ್ರೀಡಾಕೂಟ ಆಯೋಜಿಸಲಾಗುವುದು. ಮುಂದಿನ ವರ್ಷ ಹೆಣ್ಣು ಮಕ್ಕಳಿಗೆ ರಂಗೋಲಿ ಸ್ಪರ್ಧೆ ಏರ್ಪಡಿಸಲಾಗುವುದು ಎಂದರು.

ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ರವಿಕುಮಾರ್ ಮಾತನಾಡಿ, ಅಸಗೋಡು ಗ್ರಾಮ ಜಗಳೂರು ಮತ್ತು ದಾವಣಗೆರೆ ತುಂಬ ದೂರವಿದ್ದು, ಸಣ್ಣ ಪುಟ್ಟ ರೋಗಗಳಿಗೆ ಓಡಾಡುವುದು ತುಂಬ ಕಷ್ಟವಿತ್ತು. ಅಂತಹ ಸಂದರ್ಭದಲ್ಲಿ ಡಾ. ಹನುಮಂತಪ್ಪ ಅವರು ಕ್ಲಿನಿಕ್ ತೆರೆದು ಕಡಿಮೆ ಬೆಲೆಯಲ್ಲಿ ಚಿಕಿತ್ಸೆ ನೀಡಿ ಬಡವರ ಸೇವೆ ಮಾಡಿದ್ದಾರೆ. ಅವರು ಅಗಲಿರುವುದು ಗ್ರಾಮಕ್ಕೆ ತುಂಬಲಾರದ ನಷ್ಟವಾಗಿದೆ. ಅವರ ಹೆಸರಲ್ಲಿ ಕುಟುಂಬಸ್ಥರು ಕ್ರೀಡೆ ನಡೆಸುತ್ತಿದ್ದಾರೆ. ಇದಕ್ಕೆ ಇಡೀ ಗ್ರಾಮವೇ ಸಂಪೂರ್ಣ ಬೆಂಬಲ ನೀಡಿದೆ ಎಂದರು.

ಡಾ. ಯತೀಶದ ಕರ್ಪಣ್ಣನವರ್ 6 ತಂಡಗಳ ಆಟಗಾರರಿಗೆ ಟಿಶರ್ಟ್ ವಿತರಿಸಿದರು. ದಿ. ಡಾ. ಹನುಮಂತಪ್ಪ ಅವರ ಪತ್ನಿ ರೇಣುಕಾ ಕ್ರೀಡಾಕೂಟಕ್ಕೆ ಚಾಲನೆ ನೀಡಿದರು. ರೇವಣಸಿದ್ದಪ್ಪ, ಮಹಾಲಿಂಗಪ್ಪ, ವಿರೂಪಾಕ್ಷಿ, ಕಿರಣ್‌ಕುಮಾರ್, ಶಿವು ಮತ್ತಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net