ಇ-ಪೌತಿ ಖಾತಾ ಆಂದೋಲನ ಕೈಬಿಡಲು ಆಗ್ರಹ

12 JLR 2
Published on

ಜಗಳೂರು: ಗ್ರಾಮ ಆಡಳಿತ ಅಧಿಕಾರಿಗಳ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಮಂಗಳವಾರ ರಾಜ್ಯ ಗ್ರಾಮ ಆಡಳಿತ ಅಧಿಕಾರಿಗಳ ಕೇಂದ್ರ ಸಂಘದಿಂದ ತಾಲೂಕು ಕಚೇರಿ ಮುಂಭಾಗ ಎರಡನೇ ಹಂತದ ಅನಿರ್ದಿಷ್ಟಾವಧಿ ಮುಷ್ಕರ ನಡೆಸಲಾಯಿತು.

ಪಟ್ಟಣದ ತಾಲೂಕು ಕಚೇರಿ ಮುಂಭಾಗದ ಕುವೆಂಪು ಪುತ್ಥಳಿ ಬಳಿ ಡಾ.ಬಿ.ಆರ್ ಅಂಬೇಡ್ಕರ್, ಮಹಾತ್ಮ ಗಾಂಧಿ ಅವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಮುಷ್ಕರ ಆರಂಭಿಸಿದರು.

ಒಂದನೇ ಹಂತದ ಮುಷ್ಕರದಲ್ಲಿ ಸರ್ಕಾರ ಯಾವುದೇ ಬೇಡಿಕೆ ಈಡೇರಿಸದ ಹಿನ್ನೆಲೆಯಲ್ಲಿ 2 ನೇ ಹಂತದ ಹೋರಾಟ ಆರಂಭಿಸಲಾಗಿದೆ. ಕೆಲಸದ ಸ್ಥಳದಲ್ಲಿ ಮೂಲ ಸೌಲಭ್ಯ ಒದಗಿಸುವಂತೆ ಮತ್ತು ಸೇವಾ ವಿಷಯಗಳ ಗೊಂದಲ ಪರಿಹರಿಸುವಂತೆ ಅಧಿಕಾರಿಗಳು ಸರ್ಕಾರವನ್ನು ಆಗ್ರಹಿಸಿದರು.

ಸರ್ಕಾರ ಬೇಡಿಕೆಗಳ ವಿಚಾರವಾಗಿ ಯಾವುದೇ ತೃಪ್ತಿಕರ ಕ್ರಮ ಕೈಗೊಂಡಿಲ್ಲ. ಮುಷ್ಕರದ ಮೊದಲಿಗಿಂತ ಈಗ ಹೆಚ್ಚಿನ ಕಾರ್ಯದ ಒತ್ತಡ ಉಂಟಾಗಿದೆ. ಆದ್ದರಿಂದ ರಾಜ್ಯವ್ಯಾಪಿ ಸೇವೆಗೆ ರಜೆ ನೀಡಿ ಮುಷ್ಕರ ಹಮ್ಮಿಕೊಳ್ಳಲಾಗಿದೆ ಎಂದು ಸಂಘದ ತಾಲೂಕು ಅಧ್ಯಕ್ಷ ಅರುಣ್​ಕುಮಾರ್ ತಿಳಿಸಿದರು.

ಇ-ಪೌತಿ ಖಾತಾ ಆಂದೋಲನ ಕೈಬಿಡಬೇಕು, ಅಂತರ್ ಜಿಲ್ಲಾ ವರ್ಗಾವಣೆಗಾಗಿ ವಿಶೇಷ ಮಾರ್ಗಸೂಚಿ ರೂಪಿಸಬೇಕು, ಸುಸಜ್ಜಿತ ಕಚೇರಿ ಸಹಿತ ಮೂಲ ಸೌಲಭ್ಯ ಕಲ್ಪಿಸಬೇಕು, ನ್ಯಾಯಾಲಯ ಪ್ರಕರಣದ ಹಿನ್ನೆಲೆಯಲ್ಲಿ ಕಳೆದ 4 ವರ್ಷಗಳಿಂದ ಬಡ್ತಿ ತಡೆಹಿಡಿಯಲಾಗಿದೆ, ಸರ್ಕಾರ ಪ್ರಕರಣ ಇತ್ಯರ್ಥ ಮಾಡಿ ಬಡ್ತಿಗೆ ಅವಕಾಶ ಮಾಡಿಕೊಡಬೇಕು, ಗ್ರಾಮ ಆಡಳಿತಾಧಿಕಾರಿಗಳದು ತಾಂತ್ರಿಕ ಹುದ್ದೆ ಎಂದು ಪರಿಗಣಿಸಬೇಕು ಎಂದು ಒತ್ತಾಯಿಸಿದರು.

ಸಂಘದ ಕಾರ್ಯದರ್ಶಿ ಮಹೇಶ್, ಸಂಘಟನಾ ಕಾರ್ಯದರ್ಶಿ ಮಲ್ಲಿಕಾರ್ಜುನ್, ಖಜಾಂಚಿ ಮಧುಸೂದನ್, ಸೊಕ್ಕೆ ದುರುಗೇಶ್, ಆರ್.ಐ. ಧನಂಜಯ್, ಕೀರ್ತಿಕುಮಾರ್, ಆಡಳಿತಾಧಿಕಾರಿಗಳಾದ ಪ್ರದೀಪ್ ನಾಯಕ, ದಿಲೀಪ್​ಕುಮಾರ್, ಬಸಪ್ಪಗೌಡರ್, ಸರ್ವಶ್ರೀ, ಕೀರ್ತಿಕುಮಾರಿ, ನೇತ್ರಾವತಿ, ಶ್ವೇತಾ ದಸಂಸ ಮುಖಂಡ ಗೌರಿಪುರ ಸತ್ಯಮೂರ್ತಿ ಮತ್ತಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net