ಜಗಳೂರಲ್ಲಿ ಸುಗಮ ಸಂಚಾರದ್ದೇ ದೊಡ್ಡ ಗೋಳು

jagaluru traffic problem
Published on

ಲೋಕೇಶ್ ಎಂ. ಐಹೊಳೆ ಜಗಳೂರು: ಜಗಳೂರು ಪಟ್ಟಣ ಭೌತಿಕವಾಗಿ ದಿನೇದಿನೆ ಬೆಳೆದರೂ ಅದಕ್ಕೆ ಪೂರಕವಾಗಿ ಕಿರಿದಾದ ರಸ್ತೆಗಳ ವಿಸ್ತರಣೆ ಸೇರಿ ಇತರ ಮೂಲ ಸೌಲಭ್ಯ ಕಲ್ಪಿಸದ ಕಾರಣ ಸುಗಮ ಸಂಚಾರಕ್ಕೆ ತಲೆನೋವಾಗಿದೆ.

ಒಂದೆಡೆ ಕಿರಿದಾದ ಹಾಗೂ ಹದಗೆಟ್ಟ ರಸ್ತೆಗಳು, ಇನ್ನೊಂದೆಡೆ ಸಂಚಾರ ನಿಯ ಮ ಗಾಳಿಗೆ ತೂರಿ ಎಲ್ಲೆಂದರಲ್ಲಿ ವಾಹನಗಳನ್ನು ನಿಲುಗಡೆ ಮಾಡುವುದರಿಂದ ಟ್ರಾಫಿಕ್ ಸಮಸ್ಯೆಗೆ ಪರಿಹಾರ ಸಿಗುತ್ತಿಲ್ಲ.

ಜಗಳೂರಿನ ಯಾವುದೇ ಭಾಗಕ್ಕೆ ಸಂಚರಿಸಿದರೂ ಟ್ರಾಫಿಕ್ ಸಮಸ್ಯೆಯ ತೀವ್ರತೆ ಅನುಭವಕ್ಕೆ ಬರುತ್ತದೆ. ಹೆಸರಿಗೆ ಮಾತ್ರ ಪಟ್ಟಣ ಪಂಚಾಯಿತಿ ಇದೆ. ಆದರೆ, ಮೂಲ ಸೌಕರ್ಯಗಳ ವಿಚಾರಕ್ಕೆ ಬಂದಾಗ ನಿರೀಕ್ಷಿತ ಮಟ್ಟದಲ್ಲಿ ಬೆಳವಣಿಗೆ ಕಂಡಿಲ್ಲ.

ಇಲ್ಲಿನ ಮಹಾತ್ಮಗಾಂಧಿ ಹಳೇ ವೃತ್ತ, ಮರೇನಹಳ್ಳಿ ರಸ್ತೆ, ನೆಹರು ರಸ್ತೆಯ ಎಸ್ ಬಿಎಂ ಬ್ಯಾಂಕ್, ಆಸ್ಪತ್ರೆಯ ರಸ್ತೆ, ಪ್ರವಾಸಿ ಮಂದಿರ ರಸ್ತೆ, ತಾಲೂಕು ಕಚೇರಿ ಅಂಬೇಡ್ಕರ್ ವೃತ್ತ ಸೇರಿ ಹಲವು ಕಡೆ ರಸ್ತೆಯ ಇಕ್ಕಲೆಗಳಲ್ಲಿ ವಾಹನಗಳು ಅಡ್ಡಾದಿಡ್ಡಿಯಾಗಿ ನಿಂತಿರುತ್ತವೆ.

ತರಕಾರಿ ಮಾರುಕಟ್ಟೆ, ಅಂಗಡಿ, ಬ್ಯಾಂಕ್, ಕಾಂಪ್ಲೆಕ್ಸ್‌ಗಳ ಮುಂದೆ ನಿಲುಗಡೆಗೆ ನಿರ್ದಿಷ್ಟ ನಾಮಫಲಕ ಹಾಕದ ಕಾರಣ ಅಲ್ಲಿ ಕೂಡ ಮನಸೋಇಚ್ಛೆ ವಾಹನಗಳನ್ನು ನಿಲ್ಲಿಸಲಾಗುತ್ತಿದೆ.

ಬಹುಮಹಡಿ ವಾಣಿಜ್ಯ ಕಟ್ಟಡಗಳ ನಿರ್ಮಾಣ ಸಂದರ್ಭ ಅಲ್ಲಿ ವಾಹನ ನಿಲುಗಡೆಗೆ ಸೂಕ್ತ ವ್ಯವಸ್ಥೆ ಕಲ್ಪಿಸಬೇಕಾದದ್ದು ಕಟ್ಟಡ ಮಾಲೀಕರ ಜವಾಬ್ದಾರಿ. ಆದರೆ, ಈ ನೀತಿ ಇಲ್ಲಿ ಪಾಲನೆಯಾಗುತ್ತಿಲ್ಲ ಎನ್ನುತ್ತಾರೆ ಅಲ್ಲಿನ ನಿವಾಸಿ ತಿಪ್ಪೇಸ್ವಾಮಿ.

ನಿತ್ಯ ಸಾವಿರಕ್ಕೂ ಅಧಿಕ ಆಟೋ ಸಂಚರಿಸುತ್ತವೆ. ದಿನೇದಿನೆ ವಾಹನಗಳ ಸಂಖ್ಯೆ ದುಪ್ಪಟ್ಟಾಗುತ್ತಿದೆ. ಮಳೆಗಾಲ ಆರಂಭವಾಗಿದ್ದರಿಂದ ಅಪೂರ್ಣಗೊಂಡ ರಸ್ತೆಗಳು ಕೊಚ್ಚೆ ಗುಂಡಿಗಳಾಗಿ ಸಂಚಾರಕ್ಕೆ ಮತ್ತಷ್ಟು ಸಂಚಾಕಾರ ತಂದಿವೆ.

ರಸ್ತೆ ಬದಿ ಮಾತ್ರವಲ್ಲದೇ ಜನರು ಓಡಾಡುವ ಪಾದಚಾರಿ ರಸ್ತೆಗಳ ಮೇಲೂ ವಾಹನಗಳನ್ನು ನಿಲ್ಲಿಸುತ್ತಿರುವುದರಿಂದ ಜನ ಸಂಚಾರಕ್ಕೂ ಅಡಚಣೆ ಉಂಟಾಗುತ್ತಿದೆ. ಸಂಬಂಧಿಸಿದ ಅಧಿಕಾರಿಗಳು ಮಾತ್ರ ಮೌನಕ್ಕೆ ಶರಣಾಗಿದ್ದಾರೆ ಎನ್ನುತ್ತಾರೆ ಕಾನನಕಟ್ಟೆ ಪ್ರಭು.

ಪೊಲೀಸರಿಗೆ ಎಚ್ಚರಿಕೆ ನೀಡಿದ್ದ ಶಾಸಕರು: ಶಾಸಕರಾಗಿ ಚಿಕ್ಕಮ್ಮನಹಟ್ಟಿ ಬಿ. ದೇವೇಂದ್ರಪ್ಪ ಆಯ್ಕೆಯಾದ ನಂತರ ಕರೆದಿದ್ದ ಮೊದಲ ಕೆಡಿಪಿ ಸಭೆಯಲ್ಲಿ ಟ್ರಾಫಿಕ್, ಅಪರಾಧ ಪ್ರಕರಣಗಳ ಬಗ್ಗೆ ಸಲಹೆ ನೀಡಿ ಪೊಲೀಸರಿಗೆ ಎಚ್ಚರಿಕೆ ನೀಡಿದ್ದರು. ಆದರೂ ಈವರೆಗೂ ಯಾವ ನಿಯಮಗಳು ಪಾಲನೆಯಾಗಿಲ್ಲ.

ನೆಪ ಮಾತ್ರಕ್ಕೆ ಸಿಸಿ ಕ್ಯಾಮೆರಾ: ಮಹಾತ್ಮಗಾಂಧಿ ಹಳೇ ವೃತ್ತ, ಡಾ.ಬಿ.ಆರ್. ಅಂಬೇಡ್ಕರ್ ವೃತ್ತ ಸೇರಿ 18 ಕಡೆಗಳಲ್ಲಿ ಪೊಲೀಸ್ ಇಲಾಖೆಯಿಂದ ಸಿಸಿ ಕ್ಯಾಮೆರಾ ಅಳವಡಿಸಲಾಗಿದೆ. ಆದರೆ, ಅವುಗಳಲ್ಲಿ ಬಹುತೇಕವು ಕೆಲಸ ಮಾಡುತ್ತಿಲ್ಲ.

ರಸ್ತೆ ವಿಭಜನೆ, ಸಂಚಾರಿ ವ್ಯವಸ್ಥೆ, ನಿಲುಗಡೆ ಸೇರಿ ಸಾಕಷ್ಟು ಸಮಸ್ಯೆಗಳಿವೆ. ಪಾದಚಾರಿ ರಸ್ತೆಗಳು ಒತ್ತುವರಿಯಾಗಿ ಓಡಾಡುವುದು ಕಷ್ಟವಾಗಿದೆ. ಹಿಂದಿನ ಯಾವ ಶಾಸಕರು ಈ ಬಗ್ಗೆ ಗಮನಹರಿಸಲಿಲ್ಲ. ಈಗಿನ ಶಾಸಕರು ಗಮನಹರಿಸಿ ಸುರಕ್ಷಿತ ಸಂಚಾರಕ್ಕೆ ಅವಕಾಶ ಮಾಡಿಕೊಡಬೇಕು.
l ಮಹಾಲಿಂಗಪ್ಪ ಹೋರಾಟಗಾರ

ತಾಲೂಕಿನ ವಾಹನ, ಜನಸಂಖ್ಯೆಯ ಮಾಹಿತಿ ಪಡೆದು ಪರಿಸ್ಥಿತಿ ಸುಧಾರಣೆಗೆ ಪ್ರಯತ್ನಿಸಲಾಗುವುದು. ರಸ್ತೆ ಬದಿ ಪಾರ್ಕಿಂಗ್ ನಾಮಫಲಕ ಅಳವಡಿಸಲಾಗುವುದು. ಜನರು ಸಂಚಾರ ನಿಯಮಗಳನ್ನು ಪಾಲಿಸಬೇಕು. ಕಳ್ಳತನ ಪ್ರಕರಣಗಳ ಬಗ್ಗೆಯೂ ಪರಿಶೀಲಿಸಲಾಗುವುದು.
l ಡಾ.ಕೆ. ಅರುಣ್,
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ದಾವಣಗೆರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net