ಮಕ್ಕಳ ಭವಿಷ್ಯ ರೂಪಿಸುವ ಶಿಲ್ಪಿ

Jagaluru, Teacher's Day,
Published on

ಗುರುವಿನ ಮಾರ್ಗದರ್ಶನವಿಲ್ಲದೆ ಜ್ಞಾನ ದಕ್ಕದು I ಶಾಸಕ ಚಿಕ್ಕಮ್ಮನಹಟ್ಟಿ ಬಿ. ದೇವೇಂದ್ರಪ್ಪ ಅನಿಸಿಕೆ

ಜಗಳೂರು: ಕಲ್ಲನ್ನು ಕೆತ್ತಿ ಸುಂದರ ಮೂರ್ತಿಯನ್ನಾಗಿಸುವ ಶಿಲ್ಪಿಯಂತೆ ಮಕ್ಕಳ ಭವಿಷ್ಯ ರೂಪಿಸುವವರು ಶಿಕ್ಷಕರು ಎಂದು ಶಾಸಕ ಚಿಕ್ಕಮ್ಮನಹಟ್ಟಿ ಬಿ. ದೇವೇಂದ್ರಪ್ಪ ಅಭಿಪ್ರಾಯಪಟ್ಟರು.

ಪಟ್ಟಣದ ಡಾ.ಬಿ.ಆರ್.ಅಂಬೇಡ್ಕರ್ ಭವನದಲ್ಲಿ ಗುರುವಾರ ಆಯೋಜಿಸಿದ್ದ ಶಿಕ್ಷಕರ ದಿನಾಚರಣೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ, ಮಾತನಾಡಿದರು.

ಗುರುವಿನ ಮಾರ್ಗದರ್ಶನವಿಲ್ಲದೆ ಜ್ಞಾನ ಅರಿಯಲು ಸಾಧ್ಯವಿಲ್ಲ. ಪ್ರಪಂಚದ ಮಹಾನ್ ವ್ಯಕ್ತಿಗಳು, ದಾರ್ಶನಿಕರು, ಸಂತರ ಜೀವನದ ಹಂತ ಗಮನಿಸಿದಾಗ ಅವರಿಗೆ ಒಬ್ಬ ಮಾರ್ಗದರ್ಶಕನಿದ್ದ ಎಂಬುದು ತಿಳಿಯುತ್ತದೆ ಎಂದರು.

ಮನಸ್ಸು ಎಲ್ಲ ಕಡೆಗೂ ಓಡುತ್ತಿರುತ್ತದೆ. ಆದರೆ, ಅಂತಹ ಮನಸ್ಸಿಗೆ ಸರಿಯಾದ ದಾರಿ ತೋರುವ, ಬುದ್ಧಿ ಉಪಯೋಗಿಸಿ ಸಮಾಜಕ್ಕೆ ಒಳಿತು ಮಾಡುವ ಮಾರ್ಗದರ್ಶನ ತೋರಿಸುವ ಶಕ್ತಿ ಇರುವುದು ಕೇವಲ ಗುರುವಿನಲ್ಲಿ ಮಾತ್ರ. ಪುರಾಣದ ಕತೆಗಳನ್ನು ನೋಡಿದರೆ ನಮ್ಮ ಪ್ರಾಚೀನರು ಗುರುಗಳಿಗೆ ಎಂತಹ ಮಹತ್ವ ನೀಡಿದ್ದರು ಎಂದರು.

ಕಸಾಪ ತಾಲೂಕು ಅಧ್ಯಕ್ಷೆ ಸುಮತಿ ಜಯಪ್ಪ ಮಾತನಾಡಿ, ಗುರುವೆಂದರೆ ಗುರುತ್ವಾಕರ್ಷಣೆ ಹೊಂದಿ ಮಕ್ಕಳ ಮನಸನ್ನು ಸೆಳೆದುಕೊಳ್ಳುವವರಾಗಿದ್ದಾರೆ. ಮಕ್ಕಳ ಜನ್ಮಕ್ಕೆ ಕಾರಣ ತಂದೆ ತಾಯಿಗಳು. ಆದರೆ, ಅವರ ಜೀವನ ಸರಿದಾರಿಗೆ ತರಲು ಶಿಕ್ಷಕರು ಕಾರಣ. ಒಬ್ಬ ಸಮರ್ಥ ಶಿಕ್ಷಕ ರಾಷ್ಟ್ರ ನಾಯಕ ಇದ್ದಂತೆ ಎಂದರು.

ಕ್ಷೇತ್ರ ಶಿಕ್ಷಣಾಧಿಕಾರಿ ಈ. ಹಾಲಮೂರ್ತಿ ಪ್ರಾಸ್ತಾವಿಕವಾಗಿ ಮಾತನಾಡಿದರು. ನಿವೃತ್ತ ಶಿಕ್ಷಕರಾದ ಹನುಮಂತಪ್ಪ, ಕುಮಾರಸ್ವಾಮಿ, ತಿಮ್ಮಪ್ಪ, ಕಲ್ಲಪ್ಪ, ಜಯಮ್ಮ ಮತ್ತಿತರರನ್ನು ಸನ್ಮಾನಿಸಲಾಯಿತು.

ತಹಸೀಲ್ದಾರ್ ಸೈಯದ್ ಖಲಿಂವುಲ್ಲ, ತಾಪಂ ಇಒ ಕೆಂಚಪ್ಪ, ಪಪಂ ಮುಖ್ಯಾಧಿಕಾರಿ ಲೋಕ್ಯಾನಾಯ್ಕ, ನೌಕರ ಸಂಘದ ಅಧ್ಯಕ್ಷ ಸಿ.ಬಿ.ನಾಗರಾಜ್, ಜಿಪಂ ಮಾಜಿ ಸದಸ್ಯ ಕೆ.ಪಿ. ಪಾಲಯ್ಯ, ಕಾಂಗ್ರೆಸ್ ಎಸ್‌ಸಿ ಘಟಕದ ಅಧ್ಯಕ್ಷ ಮಹೇಶ್ವರಪ್ಪ, ಪಪಂ ಸದಸ್ಯ ಲುಕ್ಮನ್‌ಖಾನ್, ಕಲ್ಪನಾ, ಡಿ.ಡಿ. ಹಾಲಪ್ಪ, ಹನುಮಂತೇಶ್, ಮಂಜಪ್ಪ ದಿದ್ದಿಗೆ, ಶಕುಂತಲಾ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net