ಜನರಿಗೆ ಕೆಲಸ ಕೊಟ್ಟು ಹಸಿವು ನೀಗಿಸಿ

DAVANAGERE jagaluru mla meeting
Published on

ಜಗಳೂರು: ನರೇಗಾದಡಿ ತಾಲೂಕಿನ 22 ಗ್ರಾಪಂಗಳು ಕೂಲಿಕಾರರಿಗೆ ಕೆಲಸ ಕೊಡಬೇಕು ಎಂದು ಶಾಸಕ ಎಸ್.ವಿ.ರಾಮಚಂದ್ರ ಅಧಿಕಾರಿಗಳಿಗೆ ಸೂಚಿಸಿದರು.

ತಾಪಂ ಸಭಾಂಗಣದಲ್ಲಿ ಬುಧವಾರ ಕರೆದಿದ್ದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿ, ತಾಪಂ, ಕೃಷಿ, ತೋಟಗಾರಿಕೆ, ರೇಷ್ಮೆ, ಅರಣ್ಯ ಇಲಾಖೆಗಳಲ್ಲಿ ನರೇಗಾ ಯೋಜನೆಯಡಿ ಕೆಲಸ ಕೊಡಲು ಅವಕಾಶವಿದೆ. ಕರೆ ಹೂಳೆತ್ತುವುದೊಂದೇ ಅಲ್ಲ, ಬದು ನಿರ್ಮಾಣ, ಕೃಷಿಹೊಂಡ, ದನದ ಕೊಟ್ಟಿಗೆ ನಿರ್ಮಾಣದಂತಹ ವೈಯಕ್ತಿಕ ಕಾಮಗಾರಿಳತ್ತ ಗಮನಹರಿಸಬೇಕು ಎಂದರು.

ಕೆಲಸಕ್ಕೆ ಬರುವ ಪ್ರತಿ ಕಾರ್ಮಿಕನಿಗೂ ಮಾಸ್ಕ್, ಸ್ಯಾನಿಟೈಸರ್ ಕೊಡಬೇಕು. ಕೊರತೆಯಾದರೆ ತಹಸೀಲ್ದಾರ್ ಅವರನ್ನು ಸಂಪರ್ಕಿಸಬೇಕು ಎಂದು ಸೂಚಿಸಿದರು.

ಕರೊನಾ ಲಾಕ್‌ಡೌನ್ ಹಿನ್ನೆಲೆಯಲ್ಲಿ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ದುಡಿಮೆ ಇಲ್ಲದ ಬಡವರು, ನಿರ್ಗತಿಕರು, ಕಟ್ಟಡ ಕಾರ್ಮಿಕರು, ವಿಧವಾ, ಅಂಗವಿಕಲ, ವೃದ್ಧಾಪ್ಯ ವೇತನ, ಶೂನ್ಯ ಖಾತೆದಾರರಿಗೆ ನೇರವಾಗಿ ಹಣ ಜಮೆ ಮಾಡುತ್ತಿವೆ. ಇದರಿಂದ ಯಾರೂ ವಂಚಿತರಾಗದಂತೆ ಆಯಾ ಗ್ರಾಮಲೆಕ್ಕಿಗರು ಪರಿಶೀಲಿಸಬೇಕು ಎಂದು ತಾಕೀತು ಮಾಡಿದರು.

ತಾಲೂಕಿನಲ್ಲಿ ಅಂತರ್ಜಲ ಕುಸಿದು ಕೊಳವೆಬಾವಿಗಳಲ್ಲಿ ನೀರಿಲ್ಲದಂತಾಗಿದೆ. ಗ್ರಾಮಗಳಲ್ಲಿ ಕುಡಿವ ನೀರಿಗೆ ಸಮಸ್ಯೆಯಾಗದಂತೆ ಅಧಿಕಾರಿಗಳು ಕ್ರಮಕೈಗೊಳ್ಳಬೇಕು. ಇದಕ್ಕಾಗಿ ಸರ್ಕಾರ ಸಾಕಷ್ಟು ಅನುದಾನ ಬಿಡುಗಡೆ ಮಾಡಿದೆ ಎಂದು ಹೇಳಿದರು.

ತಹಸೀಲ್ದಾರ್ ಹುಲ್ಲುಮನಿ ತಿಮ್ಮಣ್ಣ, ತಾಪಂ ಇಒ ಮಲ್ಲನಾಯ್ಕ, ಪಪಂ ಮುಖ್ಯಾಧಿಕಾರಿ ರಾಜು ಡಿ. ಬಣಕಾರ್, ಟಿಎಚ್‌ಒ ಡಾ. ನಾಗರಾಜ್, ಸಿಪಿಐ ದುರುಗಪ್ಪ, ಬಿಇಒ ಯುವರಾಜನಾಯ್ಕ, ತೋಟಗಾರಿಕಾ ಇಲಾಖೆ ಸಹಾಯಕ ನಿರ್ದೇಶ ವೆಂಕಟೇಶ್‌ಮೂರ್ತಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net