

ಜಗಳೂರು: ಜಗಳೂರು ತಾಲೂಕಿನ ಅಭಿವೃದ್ಧಿಗೆ ಪೂರಕವಾಗಿ ಫುಡ್ ಪಾರ್ಕ್ ಆರಂಭಿಸುವ ಅವಕಾಶಗಳ ಕುರಿತು ಪರಿಶೀಲಿಸಲಾಗುವುದು ಎಂದು ಜಿಲ್ಲಾಧಿಕಾರಿ ಶಿವಾನಂದ ಕಾಪಶಿ ತಿಳಿಸಿದರು.
ಕೇಂದ್ರ ಸರ್ಕಾರದ ಸಹಯೋಗದೊಂದಿಗೆ ಫುಡ್‌ಪಾರ್ಕ್ ಸ್ಥಾಪನೆಗೆ ಅವಕಾಶವಿದ್ದು ಅದಕ್ಕೂ ಮುಂಚೆ ಜನಪ್ರತಿನಿಧಿಗಳು ಹಾಗೂ ಸಂಬಂಧಪಟ್ಟ ಅಧಿಕಾರಿಗಳ ಜತೆ ವಿಸ್ತೃತ ಚರ್ಚೆ ನಡೆಯಬೇಕಿದೆ ಎಂದು ತಾಲೂಕು ಕಚೇರಿಯಲ್ಲಿ ಸುದ್ದಿಗಾರರಿಗೆ ತಿಳಿಸಿದರು.
ಇದರಿಂದ ಸ್ಥಳೀಯ ಬೆಳೆಗಳಿಗೆ ಬೆಲೆ ಬರಲಿದೆ. ರೈತರ ಕೃಷಿ ಚಟುವಟಿಕೆಗಳಿಗೂ ಬಲ ಬರಲಿದೆ. ಉದ್ಯೋಗವೂ ಸೃಜನೆಯಾಗಲಿದೆ ಎಂದರು.
ಏತ ನೀರಾವರಿ ಯೋಜನೆಯಡಿ ನದಿಯಿಂದ ತಾಲೂಕಿನ ಕೆರೆಗಳಿಗೆ ನೀರು ತುಂಬಿಸುವ ಕಾಮಗಾರಿ ಶೀಘ್ರ ಪೂರ್ಣಗೊಳಿಲಾಗುವುದು. ಕುಡಿವ ನೀರಿನ ಪೂರೈಕೆಗೂ ಒತ್ತು ನೀಡಲಾಗುವುದು. ಜನರ ಜೀವನ ಮಟ್ಟ ಸುಧಾರಿಸಲು ಕೇಂದ್ರ- ರಾಜ್ಯ ಸರ್ಕಾರದ ಯೋಜನೆಗಳನ್ನು ಫಲಾನುಭವಿ ಗಳ ಮನೆ ಬಾಗಿಲಿಗೆ ತಲುಪಿಸಲು ಅಧಿಕಾರಿಗಳ ತಂಡದೊಂದಿಗೆ ಪ್ರಾಮಾಣಿಕ ಪ್ರಯತ್ನ ಮಾಡಲಾಗುತ್ತಿದೆ ಎಂದರು.
ಜಗಳೂರು ತಾಲೂಕು ಜ್ಯೋತಿಪುರದಲ್ಲಿ ಅನಾರೋಗ್ಯಕ್ಕೆ ತುತ್ತಾಗಿ ಮಲಗಿದ್ದ ಅಂಗವಿಕಲ ಯುವಕನ ಮನೆಗೆ ಜಿಲ್ಲಾಧಿಕಾರಿ ಶಿವಾನಂದ್ ಕಾಪಶಿ ಮಂಗಳವಾರ ಭೇಟಿ ನೀಡಿ ಆರೋಗ್ಯ ವಿಚಾರಿಸಿ ಸರ್ಕಾರದ ನೆರವು ನೀಡಿ ಧೈರ್ಯ ತುಂಬಿದರು. ಗ್ರಾಮದ ಸತೀಶ್ ನಾಯ್ಕ ಅಂಗವಿಕಲನಾಗಿದ್ದು ಈವರೆಗೂ ಸರ್ಕಾರಿ ಸೌಲಭ್ಯ ಪಡೆಯದೆ ವಂಚಿತನಾಗಿದ್ದ. ಈತನ ಬೆರಳಿನ ರೇಖೆ ಸವೆದಿದ್ದರಿಂದ ಆಧಾರ್ ಕಾರ್ಡ್ ಸಹ ಲಭಿಸಿರಲಿಲ್ಲ. ಹೀಗಾಗಿ ಸರ್ಕಾರಿ ಸೌಲಭ್ಯ ಸಿಗದೆ ಮನೆಯಲ್ಲೇ ದಿನ ಕಳೆಯುತ್ತಿದ್ದ.
ಕುಟುಂಬದಲ್ಲಿ ಕಿತ್ತು ತಿನ್ನುವ ಬಡತನ, ಅನಾರೋಗ್ಯದಿಂದ ಕುಗ್ಗಿ ಹೋಗಿದ್ದ ಸತೀಶ್ ನಾಯ್ಕ ಹಾಸಿಗೆಯಿಂದ ಮೇಲೆಳದ ಸ್ಥಿತಿ ತಲುಪಿದ್ದನು. ಪಾಲಕರು ಕೂಲಿ ಮಾಡುತ್ತಿದ್ದು ಜೀವನ ನಿರ್ವಹಣೆ ಕಷ್ಟವಾಗಿತ್ತು. ಆಸ್ಪತ್ರೆಗೆ ತೋರಿಸಲು ಹಣವಿಲ್ಲದೆ ಪರಿತಪಿಸುತ್ತಿದ್ದರು. ಶಿವಾನಂದ ಕಾಪಶಿ ಅವರು ಜಿಲ್ಲಾಧಿಕಾರಿ ಆಗಿ ಅಧಿಕಾರ ಸ್ವೀಕರಿಸಿದ ದಿನವೇ ಸತೀಶ್ ನಾಯ್ಕ ಪಾಲಕರು ಮಗನ ಸ್ಥಿತಿ ಕುರಿತು ಮನವರಿಕೆ ಮಾಡಿಕೊಟ್ಟು ನೆರವು ಕೋರಿದ್ದರು.
ಇದಕ್ಕೆ ಸ್ಪಂದಿಸಿದ ಜಿಲ್ಲಾಧಿಕಾರಿ ತಕ್ಷಣ ತಾಲೂಕು ಅಧಿಕಾರಿಗಳಿಂದ ವರದಿ ಪಡೆವ ಜತೆಗೆ ಸಂತ್ರಸ್ತನ ಮನೆಗೆ ಖುದ್ದು ಭೇಟಿ ನೀಡಿ ಅಂಗವಿಕಲ ಪೋಷಣ ವೇತನ ಮಂಜೂರಾತಿ ಪತ್ರ ಮತ್ತು ಆಧಾರ್ ಕಾರ್ಡ್ ನೀಡಿ ಮಾನವೀಯತೆ ಮೆರೆದರು. ಅವರ ಮನೆಯಲ್ಲಿ ಡಿಸಿ ಚಹಾ ಸೇವಿಸಿ ಜಿಲ್ಲಾಡಳಿತ ನಿಮ್ಮ ನೆರವಿಗಿದೆ ಎಂದರು. ಜಿಲ್ಲಾಧಿಕಾರಿ ಸ್ಪಂದನೆಗೆ ಖುಷಿಪಟ್ಟ ಕುಟುಂಬ ಅವರಿಗೆ ಕೃತಜ್ಞತೆ ಸಲ್ಲಿಸಿತು.