ಮೊಬೈಲ್ ಬಳಕೆಗೆ ವಿದ್ಯಾರ್ಥಿಗಳಲ್ಲಿರಲಿ ಇತಿಮಿತಿ

Jagaluru, Student Hostel, Visit,
Published on

ಜಗಳೂರು: ವಿದ್ಯಾರ್ಥಿಗಳು ಮೊಬೈಲ್ ಬಳಕೆ ಮಾಡುವುದು ತಪ್ಪಲ್ಲ. ಆದರೆ, ಓದುವ ವೇಳೆ ವಿಷಯಗಳಿಗೆ ಸಂಬಂಧಿಸಿದ ಉತ್ತಮವಾದ ಅಂಶಗಳನ್ನು ಮಾತ್ರ ಮೊಬೈಲ್‌ನಿಂದ ಪಡೆದು, ಕೆಟ್ಟ ವಿಚಾರಗಳನ್ನು ಡಿಲಿಟ್ ಮಾಡಬೇಕು ಎಂದು ಶಾಸಕ ಚಿಕ್ಕಮ್ಮನಹಟ್ಟಿ ಬಿ. ದೇವೇಂದ್ರಪ್ಪ ಹೇಳಿದರು.

ಇಲ್ಲಿನ ಸಮಾಜ ಕಲ್ಯಾಣ ಇಲಾಖೆ ವ್ಯಾಪ್ತಿಯ ಸರ್ಕಾರಿ ಮೆಟ್ರಿಕ್ ನಂತರದ ಬಾಲಕಿಯರ ವಿದ್ಯಾರ್ಥಿ ನಿಲಯಕ್ಕೆ ಬುಧವಾರ ದಿಢೀರ್ ಭೇಟಿ ನೀಡಿ ಪರಿಶೀಲಿಸಿ ಮಾತನಾಡಿದರು.

ಅತಿಯಾದ ಮೊಬೈಲ್ ಬಳಕೆಯಿಂದ ಏಕಾಗ್ರತೆ ಕಡಿಮೆಯಾಗಿ ಓದಿನ ಕಡೆ ಗಮನಹರಿಸಲು ಸಾಧ್ಯವಾಗುವುದಿಲ್ಲ. ಆದ್ದರಿಂದ ಮೊಬೈಲ್ ಬಳಕೆ ಕಡಿಮೆ ಮಾಡಬೇಕು. ವಿದ್ಯಾರ್ಥಿಗಳ ಉತ್ತಮ ಭವಿಷ್ಯಕ್ಕಾಗಿ ಸರ್ಕಾರ ಹಾಸ್ಟೆಲ್‌ಗಳಿಗೆ ಒತ್ತು ನೀಡಿ ವಿಶೇಷ ಸೌಲಭ್ಯ ನೀಡುತ್ತಿದ್ದು, ಅದನ್ನು ಸದುಪಯೋಗಪಡಿಸಿಕೊಂಡು ಉತ್ತಮ ಶಿಕ್ಷಣ ಪಡೆಯಬೇಕು ಎಂದು ಸಲಹೆ ನೀಡಿದರು.

ಕಳೆದ ಮೂವತ್ತು ವರ್ಷಗಳಿಗೆ ಹೋಲಿಸಿದರೆ ಹಾಸ್ಟೆಲ್‌ಗಳು ತುಂಬ ಬದಲಾಗಿವೆ. ವಿದ್ಯಾರ್ಥಿಗಳಿಗೆ ಹಾಸಿಗೆ, ಹೊದಿಕೆ ಸೇರಿದಂತೆ ಗುಣಮಟ್ಟದ ಆಹಾರ ನೀಡುತ್ತಿದೆ. ಆದರೆ, ಇತ್ತೀಚಿನ ದಿನಗಳಲ್ಲಿ ಮಕ್ಕಳು ಓದುವ ಆಸಕ್ತಿ ಕಳೆದುಕೊಳ್ಳುತ್ತಿದ್ದಾರೆ ಎಂದು ಬೇಸರ ವ್ಯಕ್ತ ಪಡಿಸಿದರು.

ಹಾಸ್ಟೆಲ್ ಒಳಗೆ ಭೇಟಿ ನೀಡಿದ ಶಾಸಕರು ಆವರಣ, ವಿದ್ಯಾರ್ಥಿಗಳ ಊಟ ಕೊಠಡಿ, ಸ್ಟೋರ್ ರೂಂ, ಕಂಪ್ಯೂಟರ್ ಕೊಠಡಿ ಖುದ್ದು ಪರಿಶೀಲಿಸಿ, ಅಲ್ಲಿನ ಸ್ವಚ್ಛತೆ ಕಂಡು ಮೆಚ್ಚುಗೆ ವ್ಯಕ್ತಪಡಿಸಿದರು.

ಸಮಾಜ ಕಲ್ಯಾಣಾಧಿಕಾರಿ ಬಿ. ಮಹೇಶ್ವರಪ್ಪ, ನಿಲಯ ಪಾಲಕಿ ಮಂಗಳ, ಆಪ್ತ ಸಹಾಯಕ ಶಿವರಾಜ್, ಬಸವರಾಜ್ ಮತ್ತಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net