ಸತತ ಪರಿಶ್ರಮವಿದ್ದರೆ ಗೆಲುವು ಖಚಿತ

Jagaluru, sports event,
Published on

ಶಾಸಕ ಚಿಕ್ಕಮ್ಮನಹಟ್ಟಿ ಬಿ. ದೇವೇಂದ್ರಪ್ಪ ಹೇಳಿಕೆ I ಕಲ್ಲೇದೇವಪುರದಲ್ಲಿ ಕ್ರೀಡಾಕೂಟ

ಜಗಳೂರು: ಕ್ರೀಡೆಯಲ್ಲಿ ಸೋಲು- ಗೆಲುವು ಸರ್ವೆ ಸಾಮಾನ್ಯ. ಕ್ರೀಡಾಪಟುಗಳು ಸೋಲಿನಿಂದ ಎದೆಗುಂದದೆ ನಿರಂತರ ಪರಿಶ್ರಮಪಟ್ಟರೆ ಗೆಲುವು ಸಾಧ್ಯವಾಗುತ್ತದೆ ಎಂದು ಶಾಸಕ ಚಿಕ್ಕಮ್ಮನಹಟ್ಟಿ ಬಿ. ದೇವೇಂದ್ರಪ್ಪ ಹೇಳಿದರು.

ತಾಲೂಕಿನ ಕಲ್ಲೆದೇವಪುರ ಗ್ರಾಮದ ಕಲ್ಲೇಶ್ವರ ಪ್ರೌಢಶಾಲೆಯಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಪ್ರೌಢಶಾಲೆಗಳ ಪೂರ್ವ ವಲಯಮಟ್ಟದ ಕ್ರೀಡಾಕೂಟ ಉದ್ಘಾಟಿಸಿ, ಮಾತನಾಡಿದರು.

ಕ್ರೀಡೆಗಳು ವಿದ್ಯಾರ್ಥಿಗಳಲ್ಲಿ ನಾಯಕತ್ವ, ಸ್ಪರ್ಧಾ ಮನೋಭಾವ ಬೆಳೆಸುತ್ತವೆ. ಕ್ರೀಡಾಪಟುಗಳಿಗೆ ಸರ್ಕಾರ ಶಿಕ್ಷಣ ಮತ್ತು ಉದ್ಯೋಗದಲ್ಲಿ ಮೀಸಲಾತಿ ನೀಡಿದೆ. ಹಾಗಾಗಿ, ಪ್ರತಿಭಾವಂತರು ಕ್ರೀಡಾಪಟುಗಳನ್ನು ಗುರುತಿಸಿ, ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ ತಾಲೂಕು ಮಟ್ಟದ ಕ್ರೀಡಾಕೂಟಗಳು ಉತ್ತಮ ವೇದಿಕೆಯಾಗಿವೆ ಎಂದರು.

ಇಲ್ಲಿ ವಿಜೇತ ವಿದ್ಯಾರ್ಥಿಗಳಿಗೆ ಹೆಚ್ಚಿನ ತರಬೇತಿ, ಮಾರ್ಗದರ್ಶನ ನೀಡಿ ಜಿಲ್ಲಾ ಮತ್ತು ರಾಜ್ಯಮಟ್ಟದಲ್ಲೂ ವಿಜೇತರಾಗಲು ಅನುಕೂಲ ಮಾಡಿಕೊಡಬೇಕು. ತಾಲೂಕು, ಜಿಲ್ಲಾ, ರಾಜ್ಯ ಮಟ್ಟಕ್ಕೆ ಆಯ್ಕೆಯಾಗುವ ಕ್ರೀಡಾಪಟುಗಳಿಗೆ ಸಮವಸ್ತ್ರ ವಿತರಿಸಲಾಗುವುದು ಎಂದರು.

ಕ್ರೀಡಾಕೂಟದಲ್ಲಿ 12ಪ್ರೌಢಶಾಲೆಗಳಿಂದ 800ಕ್ಕೂ ಅಧಿಕ ವಿದ್ಯಾರ್ಥಿಗಳು ಭಾಗವಹಿಸಿದ್ದರು. ಬಿಇಒ ಹಾಲಮೂರ್ತಿ, ಡಿ.ಡಿ. ಹಾಲಪ್ಪ, ಗ್ರಾಪಂ ಅಧ್ಯಕ್ಷೆ ವಸಂತಕುಮಾರಿ, ಜಿಪಂ ಮಾಜಿ ಸದಸ್ಯ ಕೆ.ಪಿ. ಪಾಲಯ್ಯ, ವಕೀಲ ಸಂಘದ ಅಧ್ಯಕ್ಷ ಬಿ. ಬಸವರಾಜ್, ಗ್ರಾಪಂ ಸದಸ್ಯ ಬಡಯ್ಯ, ಮುಖ್ಯಶಿಕ್ಷಕ ರಮೇಶ್ ನಾಯ್ಕ, ಶಿಕ್ಷಕರಾದ ಚಿತ್ತಯ್ಯ, ನಾಗರಾಜ್ ನಾಯ್ಕ, ಚೈತ್ರಾ, ಮುಖಂಡರಾದ ಬಿ. ಮಹೇಶ್ವರಪ್ಪ, ಹಟ್ಟಿ ತಿಪ್ಪೇಸ್ವಾಮಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net