ಸೊಕ್ಕೆ ಗ್ರಾಮದ ಶಿರಡಿ ಸತ್ಯ ಸಾಯಿಬಾಬಾ ಮಂದಿರದಲ್ಲಿ ಭಕ್ತಿಯ ಸುಧೆ

Jagaluru, Saibaba, Gurupurnima,
Published on

ಜಗಳೂರು: ತಾಲೂಕಿನಲ್ಲಿ ಭಾನುವಾರ ಒಂದು ಕಡೆ ಜಿಟಿ ಜಿಟಿ ಮಳೆ ಸುರಿಯುತ್ತಿದ್ದರೆ, ಇತ್ತ ಗುರು ಪೂರ್ಣಿಮೆ ನಿಮಿತ್ತ ಭಕ್ತಿಸುಧೆ ಹರಿಯುತ್ತಿತ್ತು.

ತಾಲೂಕಿನ ಸೊಕ್ಕೆ ಗ್ರಾಮದಲ್ಲಿ ನೂತನ ಶಿರಡಿ ಸತ್ಯ ಸಾಯಿಬಾಬಾ ದೇವಸ್ಥಾನದಲ್ಲಿ ಮೊದಲ ಗುರು ಪೂರ್ಣಿಮೆ ಆಚರಣೆಯ ಸಂಭ್ರಮ ಕಂಡು ಬಂತು. ವಿಶೇಷ ಅಲಂಕೃತ ಶಿರಡಿ ಸಾಯಿಬಾಬಾ ಕಣ್ತುಂಬಿಕೊಳ್ಳಲು ಭಕ್ತಗಣ ಹರಿದು ಬರುತ್ತಿತ್ತು.

ಗುರುಪೂರ್ಣಿಮೆ ಅಂಗವಾಗಿ ಸಾಯಿಬಾಬಾ ಮೂರ್ತಿಗೆ ಬೆಳ್ಳಗ್ಗೆಯಿಂದಲೇ ಅಭಿಷೇಕ, ವಿಶೇಷ ಅಲಂಕಾರ ಮಾಡಲಾಗಿತ್ತು. ದೇವಾಲಯಗಳನ್ನು ವಿಶೇಷವಾಗಿ ಅಲಂಕಾರಗೊಂಡಿತ್ತು. ಗಣಹೋಮ ಮತ್ತಿತರ ಧಾರ್ಮಿಕ ಕಾರ್ಯ ನೆರವೇರಿದವು.

ಕರಿವೃಷಭ ಶ್ರೀ ಆಶೀರ್ವಚನ: ಬಡವರ ಕಲ್ಯಾಣ ಕಾರ್ಯ ಮಾಡಲು ಶ್ರೀ ಸತ್ಯ ಸಾಯಿಬಾಬಾ ಹೆಸರಿನಲ್ಲಿ ಕಲ್ಯಾಣ ಮಂದಿರವಾಗಲಿ ಎಂದು ತುಮಕೂರು ಜಿಲ್ಲೆಯ ತಿಪಟೂರು ತಾಲೂಕಿನ ನೊಣವಿನಕೆರೆಯ ಡಾ.ಕರಿವೃಷಭ ದೇಶೀಕೇಂದ್ರ ಶಿವಯೋಗೇಶ್ವರ ಮಹಾಸ್ವಾಮೀಜಿ ಆಶೀರ್ವದಿಸಿದರು.

ಸಾಯಿಬಾಬಾ ದರ್ಶನ ಪಡೆಯಲು ಭಕ್ತರು ಶಿರಡಿ ಹೋಗಬೇಕಾಗಿತ್ತು. ಆದರೆ, ಪ್ರೊ.ತಿಪ್ಪೇಸ್ವಾಮಿ ಸೊಕ್ಕೆಯಲ್ಲಿಯೇ ದೇವಸ್ಥಾನ ನಿರ್ಮಿಸುವ ಮೂಲಕ ಸಾಮಾಜಿಕ ದೃಷ್ಟಿಯಿಂದ ಮಂಗಲ ಭವನ ಮಾಡಲು ಸಂಕಲ್ಪ ಮಾಡಿದ್ದಾರೆ ಎಂದರು.

ಶಾಸಕ ಚಿಕ್ಕಮ್ಮನಹಟ್ಟಿ ಬಿ. ದೇವೇಂದ್ರಪ್ಪ ಮಾತನಾಡಿ, ನೊಣವಿನಕೆರೆ ಅಜ್ಜಯ್ಯ ಎಂದೇ ಹೆಸರಾದ ಡಾ.ಕರಿವೃಷಭ ದೇಶೀಕೇಂದ್ರ ಶಿವಯೋಗೇಶ್ವರ ಮಹಾಸ್ವಾಮೀಜಿ ಆರಾಧ್ಯ ದೈವರಾಗಿದ್ದಾರೆ. ಹರ ಮುನಿದರೂ ಗುರು ಕಾಯುತ್ತಾನೆ ಎಂಬಂತೆ ಕತ್ತಲೆಯಿಂದ ಬೆಳಕಿನತ್ತ ಕರೆದೊಯ್ಯುವುದು ಗುರುವಿನ ಅನುಗ್ರಹವಾಗಿದೆ ಎಂದು ಹೇಳಿದರು.

ಡಿಕೆಶಿಗೆ ಸಿಎಂ ಯೋಗ: ನೊಣವಿನಕೆರೆ ಶ್ರೀ ಭವಿಷ್ಯ: ರಾಜ್ಯದಲ್ಲಿ ಡಿ.ಕೆ. ಶಿವಕುಮಾರ್ ಮುಖ್ಯಮಂತ್ರಿ ಆಗಬೇಕು ಎನ್ನುವ ಕೂಗು ಕೇಳಿಬಂದಿದೆ. ಗುರುವನ್ನು ನಂಬಿರುವ ಅವರಿಗೆ ದೇವರು, ಜನರ ಆಶೀರ್ವಾದವಿದೆ ಎಂದು ತುಮಕೂರು ಜಿಲ್ಲೆಯ ತಿಪಟೂರು ತಾಲೂಕಿನ ನೊಣವಿನಕೆರೆಯ ಡಾ.ಕರಿವೃಷಭ ದೇಶೀಕೇಂದ್ರ ಶಿವಯೋಗೇಶ್ವರ ಮಹಾಸ್ವಾಮೀಜಿ ಭವಿಷ್ಯ ನುಡಿದರು.

ಡಿಕೆಶಿ ಸಿಎಂ ಆಗುತ್ತಾರೆ ಎಂದು ನಾನು ಹೇಳುವುದಿಲ್ಲ. ಆದರೆ, ನಂಬದಿರು ಮನವೆ ಹಂಬಲಿಸದಿರು’ ಎಂಬಂತೆ ಗುರುವಿನ ಭಕ್ತರಿಗೆ ಕಣ್ಣು ತೆರೆಯುತ್ತಾನೆ. ಗುರು ಕರುಣೆ ಅವರ ಮೇಲಿದೆ. ಈಗ ಶ್ರೀ ಸತ್ಯ ಸಾಯಿಬಾಬಾ ದೇವಸ್ಥಾನದಲ್ಲಿದ್ದೇವೆ. ಜನರೂ ಅಪೇಕ್ಷೆ ಪಟ್ಟಿದ್ದಾರೆ. ದೇವರು ಅವರು ಕೇಳಿದ್ದನ್ನು ಕರುಣಿಸಲಿ ಎಂದು ಆಶೀರ್ವದಿಸಿದರು.

ಪ್ರೊ. ತಿಪ್ಪೇಸ್ವಾಮಿ, ದಿಶಾ ಕಮಿಟಿ ಸದಸ್ಯೆ ಸ್ವಾತಿ ತಿಪ್ಪೇಸ್ವಾಮಿ, ಜಯಲಕ್ಷ್ಮಿ ತಿಪ್ಪೇಸ್ವಾಮಿ, ಗ್ರಾಪಂ ಅಧ್ಯಕ್ಷ ತಿರುಮಲೇಶ್, ಸಿದ್ದೇಶ್, ಸೊಕ್ಕೆ ನಾಗರಾಜ್ ಮತ್ತಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net