ಹಿರೇಮಲ್ಲನಹೊಳೆ ಸಂತ್ರಸ್ತರಿಗೆ ನಿವೇಶನ

Jagaluru, Refugees, meeting,
Published on

ಸಭೆ ನಡೆಸಿ ಅಧಿಕಾರಿಗಳಿಗೆ ಸೂಚಿಸಿದ ಶಾಸಕ ದೇವೇಂದ್ರಪ್ಪ

ಜಗಳೂರು: ಹಿರೇಮಲ್ಲನಹೊಳೆ ಗ್ರಾಮದಲ್ಲಿ ಸರ್ಕಾರಿ ಜಾಗ ಹುಡುಕಿ ನಿರಾಶ್ರಿತರಿಗೆ ನಿವೇಶನ ನೀಡಲು ಅಧಿಕಾರಿಗಳಿಗೆ ಸೂಚನೆ ನೀಡಲಾಗುವುದು ಎಂದು ಶಾಸಕ ಚಿಕ್ಕಮ್ಮನಹಟ್ಟಿ ಬಿ. ದೇವೇಂದ್ರಪ್ಪ ಹೇಳಿದರು.

ತಾಲೂಕಿನ ಹಿರೇಮಲ್ಲನಹೊಳೆ ಗ್ರಾಮದಲ್ಲಿ ಕೆರೆ ನೀರು ಮನೆಗಳಿಗೆ ನುಗ್ಗಿದ ಹಿನ್ನೆಲೆಯಲ್ಲಿ ಸರ್ಕಾರಿ ಶಾಲಾವರಣದಲ್ಲಿ ಹಮ್ಮಿಕೊಂಡಿದ್ದ ನಿರಾಶ್ರಿತರ ಸಭೆಯಲ್ಲಿ ಮಾತನಾಡಿ, ಮನೆಗಳಿಗೆ ಕೆರೆ ನುಗ್ಗಿದೆ, ಜೀವನ ಹೇಗೆ ಎಂಬ ಭಯ ಬೇಡ, ನಿಮ್ಮೊಂದಿಗೆ ನಾನಿದ್ದೇನೆ ಎಂದರು.

ಗ್ರಾಮದಲ್ಲಿ ಒಂದು ಕಡೆ ಕೆರೆ ತುಂಬಿದ ಸಂಭ್ರಮವಿದ್ದರೆ, ಮತ್ತೊಂದೆಡೆ ಮನೆಗಳು ಜಲಾವೃತಗೊಂಡು ಜನರು ಸಂಕಷ್ಟ ಎದುರಿಸುತ್ತಿದ್ದಾರೆ. ಇದು ನೋವಿನ ಸಂಗತಿ. ತಾಲೂಕು ಆಡಳಿತ ನಿಮ್ಮ ಬೆನ್ನ ಹಿಂದಿದೆ ಎಂದು ಭರವಸೆ ನೀಡಿದರು.

ನೀರಿನಲ್ಲಿ ಮುಳುಗಿರುವ ಮನೆಗಳಿಗೆ ಸಂಪರ್ಕವಿರುವ ವಿದ್ಯುತ್ ತೆಗೆಯಲು ಸಂಬಂಧಿತ ಬೆಸ್ಕಾಂ ಅಧಿಕಾರಿಗಳು, ಲೈನ್‌ಮ್ಯಾನ್‌ಗಳಿಗೆ ತಿಳಿಸಲಾಗಿದೆ. ತಾತ್ಕಾಲಿಕವಾಗಿ ತೆರೆದಿರುವ ಕಾಳಜಿ ಕೇಂದ್ರದಲ್ಲಿ ಆರೋಗ್ಯವಾಗಿರಿ ಎಂದರು.

ತಹಸೀಲ್ದಾರ್ ಸೈಯದ್ ಕಲೀಂಉಲ್ಲಾ ಮಾತನಾಡಿ, ಮಳೆಯಿಂದ ಹಾನಿಯಾದ ಕುಟುಂಬಗಳಿಗೆ ಕಾಳಜಿ ಕೇಂದ್ರ ತೆರೆದು ನಿತ್ಯ ಮೂರು ಹೊತ್ತು ಆಹಾರ ನೀಡಲು ಅಡುಗೆಯವರನ್ನು ನೇಮಿಸಲಾಗಿದೆ. ಗ್ರಾಮದ ಸಮೀಪ ಒಂದು ಎಕರೆ ಜಾಗದಲ್ಲಿ ನಿವೇಶನ ಗುರುತಿಸಿ ಅರ್ಹ ಫಲಾನುಭವಿಗಳಿಗೆ ಹಂಚಲು ಶಾಸಕರು ಸೂಚನೆ ನೀಡಿದ್ದಾರೆ. ಶೀಘ್ರವೇ ಕ್ರಮ ವಹಿಸಲಾಗುವುದು ಎಂದು ಭರವಸೆ ನೀಡಿದರು.

ಸಿಡಿಪಿಒ ಬೀರೇಂದ್ರಕುಮಾರ್, ಶಾಂತಮ್ಮ ಅನುರಾಧ, ಗ್ರಾಪಂ ಸದಸ್ಯ ಸುರೇಶ್, ನಿವೃತ್ತ ಅಧಿಕಾರಿ ಬಿ.ಮಹೇಶ್ವರಪ್ಪ, ಕಾಂಗ್ರೆಸ್ ಜಿಲ್ಲಾ ಕಾರ್ಯದರ್ಶಿ ಶೇಖರಪ್ಪ ಪಲ್ಲಾಗಟ್ಟೆ, ಟಿ.ರವಿಕುಮಾರ್, ಧನ್ಯಕುಮಾರ್, ಶಿವಣ್ಣ, ಬಾಣೇಶ್, ಕೃಷ್ಣರೆಡ್ಡಿ, ಜೆ.ಎಸ್.ತಿಪ್ಪೇಸ್ವಾಮಿ, ಪರಶುರಾಮ್, ಚನ್ನಬಸವನಗೌಡ, ಮಹಮದ್ ಗೌಸ್ ಮತ್ತಿತರರಿದ್ದರು.

ಆರೋಗ್ಯ ತಪಾಸಣೆಗೆ ಸೂಚನೆ: ಗ್ರಾಮದಲ್ಲಿ ನೀರಿನ ಮಟ್ಟ ಹೆಚ್ಚಾಗಿದ್ದು, ಸಾಂಕ್ರಾಮಿಕ ರೋಗ ಹರಡುವ ಸಾಧ್ಯತೆ ಇದೆ. ಬುಧವಾರ ಆರೋಗ್ಯ ಇಲಾಖೆಯ ವೈದ್ಯರು ಮತ್ತು ಸಿಬ್ಬಂದಿ ಹಿರೇಮಲ್ಲನಹೊಳೆ ಗ್ರಾಮದಲ್ಲಿ ಆರೋಗ್ಯ ತಪಾಸಣಾ ಶಿಬಿರ ಹಮ್ಮಿಕೊಂಡು ಎಲ್ಲರನ್ನ್ನೂ ಪರೀಕ್ಷೆ ಮಾಡಬೇಕು. ಉಚಿತ ಔಷಧೋಪಚಾರ ಮಾಡಬೇಕೆಂದು ತಾಲೂಕು ಆರೋಗ್ಯಾಧಿಕಾರಿ ವಿಶ್ವನಾಥ್ ಅವರಿಗೆ ದೂರವಾಣಿ ಕರೆ ಮೂಲಕ ಶಾಸಕರು ಸೂಚಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net