

ಜಗಳೂರು: ತಾಲೂಕಿನ ಚಿಕ್ಕಮ್ಮನಹಟ್ಟಿ ಗೊಲ್ಲರಹಟ್ಟಿಯಲ್ಲಿ ಗುರುವಾರ ರಾತ್ರಿ ಅತ್ಯಾಚಾರಕ್ಕೆ ಪ್ರತಿರೋಧವೊಡ್ಡಿದ ಮಹಿಳೆ ಮೇಲೆ ಚಾಕುವಿನಿಂದ ಹಲ್ಲೆ ಮಾಡಿದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.
ಗ್ರಾಮದ ಕಾಟೇಶ್ ಬಂಧಿತ ಆರೋಪಿ. ಈತ ಗ್ರಾಮದ ಮನೆಯೊಂದಕ್ಕೆ ನುಗ್ಗಿ, ಮಹಿಳೆಯ ಮೇಲೆ ಅತ್ಯಾಚಾರವೆಸಗಲು ಪ್ರಯತ್ನಿಸಿದ್ದಾನೆ. ಆಕೆ ಪ್ರತಿರೋಧ ತೋರಿದಾಗ ಅವಾಚ್ಯ ಶಬ್ದಗಳಿಂದ ನಿಂದಿಸಿ, ಆಕೆಯ ಬೆನ್ನು, ಕುತ್ತಿಗೆ ಮತ್ತು ಎದೆಯ ಭಾಗಕ್ಕೆ ಚಾಕುವಿನಿಂದ ಇರಿದು ಪರಾರಿಯಾಗಿದ್ದಾನೆ.
ಮಹಿಳೆಯ ಕೂಗಾಟ ಕೇಳಿದ ಅಕ್ಕಪಕ್ಕದ ಮನೆಯವರು ಧಾವಿಸಿ, ರಕ್ತದ ಮಡುವಿನಲ್ಲಿ ಬಿದ್ದಿದ್ದ ಆಕೆಯನ್ನು ಜಗಳೂರು ಆಸ್ಪತ್ರೆಗೆ ದಾಖಲಿಸಿದ್ದಾರೆ. ಆಸ್ಪತ್ರೆಗೆ ಪಿಎಸ್‌ಐ ಎಸ್.ಡಿ.ಸಾಗರ್ ಭೇಟಿ ನೀಡಿ ಮಹಿಳೆಯಿಂದ ದೂರು ದಾಖಲಿಸಿಕೊಂಡರು.