ಜಗಳೂರಿನ ನಾಲ್ಕು ಕೆರೆಗಳು ಭರ್ತಿ

Jagaluru, rain, damage,
Published on

ಜಗಳೂರು: ಪಟ್ಟಣದ ಸೇರಿದಂತೆ ತಾಲೂಕಿನಾದ್ಯಂತ 2ನೇ ದಿನವೂ ಮಳೆ ಮುಂದುವರಿದಿದ್ದು, ಬುಧವಾರ ರಾತ್ರಿ ಕ್ಯಾಸೇನಹಳ್ಳಿ, ಗೌರಿಪುರ, ಹುಚ್ಚವ್ವನಹಳ್ಳಿ, ಚಿಕ್ಕಮಲ್ಲನಹೊಳೆ (ಎರೆಹಳ್ಳಿ) ಗ್ರಾಮಗಳ ನಾಲ್ಕು ಕೆರೆಗಳು ಕೋಡಿ ಬಿದ್ದಿವೆ. ಅಷ್ಟೇ ಅಲ್ಲ ಐದು ಮನೆಗಳು ಭಾಗಶಃ ಬಿದ್ದು ಹಾನಿಯಾಗಿವೆ ಎಂದು ತಹಸೀಲ್ದಾರ್ ಸೈಯದ್ ಕಲೀಂಉಲ್ಲಾ ಮಾಹಿತಿ ನೀಡಿದ್ದಾರೆ.

ಮಧ್ಯರಾತ್ರಿ ಆರಂಭವಾದ ಮಳೆ ಇಡೀ ರಾತ್ರಿ ಗುಡುಗು, ಸಿಡಿಲು ಸಹಿತ ಧಾರಾಕಾರವಾಗಿ ಸುರಿದು ನಾಲ್ಕು ಕೆರೆಗಳು ಭರ್ತಿಯಾಗಿ ಕೋಡಿ ಬಿದ್ದಿವೆ. ಗ್ರಾಮಗಳ ಮುಖಂಡರು ಕೋಡಿಬಿದ್ದ ಕೆರೆಗಳಿಗೆ ಗಂಗಾಪೂಜೆ ನೆರವೇರಿಸಿ, ಬಾಗಿನ ಅರ್ಪಿಸಿದರು.

ಮನೆಗಳಿಗೆ ಹಾನಿ: ತಾಲೂಕಿನ ಮರಿಕುಂಟೆ ಗ್ರಾಮದಲ್ಲಿ ಮನೆ ಗೋಡೆ ಕುಸಿದು ಮತ್ತೊಮ್ಮೆ ಮಳೆ ಸುರಿದರೆ ಮನೆ ಸಂಪೂರ್ಣ ಬೀಳುವ ಆತಂಕ ಉಂಟಾಗಿದೆ. ದಿದ್ದಿಗೆ ಗ್ರಾಮದಲ್ಲಿ ವಾಸದ ಮನೆ ಭಾಗಶಃ ಹಾನಿಯಾಗಿದೆ. ಬಿಳಿಚೋಡು ಗ್ರಾಮದಲ್ಲಿ ಎರಡು ಮನೆಗಳ ಗೋಡೆ ಕುಸಿದು ಬಿದ್ದಿವೆ. ಮಾದಮುತ್ತೇನಹಳ್ಳಿ ಗ್ರಾಮದಲ್ಲೂ ಮನೆ ಶೇ. 70ರಷ್ಟು ಬಿದ್ದಿದೆ.

ಅಡಕೆ ತೋಟಗಳಿಗೆ ನುಗ್ಗಿದ ನೀರು: ತಾಲೂಕಿನ ಮಾದಮುತ್ತೇನಹಳ್ಳಿ ಗ್ರಾಮದಲ್ಲಿ ಬಾಳೆ ತೋಡಗಳಿಗೆ ನೀರು ನುಗ್ಗಿದೆ. ಗಿಡ್ಡನಕಟ್ಟೆ ಮತ್ತು ಮಾಚಿಕೆರೆ ಗ್ರಾಮಗಳ ಸಂಪರ್ಕ ಕಲ್ಪಿಸುವ ಡಾಂಬರ್ ರಸ್ತೆ ಕೊಚ್ಚಿ ಹೋಗಿದ್ದು, ವಾಹನ ಸವಾರರು ಬೇರೆ ಮಾರ್ಗ ಅನುಸರಿಸುವ ಸ್ಥಿತಿ ನಿರ್ಮಾಣವಾಗಿದೆ. ರೈತರು ಬೆಳೆದಿರುವ ಈರುಳ್ಳಿ, ಮೆಕ್ಕೆಜೋಳ, ಹತ್ತಿ, ರಾಗಿ, ದ್ವಿದಳ ಧಾನ್ಯಗಳ ಬೆಳೆಗಳು ಭಾಗಶಃ ನೀರಿನಲ್ಲಿ ಮುಳುಗಿವೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net