ಆಸ್ಪತ್ರೆಗೆ ಬೇಕಿದೆ ತುರ್ತು ಚಿಕಿತ್ಸೆ

Jagaluru, public, hospital,
Published on

ಲೋಕೇಶ್ ಎಂ. ಐಹೊಳೆ ಜಗಳೂರು: ಇದು ಮೇಲ್ನೋಟಕ್ಕೆ ಸರ್ಕಾರಿ ಸಾರ್ವಜನಿಕ ಆಸ್ಪತ್ರೆ. ಆದರೆ, ಒಳಹೊಕ್ಕರೆ ಇದ್ಯಾವುದೋ ಪಾಳು ಬಂಗಲೆಗೆ ಕಾಲಿಟ್ಟ ಅನುಭವವಾಗುತ್ತದೆ.

ಆಸ್ಪತ್ರೆ ಕಟ್ಟಡ ಸಂಪೂರ್ಣ ಶಿಥಿಲಗೊಂಡು ಗೋಡೆ, ಮೇಲ್ಚಾವಣಿಯಲ್ಲಿ ನೀರು ಸೋರಿಕೆಯಾಗುತ್ತಿದೆ. ಜತೆಗೆ, ವೈದ್ಯರ ಕೊರತೆ, ವಿದ್ಯುತ್ ಸಮಸ್ಯೆ ಸೇರಿದಂತೆ ಸಮಸ್ಯೆಗಳ ಸರಮಾಲೆಯಲ್ಲಿ ಆಸ್ಪತ್ರೆ ನರಳುತ್ತಿದೆ.

1940ರಲ್ಲಿ ಕಟ್ಟಡ ನಿರ್ಮಾಣಗೊಂಡಿದ್ದು, ಅಂದಾಜು 80 ವರ್ಷ ಪೂರೈಸಿದೆ. 50 ಹಾಸಿಗೆಗಳಿಂದ ಆರಂಭವಾಗಿದ್ದ ಆಸ್ಪತ್ರೆ ಮಾಜಿ ಶಾಸಕ ಟಿ. ಗುರುಸಿದ್ದನಗೌಡರ ಅವಧಿಯಲ್ಲಿ 100 ಹಾಸಿಗೆಗಳ ಆಸ್ಪತ್ರೆಯನ್ನಾಗಿ ಮೇಲ್ದರ್ಜೆಗೇರಿಸಿದ ನಂತರ ಹಳೆಯ ಕಟ್ಟಡವನ್ನೇ ನವೀಕರಣ ಮಾಡಲಾಗಿತ್ತು.

ತಾಲೂಕಷ್ಟೇ ಅಲ್ಲದೆ ಪಕ್ಕದ ತಾಲೂಕುಗಳಿಂದಲೂ ನೂರಾರು ರೋಗಿಗಳು ಚಿಕಿತ್ಸೆ ಪಡೆಯುತ್ತಿರುವ ಸಾರ್ವಜನಿಕ ಆಸ್ಪತ್ರೆ ಕಟ್ಟಡ ಸಂಪೂರ್ಣ ಸೊರಗಿ ಹೋಗಿದ್ದು, ಕಾಯಕಲ್ಪಕ್ಕೆ ಕಾಯುತ್ತಿದೆ.

ಕಟ್ಟಡ ನಿರ್ಮಿಸುವಾಗ ನೀರಿನ ಪೈಪ್ ಹಾಗೂ ಶೌಚಗೃಹದ ಅಂಡರ್ ಗ್ರೌಂಡ್ ವ್ಯವಸ್ಥೆ ಕಟ್ಟಡದ ತಳಪಾಯದ ಅಡಿಯಿಂದ ಹಾದು ಹೋಗಿರುವುದರಿಂದ ಸಮಸ್ಯೆಗೆ ದಾರಿಮಾಡಿ ಕೊಟ್ಟಂತಾಗಿದೆ.

ಕಟ್ಟಡಕ್ಕೆ ವಿದ್ಯುತ್ ವ್ಯವಸ್ಥೆ ಆಗಿನ ಜನಸಂಖ್ಯೆಗೆ ಅನುಗುಣವಾಗಿ ವ್ಯವಸ್ಥೆ ಮಾಡಲಾಗಿದೆ. ಈಗಿನ ಜನಸಂಖ್ಯೆಗನುಣವಾಗಿ, ರೋಗಿಗಳ ವ್ಯವಸ್ಥೆಗೆ ಅನುಗುಣವಾಗಿ ಚರಂಡಿ ಕಾಮಗಾರಿಯಾಗಲಿ, ವಿದ್ಯುತ್ ವ್ಯವಸ್ಥೆಯಾಗಲಿ ಬದಲಾವಣೆಯಾಗಿಲ್ಲ. ಇದರಿಂದ ಸಾಕಷ್ಟು ಸಮಸ್ಯೆ ಎದುರಿಸುವಂತಾಗಿದ್ದು, ಸಾರ್ವಜನಿಕರಿಗೆ ಕಿರಿಕಿರಿಯಾಗಿದೆ.

ವೈದ್ಯರ ಕೊರತೆ: ಆಸ್ಪತ್ರೆಯಲ್ಲಿ ವೈದ್ಯರ ಕೊರತೆ ಕಾಡುತ್ತಿದೆ. ಡಾ. ಶಂಕರಪ್ಪ ಎಂಬುವವರು ನಿವೃತ್ತಿಗೊಂಡ ನಂತರ ಎಂಟು ವರ್ಷಗಳಿಂದಲೂ ಪಿಜಿಷಿಯನ್ ವೈದ್ಯರ ಕೊರತೆ ಇದೆ. ಮೊದಲೇ ಈ ತಾಲೂಕು ಹಿಂದುಳಿದ ಮತ್ತು ಬರಗಾಲ ಪೀಡಿತ ಪ್ರದೇಶ ಎಂಬ ಹಣೆ ಪಟ್ಟಿ ಹೊತ್ತುಕೊಂಡಿದೆ. ಬಹುತೇಕ ಜನರು ರೈತರು, ಕೂಲಿಕಾರರಿದ್ದಾರೆ. ಇವರೆಲ್ಲ ಈ ಸರ್ಕಾರಿ ಆಸ್ಪತ್ರೆಗೆ ಅಲವಂಬಿತರಾಗಿರುವುದು ದೊಡ್ಡ ಸಮಸ್ಯೆಯಾಗಿದೆ. ಪಿಜಿಷಿಯನ್ ಖಾಲಿ ಇರುವುದರಿಂದ ಐಸಿಯು ಹಾಗೂ ಪ್ರಯೋಗಾಲಯಗಳಲ್ಲಿ ಸಮರ್ಪಕ ಕಾರ್ಯನಿರ್ವಹಣೆಗೆ ಹಿನ್ನಡೆಯಾಗಿದೆ.

ಆರ್‌ಸಿಸಿಯಲ್ಲಿ ನೀರು ಸೋರಿಕೆ: ಮಳೆಗಾಲ ಬಂದಾಗ ಇದೇನು ಆಸ್ಪತ್ರೆಯೋ ಅಥವಾ ಪಾಳು ಬಿದ್ದ ಬಂಗಲೆಯೋ ಎನ್ನಿಸುತ್ತದೆ. ಕಟ್ಟಡದ ಆರ್‌ಸಿಸಿ ಮೇಲ್ಭಾಗದಿಂದ ನೀರು ತೊಟ್ಟಿಕ್ಕುತ್ತದೆ. ನೆಲದಲ್ಲೆಲ್ಲಾ ನೀರು ನಿಲ್ಲುವುದರಿಂದ ರೋಗಿಗಳಿಗೆ ತೊಂದರೆ ಎದುರಾಗಿದೆೆ. ಇನ್ನು ಇಂಜಕ್ಷನ್ ಕೊಠಡಿ, ಐಸಿಯು, ಔಷಧ ವಿತರಣೆ ಕೊಠಡಿ, ರೋಗಿಗಳ ಕೊಠಡಿಗಳ ಗೋಡೆಗಳೆಲ್ಲ ನೀರಿನಿಂದ ತೇವಗೊಂಡಿದೆ.

ವಿದ್ಯುತ್ ಸಮಸ್ಯೆ: ನೂರು ಹಾಸಿಗೆ ಆಸ್ಪತ್ರೆಯಲ್ಲಿ ವಿದ್ಯುತ್ ಸಮಸ್ಯೆ ಕಾಡುತ್ತಿದೆ. ಎಕ್ಸ್‌ರೇ, ಪ್ರಯೋಗಾಲಯ, ಓಟಿ ಡಯಾಲಿಸಿಸ್ ಮತ್ತು ಐಸಿಯು ರೂಂಗಳಿಗೆ ಹೆಚ್ಚುವರಿಯಾಗಿ ವಿದ್ಯುಚ್ಛಕ್ತಿ ಬೇಕಾಗಿದೆ. ಹಲವು ಬಾರಿ ವಿದ್ಯುತ್ ಶಾರ್ಟ್ ಸರ್ಕ್ಯೂಟ್ ಸಹ ಆಗಿರುವುದರಿಂದ ಬೆಂಕಿ ಕಾಣಿಸಿಕೊಂಡು ಎಲ್ಲರಲ್ಲೂ ಆತಂಕ ಮೂಡಿಸಿದೆ.

ಅನೇಕ ಬಾಧೆಗಳಿಂದ ನರಳುವ ರೋಗಿಗಳು ಹೆಚ್ಚು ಸರ್ಕಾರಿ ಆಸ್ಪತ್ರೆಗೆ ಅವಲಂಬಿತರಾಗುವುದರಿಂದ ನಿತ್ಯ ಜನಸಂದಣಿಯಿಂದ ತುಂಬಿರುತ್ತದೆ. ಆದರೆ ಹಳೆ ಕಟ್ಟಡವಾಗಿದ್ದು, ಕುಸಿದ ಬಿದ್ದರೆ ದೊಡ್ಡ ಪ್ರಮಾಣದಲ್ಲಿ ಸಾವು-ನೋವು ಸಂಭವಿಸುತ್ತವೆ. ಹಾಗಾಗಿ, ಮುಂಜಾಗ್ರತವಾಗಿ ಕಟ್ಟಡ ತೆರವುಗೊಳಿಸಿ ಕಾಯಕಲ್ಪ ನೀಡಬೇಕು.
l ಲೋಕೇಶ್ ಪಿ. ಸಾರ್ವಜನಿಕ

ಪಟ್ಟಣದ ಹೃದಯ ಭಾಗದಲ್ಲಿ ಸಾರ್ವಜನಿಕ ಆಸ್ಪತ್ರೆ ಇದ್ದು, ಜನಸಂಖ್ಯೆ ಬೆಳವಣಿಗೆಯಿಂದ ಜಾಗ ಸಾಕಾಗುತ್ತಿಲ್ಲ. ಆದ್ದರಿಂದ ಪಟ್ಟಣದ ಹೊರ ಭಾಗಕ್ಕೆ ಆಸ್ಪತ್ರೆ ಸ್ಥಳಾಂತರಿಸಿ ಹೊಸ ಕಟ್ಟಡ ನಿರ್ಮಿಸಬೇಕು. ಈ ಮೂಲಕ ಸಾರ್ವಜನಿಕರಿಗೆ ಉತ್ತಮವಾದ ಸೇವೆ ನೀಡಬೇಕು.
l ರಾಜು, ಹನುಮಂತಾಪುರ.

ಆಸ್ಪತ್ರೆಯ ದುಸ್ಥಿತಿ ಬಗ್ಗೆ ಸಂಪೂರ್ಣ ಮಾಹಿತಿ ಪಡೆದುಕೊಂಡು ಪಟ್ಟಣದ ವಿಶಾಲವಾದ ಜಾಗದಲ್ಲಿ ಹೊಸ ಆಸ್ಪತ್ರೆ ನಿರ್ಮಿಸುವ ಉದ್ದೇಶ ಹೊಂದಲಾಗಿದೆ. ಅಧಿಕಾರಿಗಳು, ವೈದ್ಯರು, ಹಿರಿಯ ಮಾರ್ಗದರ್ಶನ ಪಡೆದು ಆದಷ್ಟು ಬೇಗ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗುವುದು.
l ಬಿ. ದೇವೇಂದ್ರಪ್ಪ, ಶಾಸಕರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net