

ಜಗಳೂರು: ನರೇಗಾ ಯೋಜನೆಯಡಿ ನೈಸರ್ಗಿಕ ಸಂಪನ್ಮೂಲ ನಿರ್ವಹಣೆಗೆ ಹೆಚ್ಚಿನ ಆದ್ಯತೆ ನೀಡಲಾಗಿದ್ದು, ಅಂದಾಜು 10 ಕೋಟಿ ರೂ. ವೆಚ್ಚದಲ್ಲಿ ಗ್ರಾಮೀಣ ರಸ್ತೆ, ಚರಂಡಿ ಕಾಮಗಾರಿ ಕೈಗೆತ್ತಿಕೊಳ್ಳಲಾಗುವುದು ಎಂದು ಜಿಲ್ಲಾ ಪಂಚಾಯಿತಿ ಸಿಇಒ ಸುರೇಶ್ ಇಟ್ನಾಳ್ ಹೇಳಿದರು.
ಪಟ್ಟಣದ ಪ್ರವಾಸಿ ಮಂದಿರದ ಸಭಾಂಗಣದಲ್ಲಿ ಮಂಗಳವಾರ ಶಾಸಕ ಚಿಕ್ಕಮ್ಮನಹಟ್ಟಿ ಬಿ. ದೇವೇಂದ್ರಪ್ಪ ಅಧ್ಯಕ್ಷತೆಯಲ್ಲಿ ಏರ್ಪಡಿಸಿದ್ದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿದರು.
ನರೇಗಾ ಯೋಜನೆಯಡಿ ಕೇವಲ ಹೂಳೆತ್ತುವ ಕಾಮಗಾರಿ ನಡೆಯುತ್ತಿದೆ ಎಂಬ ಅಪಸ್ವರ ಕೇಳಿಬಂದಿದೆ. ಹಾಗಾಗಿ, ನೈಸರ್ಗಿಕ ಸಂಪನ್ಮೂಲ ನಿರ್ವಹಣೆ ಹಾಗೂ ಕೂಲಿಕಾರರಿಗೆ ಕೂಲಿ ಕೊಡಲು ಒತ್ತು ನೀಡಲಾಗುವುದು. ಇದರಲ್ಲಿ ಶೇ. 40ರಷ್ಟು ಸಾಮಗ್ರಿ ವೆಚ್ಚ ಮಾಡಲು ಅವಕಾಶವಿದೆ ಎಂದರು.
2024-25ನೇ ಸಾಲಿನಲ್ಲಿ 174 ಗ್ರಾವೆಲ್, ಸಿಸಿ ರಸ್ತೆಗಳ ಕಾಮಗಾರಿ ತೆಗೆದುಕೊಳ್ಳಲಾಗಿದೆ. ಇದರಲ್ಲಿ 98 ಕಾಮಗಾರಿ ಅಂದಾಜುಪಟ್ಟಿ ತಯಾರಾಗಿದ್ದು ಕೆಲಸ ಆರಂಭಿಸಲಾಗುತ್ತಿದೆ. ಉಳಿದ ಕಾಮಗಾರಿ ಹಂತ ಹಂತವಾಗಿ ಮಾಡಲಾಗುವುದು. 112 ಚರಂಡಿಗಳ ಕಾಮಗಾರಿ ಮಾಡಲಾಗುವುದು, ಇದರಲ್ಲಿ 58 ಕ್ರಿಯಾಯೋಜನೆಗಳು ಸಿದ್ಧವಾಗಿವೆ ಎಂದರು.
ನರೇಗಾ ಯೋಜನೆಯಡಿ ಪ್ರತಿ ವರ್ಷ, ನಿತ್ಯವೂ 13ಸಾವಿರ ಕೂಲಿಕಾರರು ಕೆಲಸ ಮಾಡುತ್ತಿದ್ದರು. ಆದರೆ, ಈ ವರ್ಷ 26 ಸಾವಿರದವರೆಗೂ ಕೂಲಿಕಾರರ ಕೆಲಸ ಮಾಡುತ್ತಿದ್ದಾರೆ. ಇದು ಜೂನ್ ತಿಂಗಳ ಗುರಿ ಸಾಧನೆಯಾಗಿದೆ. ಈಗ ಪ್ರತಿ ಕೂಲಿಕಾರರಿಗೆ 349 ರೂ. ಪಾವತಿ ಮಾಡಲಾಗುತ್ತಿದೆ ಎಂದರು.
ತಾಲೂಕಿನ ಸೊಕ್ಕೆ ಮತ್ತು ಕೆಚ್ಚೇನಹಳ್ಳಿ ಎರಡು ಗ್ರಾಪಂಗಳಲ್ಲಿ ಪ್ರಾಯೋಗಿಕವಾಗಿ ಬದು ನೀರು ನಿರ್ವಹಣೆಗೆ ಯೋಜನಾ ಆಯುಕ್ತರ ಅನುಮೋದನೆಗೆ ಹೋಗಿದೆ. ರಾಜ್ಯ ಮಟ್ಟದಲ್ಲೂ ತಾಂತ್ರಿಕ ಸಹಕಾರ ಕೊಡುತ್ತಿದ್ದಾರೆ. ಈ ವ್ಯಾಪ್ತಿಯ ಎಲ್ಲ ಗ್ರಾಮಗಳಲ್ಲೂ ಚರಂಡಿ ನಿರ್ಮಾಣ ಮಾಡಲಾಗುತ್ತದೆ. ಶಾಲೆಯ ಅಭಿವೃದ್ಧಿ ಕಾಮಗಾರಿ ತೆಗೆದುಕೊಳ್ಳಲಾಗಿದೆ. ಇದರಲ್ಲಿ ಶಾಲಾ ಕಾಂಪೌಂಡ್ 60, ಶೌಚಗೃಹ 75, ಅಡುಗೆ ಕೋಣೆ 23, ಆಟದ ಮೈದಾನ 47 ಕಾಮಗಾರಿ ತೆಗೆದುಕೊಳ್ಳಲಾಗಿದೆ ಎಂದರು.
ಇ-ಸ್ವತ್ತು ವಿಚಾರವಾಗಿ ಸಾಕಷ್ಟು ನಮಗೆ ಸಾಕಷ್ಟು ದೂರು ಬಂದಿವೆ. ಈಗ ಸರ್ವೇಯಾಗಿ ಪಿಡಿಒ ಲಾಗಿನ್‌ಗೆ ವಾಪಸ್ ಬಂದಿರುವುದು ನಮ್ಮ ಜಿಲ್ಲೆಯಲ್ಲಿ 30 ಇವೆ. ಇದರಲ್ಲಿ ಜಗಳೂರಿನ 7 ಇವೆ. ಆದರೆ, ಸರ್ವೇ ಹಂತದಲ್ಲಿ ತಡವಾಗುವುದರಿಂದ ಸಮಸ್ಯೆಯಾಗುತ್ತಿದೆ. ಚಿಕ್ಕಬಳ್ಳಾಪುರದಲ್ಲಿ ರಾಜ್ಯ ಸರ್ಕಾರ ಪ್ರಾಯೋಗಿಕವಾಗಿ ದಿಶಾಂಕ್ ಆ್ಯಪ್ ಬಳಸಿಕೊಂಡು ಸರ್ವೇಗೆ ಹೋಗದೇ ಪಂಚಾಯಿತಿಗಳಲ್ಲಿ ಮಾಡಿಕೊಡಲು ಸಿದ್ಧತೆ ಮಾಡುತ್ತಿದ್ದು, ಯಶಸ್ವಿಯಾದರೆ ರಾಜ್ಯದ ಎಲ್ಲ ಕಡೆ ಮಾಡಲಾಗುತ್ತದೆ ಎಂದರು.
ಅಂಗನವಾಡಿ ಕೇಂದ್ರಗಳ ಆಹಾರ ಪದಾರ್ಥಗಳನ್ನು ಆಹಾರ ಸುರಕ್ಷತಾ ಪ್ರಾಧಿಕಾರದ ಅಧಿಕಾರಿಗಳ ಗಮನಕ್ಕೆ ತಂದು ಸ್ಯಾಂಪಲ್ ತರಿಸಿ ಪರೀಕ್ಷೆ ಮಾಡಿಸಿ ವರದಿ ನೀಡುವಂತೆ ಸೂಚನೆ ನೀಡಲಾಗುವುದು ಎಂದು ಸಿಇಒ ತಿಳಿಸಿದರು.
ಶಾಸಕ ಚಿಕ್ಕಮ್ಮನಹಟ್ಟಿ ಬಿ. ದೇವೇಂದ್ರಪ್ಪ ಮಾತನಾಡಿ, ಬಹುಗ್ರಾಮ ಕುಡಿಯುವ ನೀರು ಯೋಜನೆಯಿಂದ ಪ್ರತಿ ಹಳ್ಳಿಗೂ ಶುದ್ಧವಾದ ನೀರು ಪೂರೈಸಬಹುದು. 57 ಕೆರೆಗಳಿಗೆ ನೀರು ತುಂಬಿಸುವ ಯೋಜನೆಯಡಿ ಶೀಘ್ರವೇ 33 ಕೆರೆಗಳಿಗೆ ನೀರು ತುಂಬಲಿದೆ. ಭದ್ರಾ ಮೇಲ್ದಂಡೆ ಯೋಜನೆ ಮತ್ತಿತರ ಮೂರು ಯೋಜನೆಗಳಿಂದ ಜಗಳೂರಿನ ಚಿತ್ರಣವೇ ಬದಲಾಗಲಿದೆ ಎಂದರು.
ಮರೇನಹಳ್ಳಿ ರಸ್ತೆಯ ಪಕ್ಕದಲ್ಲಿ ಕೆಎಸ್‌ಆರ್ ಟಿಸಿ ಡಿಪೋ ಹಾಗೂ ಸರ್ಕಾರಿ ಆಸ್ಪತ್ರೆ ನಿರ್ಮಿಸಲು ಚಿಂತನೆ ನಡೆಸಲಾಗಿದ್ದು, ಶೀಘ್ರವೇ ಸರ್ಕಾರದಿಂದ ಅನುದಾನ ತಂದು ಕಾಮಗಾರಿಗೆ ಚಾಲನೆ ನೀಡಲಾಗುವುದು ಎಂದು ಹೇಳಿದರು.
ಅಕ್ರಮ ವಿಂಡ್ ಫ್ಯಾನ್‌ಗಳಿಗೆ ಕ್ರಮ: ಜಗಳೂರು ತಾಲೂಕಿನಲ್ಲಿ ವಿಂಡ್‌ಫ್ಯಾನ್ ಹೆಚ್ಚು ಅಳವಡಿಸುತ್ತಿರುವುದು ಗಮನಕ್ಕೆ ಬಂದಿದೆ. ಭೂ ಪರಿವರ್ತನೆ ಮಾಡುವುದು, ಅದರೊಳಗೆ ನಡುವೆ ಚಟುವಟಿಕೆ ನಿಯಂತ್ರಣ ಮಾಡುವ ಸಂಪೂರ್ಣ ಅಧಿಕಾರ ಕಂದಾಯ ಇಲಾಖೆಗೆ ಇರುತ್ತದೆ. ಹಾಗಾಗಿ, ಸಾರ್ವಜನಿಕರ ದೂರು ಪಡೆದು ಪರಿಶೀಲನೆ ನಡೆಸಿ ಮಾಹಿತಿ ನೀಡುವಂತೆ ಸಿಇಒ ಸುರೇಶ್ ಇಟ್ನಾಳ್ ಅವರು ತಹಸೀಲ್ದಾರ್ ಕಲೀಂವುಲ್ಲಾ ಅವರಿಗೆ ಸೂಚನೆ ನೀಡಿದರು. ಈ ಬಗ್ಗೆ ಡಿಸಿ ಗಮನಕ್ಕೂ ತರಲಾಗುವುದು. ಇದುವರೆಗೂ ಎಷ್ಟು ವಿಂಡ್‌ಫ್ಯಾನ್ ಅಳವಡಿಸಲಾಗಿದೆ ಎಂಬ ಬಗ್ಗೆ ಗೂಗಲ್ ತೆಗೆದುಕೊಂಡು ತೆರಿಗೆ ವಸೂಲಿ ಮಾಡಲಾಗುವುದು ಎಂದು ಹೇಳಿದರು.
ತಹಸೀಲ್ದಾರ್ ಕಲೀಂವುಲ್ಲಾ, ಟಿಎಚ್‌ಒ ವಿಶ್ವನಾಥ್, ಸರ್ಕಾರಿ ಆಸ್ಪತ್ರೆಯ ವೈದ್ಯಾಧಿಕಾರಿ ಡಾ. ಷಣ್ಮುಖಪ್ಪ ಮತ್ತಿತರರಿದ್ದರು.