

ಜಗಳೂರು: ತಾಲೂಕಿನ ಚಿಕ್ಕಮ್ಮನಹಟ್ಟಿ, ನಿಬಗೂರು ಮತ್ತಿತರ ಗ್ರಾಮಗಳಲ್ಲಿ ಕೂಲಿಕಾರರಿಂದ ನಡೆಯುತ್ತಿರುವ ನರೇಗಾ ಯೋಜನೆಯ ಕಾಮಗಾರಿಗಳನ್ನು ಬುಧವಾರ ಜಿಲ್ಲಾ ಪಂಚಾಯಿತಿ ಉಪಕಾರ್ಯದರ್ಶಿ ಬಿ.ಆನಂದ್ ಪರಿವೀಕ್ಷಣೆ ನಡೆಸಿದರು.
ಗ್ರಾಮದ ಗೋಕಟ್ಟೆಯ ಹೂಳೆತ್ತುವ ಸ್ಥಳಕ್ಕೆ ಭೇಟಿ ನೀಡಿ, ಕೆಲಸದ ಸ್ಥಳದಲ್ಲಿ ಅವಶ್ಯಕ ಇರುವ ನೆರಳು, ಕುಡಿವ ನೀರು, ಪ್ರಥಮ ಚಿಕಿತ್ಸೆ ಕಿಟ್‌ಗಳನ್ನು ಪರಿಶೀಲಿಸಿದರು. ಅಲ್ಲದೇ ಕೂಲಿಕಾರರನ್ನು ಮಾತನಾಡಿಸಿ ಅವರ ಸಮಸ್ಯೆಗಳನ್ನು ಆಲಿಸಿದರು.
ನಂತರ ಸುದ್ದಿಗಾರರೊಂದಿಗೆ ಮಾತನಾಡಿ, ಜಗಳೂರು ತಾಲೂಕಿನಲ್ಲಿ ಸದ್ಯದ ಪರಿಸ್ಥಿತಿಯಲ್ಲಿ ಕೂಲಿಕಾರರು ಕೆಲಸ ಕೇಳಿಕೊಂಡು ಗ್ರಾಮ ಪಂಚಾಯಿತಿಗಳಿಗೆ ನಮೂನೆ 6ರಲ್ಲಿ ಅರ್ಜಿ ಸಲ್ಲಿಸುತ್ತಿದ್ದಾರೆ. ಉದ್ಯೋಗ ಅರ್ಜಿಗಳನ್ನು ತುರ್ತಾಗಿ ವಿಲೇ ಮಾಡಿ ಕೂಡಲೇ ಕೆಲಸ ನೀಡುವಂತೆ ಎಲ್ಲಾ ಪಂಚಾಯಿತಿ ಅಧಿಕಾರಿಗಳಿಗೆ ತಾಕೀತು ಮಾಡಲಾಗಿದೆ ಎಂದು ತಿಳಿಸಿದರು.
ಜಿಪಂ ಸಹಾಯಕ ಕಾರ್ಯದರ್ಶಿ ಬಸವರಾಜ್, ಸಹಾಯಕ ಯೋಜನಾಧಿಕಾರಿ ಆನಂದ್, ತಾಪಂ ಇಒ ಮಲ್ಲನಾಯ್ಕ, ಸಂಯೋಜಕಾಧಿಕಾರಿ ಚಂದನ್ ಮತ್ತಿತರಿದ್ದರು.