ನ್ಯಾಯವಾದಿಗಳ ಸಂಘದಿಂದ ಶಾಸಕ, ಡಿಸಿಗೆ ಮನವಿ

Jagaluru, Main Road, Extension,
Published on

ಜಗಳೂರು: ಪಟ್ಟಣದ ಮುಖ್ಯರಸ್ತೆಯನ್ನು ವಿಸ್ತರಿಸಿ ಅಭಿವೃದ್ಧಿಗೆ ಸಹಕರಿಸಬೇಕು ಎಂದು ಒತ್ತಾಯಿಸಿ ನ್ಯಾಯವಾದಿಗಳ ಸಂಘದಿಂದ ಜಿಲ್ಲಾಧಿಕಾರಿ ಜಿ.ಎಂ ಗಂಗಾಧರಸ್ವಾಮಿ, ಶಾಸಕ ಚಿಕ್ಕಮ್ಮನಹಟ್ಟಿ ಬಿ.ದೇವೇಂದ್ರಪ್ಪ ಅವರಿಗೆ ಸೋಮವಾರ ಮನವಿ ಸಲ್ಲಿಸಿತು.

ಪಟ್ಟಣದ ಮಧ್ಯಭಾಗದಲ್ಲಿ ಮಲ್ಪೆ- ಮೊಳಕಾಲ್ಮೂರು ರಾಜ್ಯ ಹೆದ್ದಾರಿ ಹಾದು ಹೋಗಿದ್ದು, ಬೃಹತ್ ಲಾರಿ, ಬಸ್‌ಗಳು ಮತ್ತಿತರ ಸಾವಿರಾರು ವಾಹನಗಳು ನಿತ್ಯವೂ ಸಂಚರಿಸುತ್ತಿವೆ. ಈ ರಸ್ತೆ ಯಾವಾಗಲೂ ಸಂಚಾರ ದಟ್ಟಣೆಯಿಂದ ಕೂಡಿರುತ್ತದೆ. ಅನಧೀಕೃತ ಕಟ್ಟಡಗಳನ್ನು ತೆರವುಗೊಳಿಸಬೇಕು ಎಂದು ಮನವಿ ಮಾಡಿದರು.

ವಕೀಲ ಡಿ.ಶ್ರೀವಾಸ್ ಮಾತನಾಡಿ, ಪಟ್ಟಣದ ಮುಖ್ಯ ರಸ್ತೆಯ ಮಳಿಗೆಗಳ ಮಾಲೀಕರು ಬಡವರಲ್ಲ. ರಾಜಕಾಲುವೆ ಮೇಲೆ ದೊಡ್ಡ ಕಟ್ಟಡಗಳು ತಲೆ ಎತ್ತಿವೆ. ಶಿಕ್ಷಣ ಸಂಸ್ಥೆ, ಪೆಟ್ರೋಲ್ ಬಂಕ್‌ಗಳನ್ನು ನಿರ್ಮಿಸಿದ್ದಾರೆ. ಅಂಥವರು ಇವತ್ತು ಹೈಕೋರ್ಟ್‌ಗೆ ಹೋಗಿದ್ದಾರೆ. ಆದರೆ, ಪಟ್ಟಣದ ಅಭಿವೃದ್ಧಿಗೆ ಎಲ್ಲರು ಕೈ ಜೋಡಿಸಬೇಕು. ರಸ್ತೆ ವಿಸ್ತರಣೆಗೆ ಅವಕಾಶ ಮಾಡಿಕೊಡಬೇಕು ಎಂದು ಮನವಿ ಮಾಡಿದರು.

ಶಾಸಕ ಚಿಕ್ಕಮ್ಮನಹಟ್ಟಿ ಬಿ.ದೇವೇಂದ್ರಪ್ಪ ಪ್ರತಿಕ್ರಿಯಿಸಿ, ರಸ್ತೆ ವಿಸ್ತರಣೆ ವಿಚಾರವನ್ನು ನಾನು ಧ್ವನಿ ಎತ್ತಿದ್ದೆ. ಅದಕ್ಕೆ ಎಲ್ಲರು ಸಹಕಾರ ನೀಡುತ್ತಿರುವುದು ಸಂತಸ ತಂದಿದೆ. ಕೊನೆಯವರೆಗೂ ನಮ್ಮೊಂದಿಗಿರಿ, ಅಭಿವೃದ್ಧಿಪಡಿಸೋಣ ಎಂದರು.

ಮಳಿಗೆ ಮಾಲೀಕರ ಪರ ವಕಲತ್ತು ನಿಷಿದ್ಧ: ಪಟ್ಟಣದ ಅಭಿವೃದ್ಧಿಗೆ ಕಾನೂನು ಪ್ರಕಾರವಾಗಿ ಸಹಕಾರ ಕೊಡುತ್ತೇವೆ. ರಸ್ತೆ ವಿಸ್ತರಣೆಗೆ ಅಡ್ಡಿಪಡಿಸಿ ಕೇಸು ಹಾಕಿದರೆ ಅವರ ಪರ ತಾಲೂಕು ವಕೀಲರ ಸಂಘವು ಯಾವುದೇ ಕಾರಣಕ್ಕೂ ವಕಾಲತ್ತು ವಹಿಸುವುದಿಲ್ಲ. ಹಾಗಾಗಿ ಇದರ ಸಂಬಂಧ ಸಂಘದಿಂದ ನಿರ್ಣಯ ಕೈಗೊಂಡಿದ್ದೇವೆ. ಮುಂದಿಟ್ಟ ಹೆಜ್ಜೆಯನ್ನು ಹಿಂದೆ ತೆಗೆಯಬೇಡಿ ಎಂದು ವಕೀಲರ ಸಂಘ ಜಿಲ್ಲಾಧಿಕಾರಿಗೆ ಮನವಿ ಮಾಡಿತು.

ವಕೀಲರ ಸಂಘದ ಅಧ್ಯಕ್ಷ ಟಿ. ಬಸವರಾಜ್, ಕಾರ್ಯದರ್ಶಿ ಪರಶುರಾಮ, ಉಪಾಧ್ಯಕ್ಷ ಪ್ರಕಾಶ್, ವಕೀಲರಾದ ಎಸ್.ಬಿ. ಬಸವರಾಜ, ಎ. ರಂಗನಾಥ, ಎ.ಸಿ ತಿಪ್ಪೇಸ್ವಾಮಿ, ರುದ್ರೇಶ್, ತಿಪ್ಪೇಸ್ವಾಮಿ, ನಾಗೇಶ್, ಸಣ್ಣ ಓಬಯ್ಯ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net