

ಜಗಳೂರು: ಜಗಳೂರು ತಾಲೂಕಿನ 57 ಕೆರೆಗಳಿಗೆ ತುಂಬಿಸುವ ಯೋಜನೆಯಡಿ ಈಗಾಗಲೇ 36 ಕೆರೆಗಳಿಗೆ ನೀರು ಹರಿಯುತ್ತಿದ್ದು, ಕೆರೆಗಳ ವೀಕ್ಷಣೆಗೆ ಸಿರಿಗೆರೆ ಡಾ.ಶಿವಮೂರ್ತಿ ಸ್ವಾಮೀಜಿಯನ್ನು ಆಹ್ವಾನಿಸಲು ಸಮಿತಿ ರಚಿಸಲಾಗುವುದು ಎಂದು ಶಾಸಕ ಚಿಕ್ಕಮ್ಮನಹಟ್ಟಿ ಬಿ.ದೇವೇಂದ್ರಪ್ಪ ಹೇಳಿದರು.
ಪಟ್ಟಣದ ತರಳಬಾಳು ಕೇಂದ್ರದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿ, ಮಾಜಿ ಶಾಸಕರು ಮತ್ತು ಇಂಜಿನಿಯರ್ ಒಳಗೊಂಡ ಹತ್ತು ಮಂದಿ ಸದಸ್ಯರ ಸಮಿತಿ ರಚಿಸಿ ಸಾಧಕ- ಬಾಧಕಗಳನ್ನು ಚರ್ಚಿಸಿ ಶ್ರೀಗಳ ಒಪ್ಪಿಗೆ ಪಡೆದು ನಂತರ ಕಾರ್ಯಕ್ರಮಕ್ಕೆ ದಿನಾಂಕ ನಿಗದಿ ಮಾಡಲಾಗುವುದು ಎಂದರು.
ಡಾ.ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿಗಳನ್ನು ಆಹ್ವಾನಿಸುವ ಮೊದಲು ಸಾಕಷ್ಟು ಪೂರ್ವ ತಯಾರಿ ಮಾಡಿಕೊಳ್ಳಬೇಕಿದೆ. ಶ್ರೀಗಳನ್ನು ಯಾವ ಮಾರ್ಗದ ಮೂಲಕ ಕರೆ ತರಬೇಕು. ಬಯಲು ರಂಗಮಂದಿರದಲ್ಲಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗುವುದು. ಅಲ್ಲದೇ ದಾಸೋಹದ ವ್ಯವಸ್ಥೆ ಮಾಡಲು ಸಿದ್ಧತೆ ಮಾಡಿಕೊಳ್ಳಬೇಕು. ಇಷ್ಟೆಲ್ಲ ಕಾರ್ಯ ಆಗಬೇಕೆಂದರೆ ಒಂದು ಸಮಿತಿ ರಚನೆ ಆಗಬೇಕು. ರಾಜಕೀಯ ಮರೆತು ಮಾಜಿ ಶಾಸಕರಾದ ಎಸ್.ವಿ.ರಾಮಚಂದ್ರ ಮತ್ತು ಎಚ್.ಪಿ.ರಾಜೇಶ್ ಎಲ್ಲರೂ ಒಂದುಗೂಡಿ ಸಲಹೆ ಪಡೆದು ಶ್ರೀಗಳನ್ನು ಭೇಟಿ ಮಾಡಿ ಚರ್ಚಿಸಿದ ನಂತರ ಶ್ರೀಗಳು ಸಮಯ ಕೊಟ್ಟ ಬಳಿಕ ಸಿದ್ಧತೆ ಮಾಡಿಕೊಳ್ಳಲಾಗುವುದು ಎಂದರು.
ಮಾಜಿ ಶಾಸಕ ಎಚ್.ಪಿ.ರಾಜೇಶ್ ಮಾತನಾಡಿ, ಶ್ರೀಗಳು ತಾಲೂಕಿನ ಎಲ್ಲ ಕೆರೆಗಳಿಗೆ ಭೇಟಿ ನೀಡುತ್ತಿರುವುದು ಸಂತೋಷದ ವಿಷಯ. ನಾನು ಶಾಸಕನಾಗಿದ್ದ ಅವಧಿಯಲ್ಲಿ ಯೋಜನೆ ಜಾರಿಯಾಗಿತ್ತು. ಸಿದ್ದರಾಮಯ್ಯ, ಬಿ.ಎಸ್.ಯಡಿಯೂರಪ್ಪ ಮತ್ತು ಕುಮಾರಸ್ವಾಮಿ ಹಾಗೂ ಎಸ್.ವಿ.ರಾಮಚಂದ್ರ ಮತ್ತು ಈಗಿನ ಶಾಸಕ ಬಿ.ದೇವೇಂದ್ರಪ್ಪ ಕೊಡುಗೆ ಇದೆ. ಕೆರೆ ತುಂಬಿಸುವ ಕಾರ್ಯದಲ್ಲಿ ಶ್ರೀಗಳು ಆಧುನಿಕ ಭಗೀರಥರು ಎಂದರು.
ಇನ್ನು 20ಕ್ಕೂ ಅಧಿಕ ಕೆರೆಗಳಿಗೆ ನೀರು ಹರಿಸುವ ಕಾರ್ಯ ಬಾಕಿ ಇದೆ. ರಂಗಯ್ಯನದುರ್ಗ ಕೊಂಡುಕುರಿ ಅರಣ್ಯ ವ್ಯಾಪ್ತಿಯ ಕೆರೆಗಳಿಗೆ ಮತ್ತು ರಾಷ್ಟ್ರೀಯ ಹೆದ್ದಾರಿ ಕ್ರಾಸಿಂಗ್ ನಂತರದ ಕೆರೆಗಳಿಗೆ ಕಾನೂನು ತೊಡಕಿರುವ ಕಾರಣ ಕಾಮಗಾರಿ ಪೂರ್ಣಗೊಳಿಸುವ ಕಾರ್ಯ ಬಾಕಿ ಇದ್ದು ತಕ್ಷಣ ಇಂಜಿನಿಯರ್ ಕ್ರಮ ಕೈಗೊಂಡು ಕಾಮಗಾರಿ ಮುಗಿಸಬೇಕು ಎಂದು ಹೇಳಿದರು.
ಭರಮಸಾಗರ ಕೆರೆ ಸಮಿತಿ ಅಧ್ಯಕ್ಷ ಚೌಲಿಹಳ್ಳಿ ಶಶಿಪಾಟೀಲ್, ತರಳಬಾಳು ಮಠದ ಸಮಿತಿ ಸದಸ್ಯ ನಾಗರಾಜ್, ಜಿಪಂ ಮಾಜಿ ಸದಸ್ಯ ಕೆ.ಪಿ. ಪಾಲಯ್ಯ, ನಿವೃತ್ತ ಶಿಕ್ಷಕ ಓಂಕಾರಪ್ಪ, ನೀರಾವರಿ ನಿಗಮದ ಇಂಜಿನಿಯರ್ ಶ್ರೀಧರ್, ಜೆಡಿಎಸ್ ರಾಜ್ಯ ಪ್ರಧಾನ ಕಾರ್ಯದರ್ಶಿ ಕಲ್ಲೇರುದ್ರೇಶ್, ಚಂದ್ರನಾಯ್ಕ, ಸುರೇಶ್‌ಗೌಡ್ರು, ಎಂ.ಎಸ್.ಪಾಟೀಲ್, ಶಿವನಗೌಡ್ರು, ಕೆಚ್ಚೇನಹಳ್ಳಿ ದೀಪಕ್ ಪಟೇಲ್, ಎನ್.ಎಸ್.ರಾಜಣ್ಣ ಸೇರಿದಂತೆ ಅನೇಕರು ಇದ್ದರು.