ಕೊಡದಗುಡ್ಡದ ವೀರಭದ್ರಸ್ವಾಮಿ ಜಾತ್ರೆಗೆ ತೆರೆ

JLR Jhatrege Tere 12 (2)
Published on

ಜಗಳೂರು: ತಾಲೂಕಿನ ಕೊಡದಗುಡ್ಡದಲ್ಲಿ ಮೂರು ದಿನಗಳಿಂದ ನಡೆಯುತ್ತಿದ್ದ ಶ್ರೀ ವೀರಭದ್ರಸ್ವಾಮಿ ಜಾತ್ರಾ ಮಹೋತ್ಸವ ಗುರುವಾರ ಓಕುಳಿ ಆಚರಣೆಯೊಂದಿಗೆ ಸಂಪನ್ನಗೊಂಡಿತು.

ಗುಡ್ಡದ ಮೇಲೆ ನೆಲೆಸಿರುವ ದೇವರ ಮೂರ್ತಿಯನ್ನು ಬೆಳಗ್ಗೆ ಪಲ್ಲಕ್ಕಿ ಉತ್ಸವದೊಂದಿಗೆ ಬಸವಣ್ಣನ ದೇವಸ್ಥಾನದ ಬಳಿ ನಿರ್ಮಿಸಿದ್ದ ಓಕಳಿ ಮಂಟಪಕ್ಕೆ ಕರೆತರಲಾಯಿತು. ನಂತರ ಪುರವಂತರಿಂದ ಸಮಾಳ ಮೇಳದೊಂದಿಗೆ ವೀರಭದ್ರ ಸ್ವಾಮಿ ಒಡಪು ಸೇವೆ ಜರುಗಿತು. ಬಳಿಕ ನೆರೆದಿದ್ದ ಭಕ್ತರು ಒಬ್ಬರಿಗೊಬ್ಬರು ಬಣ್ಣ ಎರಚಿದರು.

ವೀರಭದ್ರಸ್ವಾಮಿ ಟ್ರಸ್ಟ್ ಅಧ್ಯಕ್ಷ ಉಮೇಶ್, ಉಪಾಧ್ಯಕ್ಷ ಚನ್ನಯ್ಯ, ಕಾರ್ಯದರ್ಶಿ ರುದ್ರೇಶಸ್ವಾಮಿ, ಮಾದಿಹಳ್ಳಿ ವೀರಣ್ಣ ನೇತೃತ್ವ ವಹಿಸಿದ್ದರು.

ಬುಧವಾರ ರಾತ್ರಿ ಓಕುಳಿ ಗುಂಡಿಯನ್ನು ಅರಿಸಿಣ, ಕುಂಕುಮ, ಸುಣ್ಣ, ಎಣ್ಣೆ ಇನ್ನಿತರ ವಸ್ತುಗಳಿಂದ ತುಂಬಿಸಲಾಗಿತ್ತು. ಕೊಡದಗುಡ್ಡ ರಾಜಬೀದಿಯಲ್ಲಿ ಉತ್ಸವ ಮೂರ್ತಿಯ ಅದ್ದೂರಿ ಮೆರವಣಿಗೆ ಜರುಗಿತು.

ಉತ್ತಮ ಮಳೆ ಬೆಳೆ, ಸರ್ವರಿಗೂ ಸಮೃದ್ಧ ಜೀವನ, ತಾಲೂಕಿನಲ್ಲಿ ಸದಾ ಶಾಂತಿ ನೆಲೆಸಲೆಂದು ಜಾತ್ರೆ ಕೊನೆಯ ದಿನ ಓಕುಳಿ ಮಹೋತ್ಸವ ಮಾಡಲಾಗುತ್ತದೆ.
> ರುದ್ರೇಶ ಸ್ವಾಮಿ, ಕಾರ್ಯದರ್ಶಿ ವೀರಭದ್ರಸ್ವಾಮಿ ಟ್ರಸ್ಟ್

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net