ಮೋಟರ್ ಪಂಪ್‌ಸೆಟ್‌ಗಳ ಕೇಬಲ್ ಕಳ್ಳತನ

JLR THEFT
Published on

ಜಗಳೂರು: ಜಮೀನುಗಳಲ್ಲಿ ಮೋಟರ್ ಪಂಪ್‌ಸೆಟ್‌ಗೆ ಅಳವಡಿಸಲಾಗಿದ್ದ ಕೇಬಲ್ ಕಳ್ಳತನ ಪ್ರಕರಣ ದಿನೇದಿನೆ ಹೆಚ್ಚುತ್ತಿದ್ದು, ಶುಕ್ರವಾರ ರಾತ್ರಿ ತಾಲೂಕಿನ ಕಟ್ಟಿಗೆಹಳ್ಳಿ ಗ್ರಾಮದಲ್ಲಿ ಮತ್ತೆ ಕೇಬಲ್ ಕಳ್ಳತನವಾಗಿದೆ.

ಕಟ್ಟಿಗೆಹಳ್ಳಿ ಗ್ರಾಮದ ಬಸವನಗೌಡ, ತಿಪ್ಪೇಸ್ವಾಮಿ, ಬಸವಪ್ರಭು, ಶಿವಕುಮಾರ್ ಹಾಗೂ ಅರಿಶಿಣಗುಂಡಿ ಗ್ರಾಮದ ಮಡಿವಾಳರ ಸಿದ್ದಲಿಂಗಪ್ಪ, ತೋರಣಗಟ್ಟೆ ಗ್ರಾಮದ ರೈತರ ಹೊಲಗಳಲ್ಲಿ ಕೇಬಲ್‌ಗಳ ಸರಣಿ ಕಳ್ಳತನವಾಗಿದೆ.

ಬೇಸಿಗೆ ಆರಂಭವಾಗಿರುವುದರಿಂದ ಜಮೀನುಗಳಲ್ಲಿ ಬಿತ್ತನೆ ಮಾಡಿದ ಬೆಳೆ ಉಳಿಸಿಕೊಳ್ಳಲು ರೈತರು ಹೆಣಗಾಡುತ್ತಿದ್ದರೆ, ಕೇಬಲ್ ಕಳ್ಳತನ ಮತ್ತಷ್ಟು ಹೈರಾಣಾಗಿಸಿದೆ.

ತಡ ರಾತ್ರಿ ಜಮೀನಿಗೆ ನುಗ್ಗುವ ಕಳ್ಳರು ಎಲ್ಲ ಹೊಸಲ ಪಂಪ್‌ಸೆಟ್ ಕೇಬಲ್‌ಗಳನ್ನು ಕಟ್ ಮಾಡಿಕೊಂಡು ಪರಾರಿಯಾಗುತ್ತಿದ್ದಾರೆ. ವಿದ್ಯುತ್ ಸಂಪರ್ಕ ಕಲ್ಪಿಸುವ ಕೇಬಲ್ ವೈರ್ ಕತ್ತರಿಸಿರುವುದರಿಂದ ಬೆಳೆಗಳಿಗೆ ನೀರು ಹಾಯಿಸಲು ತೊಂದರೆಯಾಗುತ್ತಿದೆ.

ಆದ್ದರಿಂದ ಸಂಬಂಧಿಸಿದ ಅಧಿಕಾರಿಗಳು, ಪೊಲೀಸರು ಈ ಪ್ರಕರಣ ಗಂಭೀರವಾಗಿ ತೆಗೆದುಕೊಂಡು ಕಳ್ಳತನಕ್ಕೆ ಬ್ರೇಕ್ ಹಾಕಬೇಕು. ಇಲ್ಲದಿದ್ದರೆ ಪೊಲೀಸ್ ಠಾಣೆ ಮುಂಭಾಗದಲ್ಲಿ ಪ್ರತಿಭಟನೆ ನಡೆಸಲಾಗುವುದು ಎಂದು ರೈತರಾದ ಬಸವಪ್ರಭು, ತಿಪ್ಪೇಸ್ವಾಮಿ, ಬಸವನಗೌಡ ಎಚ್ಚರಿಕೆ ನೀಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net