

ಜಗಳೂರು: ರಾಜ್ಯ ಸರ್ಕಾರ ಬರಪೀಡಿತ ಪಟ್ಟಿಯಲ್ಲಿ ಜಗಳೂರು ತಾಲೂಕನ್ನು ಘೋಷಣೆ ಮಾಡಿದ್ದು, ರೈತರಿಗೆ ಅನುಕೂಲವಾಗಿದೆ ನೀಡಲಿದೆ ಎಂದು ಶಾಸಕ ಚಿಕ್ಕಮ್ಮನಹಟ್ಟಿ ಬಿ. ದೇವೇಂದ್ರಪ್ಪ ವಿಶ್ವಾಸ ವ್ಯಕ್ತಪಡಿಸಿದರು.
ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಹಿಂದೆ ಸಮೀಕ್ಷೆಯಲ್ಲಿ ಜಗಳೂರು ಮಧ್ಯಮ ಬರಪಟ್ಟಿಯಲ್ಲಿ ಸೇರಿದೆ ಎಂದು ವಿರೋಧಿಸಿ ರೈತಪರ ಸಂಘಟನೆಗಳು ಪ್ರತಿಭಟನೆ ನಡೆಸಿದವು. ಇದನ್ನು ಗಮನದಲ್ಲಿಟ್ಟುಕೊಂಡು ಕಂದಾಯ ಇಲಾಖೆ, ಕೃಷಿ ಹಾಗೂ ತೋಟಗಾರಿಕೆ ಜಂಟಿ ಸಮೀಕ್ಷೆ ಮಾಡಿಸಿ ಸರ್ಕಾರಕ್ಕೆ ವರದಿ ಕಳಿಸಲಾಗಿತ್ತು. ಅದನ್ನು ಮನಗಂಡ ಸರ್ಕಾರ ಘೋಷಣೆ ಮಾಡಿದೆ ಎಂದರು.
ತಾಲೂಕು ಅನೇಕ ವರ್ಷಗಳಿಂದ ಬರಪೀಡಿತಕ್ಕೆ ತುತ್ತಾಗುತ್ತಾ ಬಂದಿದೆ. ಪ್ರಸಕ್ತ ಸಾಲಿನಲ್ಲಿಯೂ ಮುಂಗಾರು ಮಳೆಯ ವೈಫಲ್ಯದಿಂದ ಬೆಳೆ ಸಂಪೂರ್ಣ ಒಣಗಿವೆ. ವಾಡಿಕೆಗಿಂತ ಶೇ.73ರಷ್ಟು ಮಳೆ ಕೊರತೆಯಾಗಿದೆ. ಈ ಬರಗಾಲ ಘೋಷಣೆಯಿಂದ ರೈತರ ಬೆಳೆಗಳಿಗೆ ಪರಿಹಾರ, ನರೇಗಾ ಯೋಜನೆಯಡಿ ಕೂಲಿಕಾರರಿಗೆ ಮಾನವ ದಿನಗಳು ಏರಿಕೆ ಮಾಡಲಿದೆ. ಅಗತ್ಯವಿದ್ದರೆ ಗೋಶಾಲೆ, ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸಲಾಗುವುದು ಎಂದರು.
ನೆನೆಗುದಿಗೆ ಬಿದ್ದಿರುವ ಭದ್ರಾ ಮೇಲ್ದಂಡೆ ಯೋಜನೆಗೆ ಚುರುಕು ನೀಡಬೇಕು ಎಂದು ಮಾಜಿ ಶಾಸಕ ಎಸ್.ವಿ ರಾಮಚಂದ್ರ ಒತ್ತಾಯಿಸಿದ್ದರು. ಭದ್ರಾ ಮೇಲ್ದಂಡೆ ಯೋಜನೆ ಬಗ್ಗೆ ಗಮನಹಸಿರಿ ಆದಷ್ಟು ಬೇಗ ಕಾಮಗಾರಿಗೆ ಚಾಲನೆ ನೀಡಲಾಗುವುದು ಎಂದು ತಿಳಿಸಿದರು.
ಹಿಂಗಾರು ಮಳೆಗೆ ಕಡಲೆ, ಬಿಳಿಜೋಳ, ಸೂರ್ಯಕಾಂತಿ ಸೇರಿದಂತೆ ವಿವಿಧ ಬೆಳೆ ಬೆಳೆಯಲು ರೈತರು ಸಿದ್ಧರಾಗಿದ್ದಾರೆ. ಆದ್ದರಿಂದ ರೈತರಿಗೆ ಬಿತ್ತನೆ ಬೀಜ, ಗೊಬ್ಬರದ ಕೊರತೆಯಾಗದಂತೆ ಮುಂಜಾಗ್ರತೆ ವಹಿಸಿ ದಾಸ್ತಾನು ಮಾಡಬೇಕು ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದರು.
ತಹಸೀಲ್ದಾರ್ ಅರುಣ್ ಕಾರಗಿ, ಕೃಷಿ ಸಹಾಯಕ ನಿರ್ದೇಶಕ ಮಿಥುನ್ ಕಿಮಾವತ್, ತೋಟಗಾರಿಕಾ ಸಹಾಯಕ ನಿರ್ದೇಶಕ ತೋಟದಯ್ಯ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಷಂಷೀರ್ ಅಹಮದ್, ಕೆಪಿಸಿಸಿ ಸದಸ್ಯ ಕಲ್ಲೇಶ್‌ರಾಜ್ ಪಟೇಲ್, ಮುಖಂಡ ಅನುಪ್ ಮತ್ತಿತರರಿದ್ದರು.