ಕೂಲಿಕಾರ ಕುಟುಂಬಗಳಿಗೆ ಕೆರೆ ದಡವೇ ವಾಸ

Jagaluru, House, Watershed,
Published on

ಸೂರಿಗಾಗಿ ಹಿರೇಮಲ್ಲನಹೊಳೆ ದಲಿತರ ಆಗ್ರಹ I ಶಾಲೆಯಲ್ಲಿ ತಾತ್ಕಾಲಿಕ ಆಶ್ರಯ

ಲೋಕೇಶ್ ಎಂ. ಐಹೊಳೆ ಜಗಳೂರು: ತಾಲೂಕಿನ ಹಿರೇಮಲ್ಲನಹೊಳೆ ಗ್ರಾಮದ ಕೆರೆ ದಡದಲ್ಲಿ 20 ವರ್ಷಗಳಿಂದ ವಾಸಿಸುತ್ತಿರುವ ಕೂಲಿಕಾರರ ಸಮಸ್ಯೆ ಕೇಳುವವರೇ ಇಲ್ಲದಂತಾಗಿದೆ.

ಗ್ರಾಮದಲ್ಲಿ ಪರಿಶಿಷ್ಟ ಜಾತಿಗೆ ಸೇರಿದ ನೂರು ದಲಿತ ಕುಟುಂಬಗಳಿದ್ದು, ಇದರಲ್ಲಿ 50 ಕುಟುಂಬಗಳಿಗೆ ನಿವೇಶನ, ಮನೆಯೇ ಇಲ್ಲ. ಈ ಕುಟುಂಬಗಳು ಕೆರೆ ದಡದಲ್ಲಿ ಕಳೆದ ಎರಡು ದಶಕದಿಂದಲೂ ಬದುಕು ಕಟ್ಟಿಕೊಂಡಿವೆ. ಇಲ್ಲಿನ ಬಹುತೇಕರು ಕೃಷಿ ಮತ್ತಿತರ ಕೆಲಸ ಮಾಡುವ ಕೂಲಿಕಾರರಾಗಿದ್ದಾರೆ.

ಬೇಸಿಗೆ, ಚಳಿಗಾಲದಲ್ಲಿ ದಿನ ದೂಡುವ ಜನರಿಗೆ ಮಳೆಗಾಲ ಬಂದಾಗ ಸಮಸ್ಯೆ ಎದುರಾಗುತ್ತದೆ. ಈವರೆಗೂ ಕೆರೆಗಳಿಗೆ ನೀರು ಬಂದಿರಲಿಲ್ಲ. ಆದರೆ, ಈ ವರ್ಷ ಆರಂಭದಿಂದಲೂ ಉತ್ತಮ ಮಳೆಯಾಗಿದ್ದರಿಂದ ಕೆರೆ ಸಂಪೂರ್ಣ ಭರ್ತಿಯಾಗಿ ಕೋಡಿ ಬಿದ್ದಿದ್ದು, ಮನೆಗಳೆಲ್ಲ ಜಲಾವೃತಗೊಂಡು ಬೀದಿಗೆ ಬಿದ್ದಿದ್ದಾರೆ.

ಮನೆ ಕಳೆದುಕೊಂಡಿರುವ ನಿರಾಶ್ರಿತ ಕುಟುಂಬಗಳನ್ನು ತಾತ್ಕಾಲಿಕವಾಗಿ ಸರ್ಕಾರಿ ಶಾಲೆಗೆ ಸ್ಥಳಾಂತರಿಸಲಾಗಿದೆ. ಮುಂದಿನ ವಾರ ಶಾಲೆ ಪ್ರಾರಂಭವಾದರೆ ಅವರನ್ನು ಎಲ್ಲಿಗೆ ಸ್ಥಳಾಂತರಿಸಬೇಕು, ಅಗತ್ಯ ಸೌಲಭ್ಯಗಳನ್ನು ತಾಲೂಕು ಆಡಳಿತ ಹೇಗೆ ಕಲ್ಪಿಸುತ್ತದೆ ಎಂಬುದನ್ನು ಕಾದು ನೋಡಬೇಕಿದೆ.

ಕಣ್ಮುಚ್ಚಿ ಕುಳಿತ ತಾಲೂಕು ಆಡಳಿತ: ಗ್ರಾಮ ಪಂಚಾಯಿತಿ ಕೇಂದ್ರವಾದ ಹಿರೇಮಲ್ಲನಹೊಳೆ ಸಮೀಪ ಸರ್ಕಾರಿ ಜಾಗವಿದೆ. ಈ ಜಾಗದ ಬಗ್ಗೆ ಗ್ರಾಮಸ್ಥರು ತಹಸೀಲ್ದಾರ್ ಗಮನಕ್ಕೆ ತಂದಿದ್ದರೂ ಪ್ರಯೋಜನವಾಗಿಲ್ಲ. ನಿರಾಶ್ರಿತ ಕುಟುಂಬಗಳಿಗೆ ತಕ್ಷಣವೇ ನಿವೇಶನ ಕೊಡಬೇಕು. ಕಾಳಜಿ ಕೇಂದ್ರ ತೆರೆಯಬೇಕು. ಸಮಸ್ಯೆ ಬಗೆಹರಿಯದಿದ್ದರೆ ಅಹೋರಾತ್ರಿ ಧರಣಿ ನಡೆಸುವುದಾಗಿ ದಸಂಸ ಎಚ್ಚರಿಕೆ ನೀಡಿದೆ.

ತಾಲೂಕಿನ ಹಿರೇಮಲ್ಲನಹೊಳೆ ಗ್ರಾಮದಂತೆಯೇ ಅನೇಕ ಊರುಗಳಲ್ಲಿ ಮೂಲಸೌಕರ್ಯಗಳಿಲ್ಲ. ತಾಲೂಕು ಆಡಳಿತ ಇಂತಹ ಹಳ್ಳಿಗಳನ್ನು ಗುರುತಿಸಿ ಸೌಲಭ್ಯಗಳನ್ನು ಕಲ್ಪಿಸುವ, ನಿರಾಶ್ರಿತರಿಗೆ ನೆರವು ನೀಡುವ ಪ್ರಯತ್ನ ಮಾಡುತ್ತಿಲ್ಲ. ಮಾನವೀಯ ಮೌಲ್ಯಗಳನ್ನಿಟ್ಟುಕೊಂಡು ಆಡಳಿತ ವರ್ಗ, ಚುನಾಯಿತ ವರ್ಗ ಕೆಲಸ ಮಾಡಿದಾಗ ಮಾತ್ರ ಸಾಮಾಜಿಕ ನ್ಯಾಯ ಕೊಟ್ಟಂತಾಗುತ್ತದೆ.
I ಪ್ರಭು, ಕಾನನಕಟ್ಟೆ.

ಹಿರೇಮಲ್ಲನಹೊಳೆ ಗ್ರಾಮದಲ್ಲಿ 50ಕ್ಕೂ ಹೆಚ್ಚು ಕುಟುಂಬಗಳಿಗೆ ಸೂಕ್ತ ನಿವೇಶನ, ವಸತಿ ಸೌಲಭ್ಯವಿಲ್ಲ. ನಿವೇಶನಕ್ಕಾಗಿ ಒತ್ತಾಯಿಸಿ ನಿವಾಸಿಗಳು ಅನೇಕ ಬಾರಿ ಮನವಿ ಸಲ್ಲಿಸಿದ್ದರೂ ಗ್ರಾಮ ಪಂಚಾಯಿತಿ ಕ್ರಮ ಕೈಗೊಂಡಿಲ್ಲ. ಸಂಬಂಧಿತರು ತಕ್ಷಣವೇ ಇವರಿಗೆ ಸೂರು ಕಲ್ಪಿಸಿ ಸಹಾಯ ಮಾಡಬೇಕು.
I ಮಲೆಮಾಚಿಕೆರೆ ಸತೀಶ್, ಸಂಚಾಲಕ ದಸಂಸ.

ಶಾಸಕರ ಸೂಚನೆಯಂತೆ ಗ್ರಾಮದ ಬಳಿ ಒಂದು ಎಕರೆ ಸರ್ಕಾರಿ ಜಾಗದಲ್ಲಿ ನಿವೇಶನ ಮಾಡಿ, ಮನೆ ಕಳೆದುಕೊಂಡ ಎಲ್ಲ ಕುಟುಂಬಗಳಿಗೂ ನಿವೇಶನ ಹಂಚಿಕೆ ಮಾಡಲಾಗುವುದು. ಈಗಾಗಲೇ ಜಮೀನು ಪರಿಶೀಲಿಸಲಾಗಿದೆ. ಸೂಕ್ತ ಸ್ಥಳವನ್ನು ಆಯ್ಕೆ ಮಾಡಲಾಗುವುದು.
I ಸೈಯದ್ ಕಲೀಂಉಲ್ಲಾ, ತಹಸೀಲ್ದಾರ್, ಜಗಳೂರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net