

ಜಗಳೂರು: ಪಟ್ಟಣದ ಹೃದಯ ಭಾಗವಾದ ಮರೇನಹಳ್ಳಿ ರಸ್ತೆಯಲ್ಲಿ ಚಿತ್ರಕಲಾವಿದನೊಬ್ಬನ ಮೇಲೆ ಮಾರಕಾಸ್ತ್ರದಿಂದ ಹಲ್ಲೆ ನಡೆಸಿದ ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ.
ಪಟ್ಟಣದ ನಿವಾಸಿ ಹರೀಶ್ ಹಲ್ಲೆಗೊಳಗಾದವರು. ಜು. 17 ರ ಬೆಳಗ್ಗೆ ಹರೀಶ್ ಎನ್‌ಆರ್‌ಇಜಿ ಬೋರ್ಡ್ ಬರೆಯಲು ಜಮ್ಮಾಪುರಕ್ಕೆ ಬೈಕ್‌ನಲ್ಲಿ ತೆರಳುತ್ತಿದ್ದರು. ಆಗ ಗೌರಿಪುರ ಗ್ರಾಮದ ವೈ.ಪಿ. ಸಿದ್ದನಗೌಡ ಅಡ್ಡ ಹಾಕಿ, ಅವಾಚ್ಯ ಶಬ್ದಗಳಿಂದ ನಿಂದಿಸಿ ಹಲ್ಲೆ ಮಾಡಿದ್ದಾನೆ. ಇದರಿಂದ ಹರೀಶ್ ಭುಜಕ್ಕೆ ಪೆಟ್ಟಾಗಿದೆ.
ಘಟನೆ ಹಿನ್ನೆಲೆ: ಸಿದ್ದನಗೌಡನ ದೊಡ್ಡಪ್ಪನ ಮಗಳನ್ನೇ ಮದುವೆಯಾಗಿರುವ ಹರೀಶ್ ಜಗಳೂರಲ್ಲೇ ವಾಸವಾಗಿದ್ದಾರೆ. ಇತ್ತೀಚೆಗೆ ಸಿದ್ದನಗೌಡ ಮತ್ತು ಹರೀಶ್ ಅವರ ಪತ್ನಿಯ ಸಹೋದರರ ಮಧ್ಯೆ ಗೌರಿಪುರ ಗ್ರಾಮದಲ್ಲಿ ಗಲಾಟೆಯಾಗಿತ್ತು. ಅದರಲ್ಲಿ ಹರೀಶ್ ಕೈವಾಡವಿದೆ ಎಂದು ಅನುಮಾನಿಸಿ ಹಲ್ಲೆ ನಡೆಸಲಾಗಿದೆ ಎನ್ನಲಾಗಿದೆ.
ಸಿದ್ದನಗೌಡನ ವಿರುದ್ಧ ಹರೀಶ್ ಜಗಳೂರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಪ್ರಕರಣ ದಾಖಲಾಗುತ್ತಿದ್ದಂತೆಯೇ ಸಿದ್ದನಗೌಡ ತಲೆಮರೆಸಿಕೊಂಡಿದ್ದಾನೆ. ಇನ್ಸ್‌ಸ್ಪೆಕ್ಟರ್ ಡಿ.ಶ್ರೀನಿವಾಸ್‌ರಾವ್ ಮತ್ತು ಪಿಎಸ್‌ಐ ಎಸ್.ಡಿ. ಸಾಗರ್ ನೇತೃತ್ವದಲ್ಲಿ ಪೊಲೀಸರು ತಂಡ ರಚಿಸಿದ್ದು, ಆರೋಪಿ ಪತ್ತೆಗೆ ಬಲೆ ಬೀಸಿದ್ದಾರೆ.