ಜಗಳೂರು ಇಮ್ಮಣ್ಣ ಕಟ್ಟಿಸಿದ ಕೆರೆ ಉಳಿಸಿಕೊಳ್ಳೋದೇ ಸವಾಲು

Jagaluru, Gadimakunte, Kere, Eri, Rikka,
Published on

ಲೋಕೇಶ್ ಎಂ. ಐಹೊಳೆ ಜಗಳೂರು: ಸೊಕ್ಕೆ ಹೋಬಳಿಯ ಅನೇಕ ಗ್ರಾಮಗಳಿಗೆ ಜಲಮೂಲವಾಗಿರುವ ಗಡಿಮಾಕುಂಟೆ ಕೆರೆ ತಾಲ್ಲೂಕಿನ ದೊಡ್ಡ ಜಲ ಸಂಗ್ರಹಗಾರಗಳಲ್ಲಿ ಒಂದು. ಮೈಸೂರು ದಿವಾನರ ಕಾಲದಲ್ಲಿ 1946ರಲ್ಲಿ ಜೆ. ಇಮಾಂ ಸಾಹೇಬರು ನಿರ್ಮಿಸಿದ್ದರು. ಸಣ್ಣ ನೀರಾವರಿ ಇಲಾಖೆ ನಿರ್ಲಕ್ಷ್ಯ, ನಿರ್ವಹಣೆ ಕೊರತೆಯಿಂದ 1200 ಎಕರೆ ವಿಸ್ತೀರ್ಣದ ಕೆರೆಯಲ್ಲಿ 300 ಎಕರೆಯಷ್ಟು ಒತ್ತುವರಿಯಾಗಿದೆ ಎಂಬ ಆರೋಪ ಒಂದೆಡೆಯಾದರೆ, ಏರಿಯಲ್ಲಿ ಬಿರುಕು ಕಾಣಿಸಿಕೊಂಡಿದ್ದು, ಅನಾಹುತಕ್ಕೂ ದಾರಿಯಾದೀತು ಎನ್ನುವ ಆತಂಕವೂ ಎದುರಾಗಿದೆ.

78 ವರ್ಷಗಳ ಇತಿಹಾಸವಿರುವ ಕೆರೆಯ ಏರಿಯಲ್ಲಿ ಕಳೆದೊಂದು ವರ್ಷದಿಂದ ಸಣ್ಣ ಬಿರುಕು ಬಿಟ್ಟಿದೆ. ಕಳೆದೆರಡು ದಿನಗಳಿಂದ ಸುರಿದ ಮಳೆಗೆ ಬಿರುಕು ಮತ್ತಷ್ಟು ಹೆಚ್ಚಾಗಿದೆ. 2004ರಲ್ಲಿ ಕೆರೆ ಏರಿ ಒಡೆದು ಅಪಾರ ನೀರು ಪೋಲಾಗಿತ್ತು. 20 ವರ್ಷಗಳ ಹಿಂದೆ ಆಗಿದ್ದ ದೊಡ್ಡ ಅನಾಹುತ ಮರುಕಳಿಸಬಹುದೆಂಬ ಆತಂಕ ಸ್ಥಳೀಯರಲ್ಲಿ ಮನೆ ಮಾಡಿದೆ.

ದಶಕಗಳಿಂದ ನೀರು ಕಾಣದ ಕೆರೆಯಲ್ಲೀಗ 6 ಅಡಿ ನೀರು ಸಂಗ್ರಹವಾಗಿದೆ. ಮಳೆಗಾಲ ಈಗತಾನೆ ಆರಂಭವಾಗಿದ್ದು, ಮುಂದಿನ ದಿನಗಳಲ್ಲಿ ಸುರಿಯುವ ಮಳೆಗೆ ಕೋಡಿ ಬೀಳುವ ಸಾಧ್ಯತೆ ಇದೆ. ಕೆರೆಯಲ್ಲಿ ನೀರು ಹಿಡಿದಿಟ್ಟುಕೊಳ್ಳುವುದು ಹೇಗೆ? ಸಂಭವನೀಯ ಅನಾಹುತ ಹೇಗೆ ತಪ್ಪಿಸಬಹುದೆಂಬ ಚಿಂತೆ ಜನರನ್ನು ಕಾಡುತ್ತಿದೆ.

ನೋಡಲು ದೊಡ್ಡ ಕೆರೆಯಾದರೂ ಹೂಳು ಮತ್ತು ಗಿಡ, ಗಂಟೆಗಳಿಂದ ತುಂಬಿಕೊಂಡಿದೆ. ಸಣ್ಣ ನೀರಾವರಿ ಇಲಾಖೆ ಅಧಿಕಾರಿಗಳು ಏರಿ ದುರಸ್ತಿಪಡಿಸುವ ಕೆಲಸ ಜರೂರಿದೆ. ಸಂಗ್ರಹವಾಗುವ ನೀರನ್ನು ಸಂರಕ್ಷಿಸಬೇಕಾಗಿದೆ.

ನೂರಾರು ಹಳ್ಳಿಗೆ ಸಂಪರ್ಕ: ಗಡಿಮಾಕುಂಟೆಗೆ ಕೆರೆಗೆ ನೀರು ಬಂದರೆ ಸೊಕ್ಕೆ ಹೋಬಳಿಯ ಕೆಳಗೋಟೆ, ಕೆಚ್ಚೇನಹಳ್ಳಿ, ಚಿಕ್ಕಬನ್ನಿಹಟ್ಟಿ, ಹೊಸಕೆರೆ, ರಂಗಾಪುರ, ತಮಲೇಹಳ್ಳಿ, ಹನುಮಂತಾಪುರ, ಗೌಡಗೊಂಡನಹಳ್ಳಿ, ಕ್ಯಾಸೇನಹಳ್ಳಿ, ಗೌರಿಪುರ, ಚಿಕ್ಕ ಉಜ್ಜಯಿನಿ, ಅಣಬೂರು, ದೊಡ್ಡಬೊಮ್ಮನಹಳ್ಳಿ, ಜ್ಯೋತಿಪುರ, ಕಾನಾಮಡಗು, ಕೂಡ್ಲಿಗಿ ತಾಲೂಕಿನ ಕೆಲ ಹಳ್ಳಿಗಳು ಸೇರಿ ನೂರಾರು ಗ್ರಾಮಗಳಿಗೆ ನೀರಿನ ಸಂಪರ್ಕ ಹೊಂದಿದೆ. ಇಲ್ಲಿ ನೀರು ಸಂಗ್ರಹವಾದರೆ ಕೊಳವೆಬಾವಿಗಳು ಮರುಪೂರಣವಾಗುತ್ತವೆ.

ರೈತರಿಗೆ ಕೆರೆಗಳೆ ಜೀವಾಳ. ಕೆರೆ, ಕಟ್ಟೆಗಳಲ್ಲಿ ನೀರು ತುಂಬಿದರೆ ಅಂತರ್ಜಲ ವೃದ್ಧಿ ಆಗುತ್ತದೆ. ಹಿಂದೆ ರಾಜರ ಕಾಲದಲ್ಲಿ ಕಟ್ಟಿಸಿದ್ದ ಕೆರೆಗಳನ್ನು ಉಳಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಈ ಕಾಲದಲ್ಲಂತೂ ಒಂದೇ ಒಂದು ಕೆರೆ ಕಟ್ಟಿಸುವುದು ಅಸಾಧ್ಯ. ಸಂಬಂಧಪಟ್ಟ ಇಲಾಖೆ ಅಧಿಕಾರಿಗಳು ಇರುವ ಕೆರೆಗಳ ಉಳಿವಿಗೆ ಗಮನ ನೀಡಬೇಕು.
l ಯು.ಜಿ. ಶಿವಕುಮಾರ್, ರೈತ.

ಗಡಿಮಾಕುಂಟೆ ಕೆರೆಯ ನೀರು ಸುತ್ತಲಿನ ಹತ್ತು ಹಳ್ಳಿಗಳಿಗೆ ಜೀವಾಮೃತವಿದ್ದಂತೆ. ಈ ವರ್ಷದ ಮೊದಲ ಮಳೆಗೆ ಕೆರೆಗೆ ನೀರು ಬಂದಿರುವುದು ಖುಷಿ ತಂದಿದೆ. ಆದರೆ, ಕೆರೆ ಏರಿ ಬಿರುಕು ಬಿಟ್ಟಿರುವುದು ಆತಂಕ ಮೂಡಿಸಿದೆ. ಕೆರೆ ತುಂಬಿದಾಗ ಬಾಗಿನ ಅರ್ಪಿಸಲು ಬರುವ ರಾಜಕಾರಣಿಗಳು ಸಮಸ್ಯೆಗೆ ಸ್ಪಂದಿಸುತ್ತಿಲ್ಲ.
l ರಾಜು ಬಿ. ಲಕ್ಕಂಪುರ,

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net