

ಹರಪನಹಳ್ಳಿ: ತಾಲೂಕಿನ ಅರಸೀಕೆರೆ ಹೋಬಳಿ ಜಗಳೂರು ಕ್ಷೇತ್ರಕ್ಕೆ ಒಳಪಟ್ಟಿದ್ದು, ಏಳು ಪಂಚಾಯಿತಿಗಳ ಅಭಿವೃದ್ಧಿ ಕಾರ್ಯ ಚುರುಕುಗೊಳಿಸಲು ಅಧಿಕಾರಿಗಳು ಸಹಕರಿಸಬೇಕು ಎಂದು ಜಗಳೂರು ಕ್ಷೇತ್ರದ ಶಾಸಕ ದೇವೇಂದ್ರಪ್ಪ ಹೇಳಿದರು.
ತಾಲೂಕಿನ ಅರಸೀಕೆರೆ ಹೋಬಳಿಯ ಏಳು ಗ್ರಾಮ ಪಂಚಾಯಿತಿಗಳ ತ್ರೈಮಾಸಿಕ ಪ್ರಗತಿ ಪರಿಶೀಲನಾ ಸಭೆಯಲ್ಲಿ ಶುಕ್ರವಾರ ಮಾತನಾಡಿದರು. ಸರ್ಕಾರದ ಕೆಲಸ ಮಾಡುವುದಾಗಿ ಪ್ರತಿಜ್ಞೆ ಮಾಡಿರುವೆ. ಸರ್ಕಾರದ ಯೋಜನೆಗಳನ್ನು ಅರ್ಹರಿಗೆ ತಲುಪಿಸುವ ಪ್ರಯತ್ನ ಮಾಡೋಣ ಎಂದರು.
ಜನರು ಕಚೇರಿಗಳಿಗೆ ಅಲೆದಾಡುವುದನ್ನು ಅಧಿಕಾರಿಗಳು ತಪ್ಪಿಸಬೇಕು. ಅರಸೀಕೆರೆ ಹೋಬಳಿ ಹರಪನಹಳ್ಳಿ, ಜಗಳೂರು, ದಾವಣಗೆರೆ ಮಧ್ಯೆ ವಿಭಿನ್ನವಾಗಿದ್ದು, ಇಲ್ಲಿ ಅಭಿವೃದ್ಧಿ ಕಾರ್ಯದಲ್ಲಿ ತಾರತಮ್ಯ ತೋರದೆ ಕೆಲಸ ಮಾಡಿ. ಅಭಿವೃದ್ಧಿ ಕಾರ್ಯಗಳ ಮೂಲಕ ಜನರಿಗೆ ಹತ್ತಿರವಾಗೋಣ ಎಂದು ಹೇಳಿದರು.
ಕೃಷಿ ಅಧಿಕಾರಿಯಿಂದ ಏಳು ಪಂಚಾಯಿತಿಗೆ ಸಂಬಂಧಿಸಿದ ಕೃಷಿ ಮಾಹಿತಿ ಪಡೆದ ಶಾಸಕರು, ಮುಂಗಾರು ಆರಂಭದಿಂದ ಕೃಷಿ ಚಟುವಟಿಕೆಗೆ ಚಾಲನೆ ದೊರೆತಿದ್ದು, ರೈತರಿಗೆ ಬೇಕಾದ ಬೀಜ, ಗೊಬ್ಬರ, ಔಷಧಿಗಳನ್ನು ಸಮರ್ಪಕವಾಗಿ ಪೂರೈಕೆ ಮಾಡಿ ಎಂದು ಕೃಷಿ ಅಧಿಕಾರಿ ಗೊಂದಿ ಮಂಜುನಾಥಗೆ ಸೂಚಿಸಿದರು.
ಈಗಾಗಲೇ ಶಾಲೆ-ಕಾಲೇಜು ಆರಂಭವಾಗಿದ್ದು. ಶೌಚಗೃಹ, ಕುಡಿಯುವ ನೀರು, ಮೂಲಸೌಕರ್ಯ, ಕೊಠಡಿಗಳ ದುರಸ್ತಿ ಬಗ್ಗೆ ಎಚ್ಚರಿಕೆ ವಹಿಸಬೇಕು. ದುರಸ್ತಿ ಕಾರ್ಯಗಳಿದ್ದಲ್ಲಿ ಗ್ರಾಪಂ ಪಿಡಿಒಗಳು, ತಾಪಂ ಇಒ ಗಮನಕ್ಕೆ ತಂದು ಕಾಮಗಾರಿಗೆ ಕ್ರಮ ಕೈಗೊಳ್ಳಿ. ಖಾಲಿ ಇರುವ ಅತಿಥಿ ಶಿಕ್ಷಕರ ಹುದ್ದೆಗಳ ನೇಮಕಾತಿಯಲ್ಲಿ ತಾರತಮ್ಯವಿಲ್ಲದೆ ಜೇಷ್ಠತೆ ಆಧಾರದ ಮೇಲೆ ನೇಮಕ ಮಾಡಿ ಎಂದು ಬಿಇಒ ಬಸವರಾಜಪ್ಪಗೆ ಸೂಚಿಸಿದರು.
ಅರಸೀಕೆರೆ ಭಾಗದಲ್ಲಿ ವಿಮುಕ್ತ ದೇವದಾಸಿ ಮಹಿಳೆಯರು ಹೆಚ್ಚಿದ್ದು, ಅವರಿಗೆ ಭೂಮಿ ಸೇರಿ ಮೂಲಸೌಕರ್ಯ ಒದಗಿಸಿ ಹಾಗೂ ವಸತಿ ನಿಲಯಗಳಲ್ಲಿ ಅಹಿತಕರ ಘಟನೆ ಜರುಗದಂತೆ ನಿಲಯ ಮೇಲ್ವಿಚಾರಕರು, ಅಧಿಕಾರಿಗಳು ಎಚ್ಚರಿಕೆ ವಹಿಸಿ, ಮೂಲ ಸೌಕರ್ಯ ಒದಗಿಸುವಂತೆ ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕಿ ರೇಣುಕಾದೇವಿಗೆ ಮನವಿ ಮಾಡಿದರು.
ಇದನ್ನೂ ಓದಿ: ಅಕ್ರಮ ಗಣಿಗಾರಿಕೆಗೆ ಬ್ರೇಕ್, ಬೊಕ್ಕಸ ಭರ್ತಿಗೆ ಕ್ರಮ: ಸಚಿವ ಎಸ್.ಎಸ್.ಮಲ್ಲಿಕಾರ್ಜುನ್
ಅರಸೀಕೆರೆ, ಉಚ್ಚಂಗಿದುರ್ಗ ಭಾಗದಲ್ಲಿ ಹೆಚ್ಚಿನ ಗಣಿಗಾರಿಕೆ ನಡೆಯುತ್ತಿದ್ದು. ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಅಧಿಕಾರಿಗಳಿಂದ ಮಾಹಿತಿ ಪಡೆದ ಶಾಸಕರು, ರಸ್ತೆ ನಿಯಮ ಮೀರಿ ಹೆಚ್ಚಿನ ಸಾಗಣೆ ಮಾಡುವುದಲ್ಲದೆ, ಕಲ್ಲು ಗಣಿಗಾರಿಕೆಯಿಂದ ಗ್ರಾಮೀಣ ರಸ್ತೆಗಳು ಹಾಳಾಗುತ್ತಿವೆ. ಈ ಬಗ್ಗೆ ಗಮನ ಹರಿಸುವಂತೆ ಸೂಚಿಸಿದರು.
ಉಪವಿಭಾಗಾಧಿಕಾರಿ ಟಿ.ವಿ.ಪ್ರಕಾಶ್, ತಹಶೀಲ್ದಾರ್ ಡಾ.ಶಿವಕುಮಾರ ಬಿರಾದಾರ, ತಾಪಂ ಇಒ ಕೆ.ಆರ್.ಪ್ರಕಾಶ್, ಎಇಇ ಸತೀಶ ಪಾಟೀಲ್, ಎಇಇ ಜಯ್ಯಪ್ಪ, ವಿರೂಪಾಕ್ಷಪ್ಪ, ನಾಗಪ್ಪ, ಕೆ.ಮಲ್ಲಪ್ಪ, ಪಲ್ಲಾಗಟ್ಟಿ ಶೇಖರಪ್ಪ, ಎಸ್.ಮಂಜುನಾಥ ಇದ್ದರು.
==ಬಾಕ್ಸ್===
ಅರಸೀಕೆರೆ ವ್ಯಾಪ್ತಿಯ 55 ಕಡೆಗಳಲ್ಲಿ ಜೆಜೆಎಂ ಕಾಮಗಾರಿಗಳು ಪ್ರಗತಿಯಲ್ಲಿವೆ. ಇನ್ನೂ 20 ಹಳ್ಳಿಗಳು ಬಾಕಿ ಇವೆ. ಬಹುಗ್ರಾಮ ಯೋಜನೆಯಡಿ ಚಿಗಟೇರಿ ಮತ್ತು ಇತರ ಹಳ್ಳಿಗಳಲ್ಲಿ ಅರಸೀಕೆರೆ ವ್ಯಾಪ್ತಿಯ ಹಳ್ಳಿಗಳಿಗೂ ಕುಡಿಯುವ ನೀರನ್ನು ಒದಗಿಸುವ ಯೋಜನೆ ಗುತ್ತಿಗೆ ಹಂತದಲ್ಲಿದೆ. ಸಾಧ್ಯವಾದಷ್ಟು ಕುಡಿಯುವ ನೀರಿನ ಸಮಸ್ಯೆಯಾಗದಂತೆ ಕ್ರಮ ಕೈಗೊಳ್ಳಲಾಗುವುದು.
ದೇವೇಂದ್ರಪ್ಪ, ಶಾಸಕ