

ಜಗಳೂರು: ಭಾರತ ಅತಿ ಹೆಚ್ಚು ಕೃಷಿ ಅವಲಂಬಿತ ದೇಶವಾಗಿದೆ. ಅನ್ನ ಕೊಡುವ ಅನ್ನದಾತನಿಗೆ ನಿಜವಾದ ಗೌರವ ಸಿಗುತ್ತಿಲ್ಲ ಎಂದು ಶಾಸಕ ಚಿಕ್ಕಮ್ಮನಹಟ್ಟಿ ಬಿ. ದೇವೇಂದ್ರಪ್ಪ ಬೇಸರ ವ್ಯಕ್ತಪಡಿಸಿದರು.
ತಾಲೂಕಿನ ಬಿದರಕೆರೆ ಗ್ರಾಮದಲ್ಲಿ ಗುರುವಾರ ಕೃಷಿ ಇಲಾಖೆ ಹಾಗೂ ಜಲನಯನ ಅಭಿವೃದ್ಧಿ ಇಲಾಖೆ, ಐಸಿಎಆರ್- ತರಳಬಾಳು ಕೃಷಿ ವಿಜ್ಞಾನ ಕೇಂದ್ರ, ಬಿದರಕೆರೆ ತರಳಬಾಳು ಅಮೃತ ರೈತ ಉತ್ಪಾದಕ ಕಂಪನಿಯ ನೂತನ ಕಚೇರಿ ಮತ್ತು ಗೋದಾಮು ಉದ್ಘಾಟಿಸಿ ಮಾತನಾಡಿದರು.
ಅತಿವೃಷ್ಟಿ, ಅನಾವೃಷ್ಟಿ, ಹವಾಮಾನ ವೈಪರೀತ್ಯ, ಬೆಳೆ ಹಾನಿ, ಸಾಲ ಹೀಗೆ ಹತ್ತಾರು ಸಮಸ್ಯೆಗಳ ನಡುವೆ ರೈತರು ಸಿಕ್ಕಿಕೊಂಡು ಒದ್ದಾಡುತ್ತಾರೆ. ಭೂಮಿಯಲ್ಲಿ ವರ್ಷವಿಡಿ ಬೆವರು ಸುರಿಸಿ ಬೆಳೆದ ಬೆಳೆಗಳಿಗೆ ಉತ್ತಮ ಬೆಲೆ ಇಲ್ಲದೇ ನಷ್ಟ ಅನುಭವಿಸಿ ಆತ್ಮಹತ್ಯೆ ಮಾಡಿಕೊಳ್ಳಲು ಮುಂದಾಗುತ್ತಾರೆ. ಇದನ್ನು ತಪ್ಪಿಸುವ ಉದ್ದೇಶದಿಂದ ತರಳಬಾಳು ಕೃಷಿ ವಿಜ್ಞಾನ ರೈತ ಉತ್ಪಾದಕರ ಕಂಪನಿಗಳು ಬಂದಿವೆ. ಇದರಿಂದ ರೈತರ ಬದುಕು ಬದಲಾಗುವ ಭರವಸೆ ಇದೆ ಎಂದರು.
ಮಾಜಿ ಶಾಸಕ ಟಿ. ಗುರುಸಿದ್ದನಗೌಡ ಮಾತನಾಡಿ, ಮನುಷ್ಯ ಕ್ರಿಯಾಶೀಲನಾಗಿದ್ದಾಗ ಮಾತ್ರ ಸಮಾಜ ಗೌರವಿಸುತ್ತದೆ. ಕೃಷಿಕರು ಶ್ರಮಜೀವಿಗಳು ಅವರಿಗೆ ಅಗತ್ಯ ಸೌಕರ್ಯ ಸರ್ಕಾರ ಒದಗಿಸಿಕೊಡಬೇಕು ಎಂದು ತಿಳಿಸಿದರು.
ರೈತರು ಅಡಕೆ ಬಿಟ್ಟು ಆಹಾರ ಧಾನ್ಯಗಳ ಬೆಳೆಯುವತ್ತ ಗಮನ ಹರಿಸಬೇಕು. ಎಲ್ಲ ಪಾಲಕರು ತಮ್ಮ ಮಕ್ಕಳು ನೌಕರರಾಗಲಿ ಎಂದು ಬಯಸುವಂತೆ ಕೃಷಿಕನಾದರೆ ಒಳ್ಳೆಯದು ಎಂದು ಆಲೋಚಿಸಬೇಕು ಎಂದು ಸಲಹೆ ನೀಡಿದರು.
ಮಾಜಿ ಶಾಸಕ ಎಚ್.ಪಿ. ರಾಜೇಶ್ ಮಾತನಾಡಿ, ಐದು ಗ್ರಾಪಂ ವ್ಯಾಪ್ತಿಯ ತರಳಬಾಳು ಕೃಷಿ ವಿಜ್ಞಾನ ಕೇಂದ್ರ ಸ್ಥಾಪನೆಯಾಗಿದೆ. ಕೃಷಿ ಕೇವಲ ವ್ಯವಸಾಯವಲ್ಲ, ಉಪ ಕಸುಬುಗಳಾದ ಕುರಿ, ಜೇನು, ಹಸು ಸಾಕಾಣಿಕೆ ಸುಸ್ತಿರವಾಗಿ ಕೃಷಿ ಮಾಡಬೇಕು. ಸಾವಯವ ಕೃಷಿಯತ್ತ ಒಲವು ತೋರಬೇಕು. ಮಣ್ಣಿನ ಗುಣಕ್ಕೆ ಅನುಗುಣವಾಗಿ ಬೆಳೆ ಬೆಳೆದರೆ ಉತ್ತಮ ಇಳುವರಿ ಪಡೆಯಲು ಸಹಕಾರಿ ಆಗುತ್ತದೆ ಎಂದರು.
ಕೃಷಿ ಇಲಾಖೆ ಜಂಟಿ ನಿರ್ದೇಶಕ ಶ್ರೀನಿವಾಸ್ ಚಿಂತಾಲ್ ಮಾತನಾಡಿ, ರೈತರ ಏಳಿಗೆಗಾಗಿ ಸಂಸ್ಥೆ ಶ್ರಮಿಸುತ್ತಿದೆ. ಮುಸುಕಿನಜೋಳ ಇತ್ತೀಚೆಗೆ ಸೋಮಾರಿಗಳ ಬೆಳೆಯಾಗಿ ಬದಲಾವಣೆಯಾಗಿದೆ. ಬಿತ್ತಿ ಕೊಯ್ಯುವವರೆಗೂ ಯಂತ್ರಗಳು, ಔಷಧ ಬಳಸಲಾಗುತ್ತಿದೆ. ಅಂತರ, ಮಿಶ್ರ, ಅಂಚು ಬೆಳೆ ಪದ್ಧತಿಯಿಂದ ಭೂಮಿ ಫಲವತ್ತತೆ ಹೆಚ್ಚಾಗುತ್ತದೆ ಎಂದರು.
ಬಿದರಕೆರೆ ತರಳಬಾಳು ಅಮೃತ ರೈತ ಉತ್ಪಾದಕ ಕಂಪನಿ ಅಧ್ಯಕ್ಷ ಎಂ.ಎಚ್. ಮಂಜುನಾಥ್ ಅಧ್ಯಕ್ಷತೆ ವಹಿಸಿದ್ದರು.
ತಹಸೀಲ್ದಾರ್ ಸಂತೋಷ್‌ಕುಮಾರ್, ಉಪ ಕೃಷಿ ನಿರ್ದೇಶಕ ಆರ್. ತಿಪ್ಪೇಸ್ವಾಮಿ, ಐಸಿಎಆರ್- ಟಿಕೆವಿಕೆ ಮುಖ್ಯಸ್ಥ ಡಾ. ದೇವರಾಜ್, ಬಿ.ಒ. ಮಲ್ಲಿಕಾರ್ಜುನ, ಕೃಷಿ ಸಹಾಯಕ ನಿರ್ದೇಶಕ ಸಿ. ಮಿಥುನ್ ಕಿಮಾವತ್, ಗ್ರಾಪಂ ಅಧ್ಯಕ್ಷೆ ಪವಿತ್ರಾ ವೀರೇಶ್, ಕೆಪಿಸಿಸಿ ಉಸ್ತುವಾರಿ ಕಲ್ಲೇಶ್ ರಾಜ್ ಪಟೇಲ್, ಕಾಂಗ್ರೆಸ್ ಜಿಲ್ಲಾ ಕಾರ್ಯದರ್ಶಿ ಪ. ಶೇಖರಪ್ಪ ಮತ್ತಿತರಿದ್ದರು.
ಮಾಜಿ ಶಾಸಕರನ್ನು ಹೊಗಳಿದ ಹಾಲಿ ಶಾಸಕ: ವೇದಿಕೆಯಲ್ಲಿ ಕೂತಿದ್ದ ಮಾಜಿ ಶಾಸಕರಾದ ಟಿ. ಗುರುಸಿದ್ದನಗೌಡ, ಎಚ್.ಪಿ ರಾಜೇಶ್ ಇಬ್ಬರನ್ನು ಶಾಸಕ ಬಿ. ದೇವೇಂದ್ರಪ್ಪ ಹಾಡಿ ಹೊಗಳಿದರು.
ಟಿ. ಗುರುಸಿದ್ದನಗೌಡರು ಬರಗಾಲದಲ್ಲಿ ಹೆಚ್ಚು ಚೆಕ್‌ಡ್ಯಾಂಗಳನ್ನು ನಿರ್ಮಿಸಿ ಅಂತರ್ಜಲ ವೃದ್ಧಿಗೆ ಶ್ರಮಿಸಿ, 'ಚೆಕ್‌ಡ್ಯಾಂ ಸರದಾರ' ಎಂಬ ಬಿರುದು ಪಡೆದರು. ಇನ್ನು ಎಚ್.ಪಿ. ರಾಜೇಶ್ ರಸ್ತೆಗಳನ್ನು ನಿರ್ಮಾಣ ಮಾಡಿ 'ರಸ್ತೆಗಳ ರಾಜ' ಎಂದು ಕರೆಸಿಕೊಂಡಿದ್ದಾರೆ. ಅವರಿಬ್ಬರ ಸಲಹೆ, ಸಹಕಾರ ಪಡೆದು ನಾನು ಉತ್ತಮವಾಗಿ ಕ್ಷೇತ್ರ ಅಭಿವೃದ್ಧಿಪಡಿಸುತ್ತೇನೆ ಎಂದರು.