ಜಗಳೂರು ತಾಲೂಕು ಸರ್ಕಾರಿ ನೌಕರರ ಚುನಾವಣೆ 28ಕ್ಕೆ

Jagaluru, Employees, Election,
Published on

ನಾಮಪತ್ರ ಸಲ್ಲಿಕೆಗೆ ಶುಕ್ರವಾರ ಕೊನೇ ದಿನ 21 ರಂದು ಉಮೇದುವಾರಿಕೆ ವಾಪಸ್‌ಗೆ ಅವಕಾಶ

ಜಗಳೂರು: ಸರ್ಕಾರಿ ನೌಕರರ ತಾಲೂಕು ಶಾಖೆ ಹಾಗೂ ಯೋಜನಾ ಶಾಖೆಗಳಿಗೆ ನಿರ್ದೇಶಕರ ಆಯ್ಕೆಗಾಗಿ ಚುನಾವಣೆ ನಡೆಯುತ್ತಿದ್ದು, ಸೋಮವಾರ ವಿವಿಧ ಇಲಾಖೆಗಳಿಂದ ಚುನಾವಣೆಗೆ ಸ್ಪರ್ಧಿಸಲು ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದರು.

ಅ. 9 ರಿಂದ ನಾಮಪತ್ರ ಸಲ್ಲಿಕೆ ಆರಂಭವಾಗಿದ್ದು, 18 ಕೊನೇ ದಿನವಾಗಿದೆ. 19 ರಂದು ನಾಮಪತ್ರ ಪರಿಶೀಲನೆ, 21 ರಂದು ವಾಪಸ್ ಪಡೆಯಲು ಕೊನೇ ದಿನಾಂಕವಾಗಿದೆ. ಸಂಜೆ 5.30 ಕ್ಕೆ ಅಂತಿಮ ಪಟ್ಟಿ ಪ್ರಕಟಿಸಲಾಗುವುದು. 28ರಂದು ಬೆಳಗ್ಗೆ 9 ರಿಂದ ಸಂಜೆ 4 ರವರೆಗೆ ಮತದಾನ ನಡೆಯಲಿದ್ದು, ಅಂದೇ ಫಲಿತಾಂಶ ಪ್ರಕಟವಾಗಲಿದೆ ಎಂದು ಚುನಾವಣಾಧಿಕಾರಿ ಬಸವರಾಜಪ್ಪ ತಿಳಿಸಿದರು.

ತಾಲೂಕು ಘಟಕದಿಂದ ಒಟ್ಟು 32 ನಿರ್ದೇಶಕರ ಆಯ್ಕೆ ನಡೆಯಲಿದೆ. ಪ್ರಾಥಮಿಕ ಶಾಲಾ ಶಿಕ್ಷಕರ ವಿಭಾಗದಿಂದ 4, ಆರೋಗ್ಯ ಇಲಾಖೆಯಿಂದ 5, ಸರ್ಕಾರಿ ಪ್ರೌಢಶಾಲೆ ವಿಭಾಗದಿಂದ 2, ಕಾಲೇಜು ವಿಭಾಗ 1, ಕಂದಾಯ ಇಲಾಖೆ 2, ಸಾರ್ವಜನಿಕ ಶಿಕ್ಷಣ ಸಾಕ್ಷರತೆ ಇಲಾಖೆ, ಕೃಷಿ, ತೋಟಗಾರಿಕೆ, ಪಶುವೈದ್ಯಕೀಯ ಇಲಾಖೆ, ಉಪನೋಂದಣಿ ಇಲಾಖೆ, ಭೂ ಮಾಪನ, ಖಜಾನೆ, ನ್ಯಾಯಾಂಗ, ಅರಣ್ಯ, ಮಹಿಳಾ ಮತ್ತು ಮಕ್ಕಳ ಕಲ್ಯಾಣ, ಆಹಾರ ನಾಗರಿಕರ ಸರಬರಾಜು, ಸಹಕಾರ, ಕೃಷಿ ಮಾರುಕಟ್ಟೆ, ಸಮಾಜ ಕಲ್ಯಾಣ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ, ಲೋಕೋಪಯೋಗಿ, ಮೀನುಗಾರಿಕೆ, ಜಿ.ಪಂ. ಇಂಜಿನಿಯರಿಂಗ್, ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಗಳಿಂದ ತಲಾ 1 ಸ್ಥಾನಗಳಿಗೆ ನಿರ್ದೇಶಕರ ಆಯ್ಕೆ ಮಾಡಬೇಕಿದೆ ಎಂದರು.

ತೀವ್ರ ಕುತೂಹಲ: ಚುನಾವಣೆ ಕಣ ರಂಗೇರತೊಡಗಿದ್ದು, ಅದರಲ್ಲೂ ಶಿಕ್ಷಣ ಹಾಗೂ ಆರೋಗ್ಯ ಇಲಾಖೆಯಲ್ಲಿ ಹೆಚ್ಚಿನ ಸ್ಥಾನಗಳಿದ್ದು, ತೀವ್ರ ಕುತೂಹಲ ಕೆರಳಿಸಿದೆ. ಪ್ರಾಥಮಿಕ ಶಾಲಾ ಶಿಕ್ಷಕರ ವಿಭಾಗದ ನಾಲ್ಕು ಸ್ಥಾನಗಳಿಗೆ ಗೋಡೆ ಬಸವರಾಜ್, ಈ.ಸತೀಶ್, ಎಲ್.ಈರಪ್ಪ, ಎನ್.ಸುರೇಶ್ ಸೇರಿದಂತೆ ಒಂಬತ್ತು ಶಿಕ್ಷಕರು ನಾಮಪತ್ರ ಸಲ್ಲಿಸಿದ್ದಾರೆ.

ಪ್ರೌಢಶಾಲೆ ವಿಭಾಗದಿಂದ ಆರ್.ಮಂಜಣ್ಣ ಮಾತ್ರ ನಾಮಪತ್ರ ಸಲ್ಲಿಸಿದ್ದಾರೆ. ಆರೋಗ್ಯ ಇಲಾಖೆಯಿಂದ ಸಿ.ಬಿ.ನಾಗರಾಜ್ ಪುನರಾಯ್ಕೆ ಬಯಸಿದ್ದಾರೆ. ವಿವಿಧ ಇಲಾಖೆಗಳ ಒಂದು ಸ್ಥಾನಗಳಿಗೆ ಅವಿರೋಧ ಆಯ್ಕೆ ನಡೆಯುವ ಸಾಧ್ಯತೆ ಇದೆ. ಸರ್ಕಾರಿ ನೌಕರರ ಚುನಾವಣೆ ಕಾವು ಇಂದಿನಿಂದ ರಂಗೇರಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net