

ಜಗಳೂರು: ಗಂಟಲು ದ್ರವದ ಪರೀಕ್ಷಾ ವರದಿ ತಡವಾಗಿ ಬರುತ್ತಿರುವುದೇ ಕರೊನಾ ಸೋಂಕು ಹೆಚ್ಚಲು ಕಾರಣವಾಗಿದೆ ಎಂದು ಶಾಸಕ ಎಸ್.ವಿ.ರಾಮಚಂದ್ರ ಹೇಳಿದರು.
ತಾಲೂಕು ಕಚೇರಿಯಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಕೋವಿಡ್-19 ನಿಯಂತ್ರಣ ಕುರಿತ ಅಧಿಕಾರಿಗಳ ತುರ್ತು ಸಭೆಯಲ್ಲಿ ಮಾತನಾಡಿದರು.
10 ದಿನದ ನಂತರ ಗಂಟಲು ದ್ರವದ ಮಾದರಿ ಬರುತ್ತಿರುವುದೇ ತಾಲೂಕಿನಲ್ಲಿ ಸೋಂಕಿತರ ಸಂಖ್ಯೆ ಹೆಚ್ಚಲು ಪ್ರಮುಖ ಕಾರಣವಾಗಿದೆ. ಈ ಫಲಿತಾಂಶ ಒಂದೆರಡು ದಿನಗಳಲ್ಲಿ ತಿಳಿಯುವಂತಾಗಬೇಕು. ಹೊರ ಜಿಲ್ಲೆ, ರಾಜ್ಯಗಳಿಂದ ಬರುವವರಿಂದಲೂ ಸೋಂಕು ಹರಡುತ್ತಿದ್ದು, ಈ ಬಗ್ಗೆ ಕಠಿಣ ಕ್ರಮ ಕೈಗೊಳ್ಳಬೇಕೆಂದು ಅಧಿಕಾರಿಗಳಿಗೆ ಆದೇಶಿಸಿದರು.
ಪ್ರತಿಯೊಬ್ಬರನ್ನೂ ಪರೀಕ್ಷಿಸುವ ಕೆಲಸವನ್ನು ಅಧಿಕಾರಿಗಳು ಮಾಡುತ್ತಿದ್ದರೂ ಜನರಲ್ಲಿನ ಭಯ ಹೋಗಿಲ್ಲ. ಈ ಬಗ್ಗೆ ಜಾಗೃತಿ ಮೂಡಿಸಬೇಕು. ಭಯದ ಬದಲು ಎಚ್ಚರವಹಿಸುವಂತೆ ತಿಳಿವಳಿಕೆ ನೀಡಬೇಕು. ಮಾಸ್ಕ್, ಸ್ಯಾನಿಟೈಸರ್ ಬಳಕೆ ಜತೆಗೆ ದೈಹಿಕ ಅಂತರದ ಮಹತ್ವ ತಿಳಿಸಿಕೊಡಬೇಕೆಂದು ಸೂಚಿಸಿದರು.
ಪಟ್ಟಣದಲ್ಲಿ ಕರೊನಾ ಆರ್ಭಟ ಜೋರಾಗಿದ್ದರಿಂದ ಕನಿಷ್ಠ 10 ದಿನ ಲಾಕ್‌ಡೌನ್ ಅನಿವಾರ್ಯವಾಗಿದೆ. ಹೀಗಾಗಿ ಅಂಗಡಿ ಮುಂಗಟ್ಟುಗಳು, ಬಾರ್ ಕಡ್ಡಾಯವಾಗಿ ಬಂದ್ ಮಾಡಿಸಬೇಕು. ವಾಹನ ಮತ್ತು ಜನರ ಓಡಾಟಕ್ಕೆ ಕಡಿವಾಣ ಹಾಕಬೇಕು. ಅವಶ್ಯವಿದ್ದರೆ ಗೃಹ ರಕ್ಷಕದಳದ ಸಿಬ್ಬಂದಿ ನೇಮಿಸಿಕೊಂಡು ಬಿಗಿ ಬಂದೋಬಸ್ತ್ ಮಾಡಿ ಎಂದು ಪೊಲೀಸ್ ಅಧಿಕಾರಿಗಳಿಗೆ ಸೂಚಿಸಿದರು.
ತಾಲೂಕಿನ 57 ಕೆರೆಗಳಿಗೆ ಭದ್ರಾ ನೀರು ತುಂಬಿಸುವ ಕಾಮಗಾರಿ ಭರದಿಂದ ಸಾಗುತ್ತಿದೆ. ಗ್ರಾಮೀಣರು ಪೈಪ್‌ಲೈನ್ ಕಾಮಗಾರಿಗೆ ತೊಂದರೆ ನೀಡದೇ ಸಹಕರಿಸಿದರೆ ಕೆಲವೇ ತಿಂಗಳಲ್ಲಿ ಜಗಳೂರಿಗೆ ನೀರು ಬರಲಿದೆ ಎಂದರು. ಕೆರೆಗಳು ಭರ್ತಿಯಾದರೆ ಅಂತರ್ಜಲ ವೃದ್ಧಿಯಾಗಿ, ಕೃಷಿ ಪಂಪ್‌ಗಳ ಜಲ ಮರುಪೂರಣವಾಗಿ ರೈತರ ಬದುಕು ಬಂಗಾರವಾಗುತ್ತದೆ ಎಂದರು.
ಕುಡಿವ ನೀರಿಗೆ ಸಮಸ್ಯೆ ಮಾಡ್ಬೇಡಿ: ಪಟ್ಟಣ ಸೇರಿದಂತೆ ತಾಲೂಕಿನ ಗ್ರಾಮೀಣ ಭಾಗದಲ್ಲಿ ಕುಡಿವ ನೀರಿನ ತೊಂದರೆಯಾಗದಂತೆ ಮುಂಜಾಗ್ರತೆ ವಹಿಸಬೇಕು. ಹನುಮಂತಾಪುರ, ಯರಲಕಟ್ಟೆಯಲ್ಲಿ ನೀರಿನ ಸಮಸ್ಯೆ ಇರುವ ದೂರಿದ್ದು ತಕ್ಷಣ ಪರಿಹರಿಸಬೇಕೆಂದು ಕುಡಿವ ನೀರು ಮತ್ತು ನೈರ್ಮಲ್ಯ ಇಲಾಖೆ ಎಇಇಗೆ ಶಾಸಕರು ಸೂಚಿಸಿದರು.
ತಹಸೀಲ್ದಾರ್ ನಾಗವೇಣಿ, ಇಒ ಮಲ್ಲನಾಯ್ಕ, ಸಿಪಿಐ ದುರುಗಪ್ಪ, ಸರ್ಕಾರಿ ಆಸ್ಪತ್ರೆ ಆಡಳಿತಾಧಿಕಾರಿ ಡಾ.ನೀರಜ್, ಡಾ.ಗಂಗಾಧರ್, ಸಮಾಜ ಕಲ್ಯಾಣ ಇಲಾಖೆ ಅಧಿಕಾರಿ ಮಹೇಶ್ವರಪ್ಪ ಮತ್ತಿತರರಿದ್ದರು.