

ಜಗಳೂರು: ಲಾರಿಯಲ್ಲಿ ಪ್ರಯಾಣಿಸುತ್ತಿದ್ದ 50 ಮಂದಿ ವಲಸೆ ಕಾರ್ಮಿಕರನ್ನು ತಾಲೂಕಿನ ಬಿದರಕೆರೆ ಚೆಕ್‌ಪೋಸ್ಟ್ ಬಳಿ ವಶಕ್ಕೆ ಪಡೆದ ತಾಲೂಕು ಆಡಳಿತ ಹೋಂ ಕ್ವಾರಂಟೈನ್‌ಗಿಡಲು ದಾವಣಗೆರೆಗೆ ಕಳುಹಿಸಿಕೊಟ್ಟಿದೆ.
ಈ ಎಲ್ಲ ಕಾರ್ಮಿಕರು ರಾಜಸ್ಥಾನ ಮೂಲದವರಾಗಿದ್ದು, ಬೆಂಗಳೂರಿನ ಎಲೆಕ್ಟ್ರಾನಿಕ್ ಸಿಟಿಯಲ್ಲಿ ಕೂಲಿ ಕೆಲಸ ಮಾಡುತ್ತಿದ್ದರು. ಲಾಕ್‌ಡೌನ್ ಕಾರಣ ತಮ್ಮ ಊರುಗಳಿಗೆ ತೆರಳಲು ಸರ್ಕಾರ ಅವಕಾಶ ನೀಡಿದ್ದರಿಂದ ಲಾರಿಯಲ್ಲಿ ರಾಜಸ್ಥಾನಕ್ಕೆ ಪ್ರಯಾಣಿಸುತ್ತಿದ್ದರು ಎನ್ನಲಾಗಿದೆ.
ಚಿತ್ರದುರ್ಗ, ಭರಮಸಾಗರ ಮಾರ್ಗವಾಗಿ ತೆರಳಬೇಕಿದ್ದ ಲಾರಿ ಜಗಳೂರು ತಾಲೂಕಿನ ಬಿದರಕೆರೆ ಕಡೆ ಬಂದಿದ್ದರಿಂದ ಚೆಕ್‌ಪೋಸ್ಟ್ ಬಳಿ ಸಿಕ್ಕಿಬಿದ್ದಿದ್ದಾರೆ. ಸ್ಥಳಕ್ಕೆ ದೌಡಾಯಿಸಿದ ತಹಸೀಲ್ದಾರ್ ಹುಲ್ಲುಮನಿ ತಿಮ್ಮಣ್ಣ ಪಾಸ್, ಇತರೆ ದಾಖಲೆಗಳನ್ನು ಪರಿಶೀಲಿಸಿ, ಕೂಲಿಕಾರರಿಂದ ಮಾಹಿತಿ ಪಡೆದುಕೊಂಡರು. ನಂತರ ತಾಲೂಕಾಡಳಿತ ಕೂಲಿಕಾರ್ಮಿಕರಿಗೆ ಊಟ, ಕುಡಿವ ನೀರಿನ ವ್ಯವಸ್ಥೆ ಮಾಡಿತು. ಆರೋಗ್ಯ ಇಲಾಖೆಯಿಂದ ಆರೋಗ್ಯ ತಪಾಸಣೆ ನಡೆಸಿತು.
ಜಿಲ್ಲಾಧಿಕಾರಿ ಆದೇಶದಂತೆ ದಾವಣಗೆರೆಯ ಶಿರಮಗೊಂಡನಳ್ಳಿ ಸಮೀಪಕ್ಕೆ ಪೊಲೀಸರ ಸಹಾಯದೊಂದಿಗೆ ಹೋಂಕ್ವಾರಂಟೈನ್‌ಗೆ ಕಳಿಸಲಾಯಿತು. ಈ ವೇಳೆ ತಾಲೂಕು ಆರೋಗ್ಯಾಧಿಕಾರಿ ಡಾ.ನಾಗರಾಜ್, ಪಿಎಸ್‌ಐ ಉಮೇಶ್ ಬಾಬು, ಎಸ್ಟಿ ಕಲ್ಯಾಣಾಧಿಕಾರಿ ಮಹೇಶ್ವರಪ್ಪ ಇದ್ದರು.