ಜಗಳೂರು: ಮಲ್ಟಿ ಮಾರ್ಟ್ ಆರಂಭಕ್ಕೆ ತಾಲೂಕು ವರ್ತಕರಿಂದ ತೀವ್ರ ವಿರೋಧ

JLR ph 2 Oct 14 protest
Published on
ಜಗಳೂರು: ಪಟ್ಟಣದ ಚಳ್ಳಕೆರೆ ರಸ್ತೆಯಲ್ಲಿ ಹೊಸದಾಗಿ ಮಲ್ಟಿ ಮಾರ್ಟ್ ಪ್ರಾರಂಭಿಸುತ್ತಿರುವುದನ್ನು ತೀವ್ರವಾಗಿ ವಿರೋಧಿಸಿ ತಾಲೂಕು ವರ್ತಕರ ಸಂಘವು ಮಂಗಳವಾರ ನಗರದಲ್ಲಿ ಬೃಹತ್ ಪ್ರತಿಭಟನೆ ನಡೆಸಿ ಗ್ರೇಡ್-2 ತಹಸೀಲ್ದಾರ್ ಮಂಜಾನಂದ ಅವರಿಗೆ ಮನವಿ ಸಲ್ಲಿಸಿತು.

ಬಡ ವ್ಯಾಪಾರಿಗಳ ಜೀವನ ನಿರ್ವಹಣೆಗೆ ಕಷ್ಟ

ವರ್ತಕರ ಸಂಘದ ತಾಲೂಕಾಧ್ಯಕ್ಷ ಕೆ.ಆರ್. ಖಲಂದರ್ ಸಾಬ್ ಮಾತನಾಡಿ, ಜಗಳೂರು ಪಟ್ಟಣದಲ್ಲಿ ದೊಡ್ಡ ಮಲ್ಟಿ ಮಾರ್ಟ್‌ಗಳ ಅವಶ್ಯಕತೆ ಇಲ್ಲ. ಸುಮಾರು ವರ್ಷಗಳಿಂದ ಕಿರಾಣಿ ಮತ್ತು ಚಿಲ್ಲರೆ ಸೇರಿದಂತೆ ಸುಮಾರು 600ಕ್ಕೂ ಹೆಚ್ಚು ಅಂಗಡಿಗಳು ಪಟ್ಟಣದಲ್ಲಿವೆ. ಇವುಗಳ ದುಡಿಮೆಯಿಂದಲೇ ನಮ್ಮ ಜೀವನ ಸಾಗುತ್ತಿದೆ. ಆದರೆ, ಇದೀಗ ಮಾಲ್ ಮತ್ತು ಮಾರ್ಟ್‌ಗಳು ತಲೆ ಎತ್ತಿದರೆ ಬಡ ವ್ಯಾಪಾರಿಗಳು ಎಲ್ಲಿಗೆ ಹೋಗಬೇಕು ಎಂದು ಪ್ರಶ್ನಿಸಿದರು.

ಕಿರಾಣಿ ಅಂಗಡಿಗಳಿಗೆ ಹೊಡೆತ

ಮಾರ್ಟ್‌ಗಳಲ್ಲಿ ಒಂದೇ ಛಾವಣಿಯಡಿಯಲ್ಲಿ ಎಲ್ಲ ವಸ್ತುಗಳು ಸಿಗುವುದರಿಂದ ಗ್ರಾಹಕರು ಸಹಜವಾಗಿ ಮಲ್ಟಿ ಮಾರ್ಟ್‌ಗಳ ಕಡೆ ಹೆಚ್ಚು ಆಕರ್ಷಿತರಾಗುತ್ತಾರೆ. ಇದರಿಂದಾಗಿ ಕಿರಾಣಿ ಅಂಗಡಿಗಳಿಗೆ ಬರುವ ಗ್ರಾಹಕರ ಸಂಖ್ಯೆ ಗಣನೀಯವಾಗಿ ಕುಗ್ಗುತ್ತದೆ ಎಂದು ಅವರು ದೂರಿದರು.

"ಮಲ್ಟಿ ಮಾರ್ಟ್‌ಗಳು ಬೃಹತ್ ಪ್ರಮಾಣದಲ್ಲಿ (ಬ್ಲಾಕ್‌ನಲ್ಲಿ) ಹೋಲ್‌ಸೇಲ್ ದರದಲ್ಲಿ ಖರೀದಿಸಿ ಕಡಿಮೆ ಬೆಲೆಗೆ ಮಾರಾಟ ಮಾಡುತ್ತವೆ. ಆದರೆ ಸಣ್ಣ ವ್ಯಾಪಾರಿಗಳು ಅಷ್ಟು ಕಡಿಮೆ ದರಕ್ಕೆ ವಸ್ತುಗಳನ್ನು ಮಾರಲು ಸಾಧ್ಯವಾಗುವುದಿಲ್ಲ. ಇದರಿಂದ ನಷ್ಟ ಅನುಭವಿಸಿ ನಮ್ಮ ಅಂಗಡಿಗಳ ಬಾಗಿಲು ಮುಚ್ಚುವ ಪರಿಸ್ಥಿತಿ ಬರುತ್ತದೆ. ಇದಕ್ಕೆ ಅವಕಾಶ ನೀಡಬಾರದು" ಎಂದು ಮನವಿ ಮಾಡಿದರು.

ಸಮಾಜದ ಸಮತೋಲನಕ್ಕೆ ಧಕ್ಕೆ

ಪ.ಪಂ. ಮಾಜಿ ಅಧ್ಯಕ್ಷ ವೈ.ಎನ್. ಮಂಜುನಾಥ್ ಮಾತನಾಡಿ, ಮಲ್ಟಿ ಮಾರ್ಟ್ ಆಧುನಿಕತೆಯ ರೂಪವಿರಬಹುದು, ಆದರೆ ಕಿರಾಣಿ ಅಂಗಡಿಗಳು ನಮ್ಮ ಸಾಮಾಜಿಕ ಮತ್ತು ಆರ್ಥಿಕ ನಿಕಟ ಬೆಂಬಲ ವ್ಯವಸ್ಥೆಯಾಗಿದೆ. ಇದನ್ನು ಉಳಿಸಿಕೊಳ್ಳುವುದು ಕೇವಲ ನಮ್ಮ ಹಿತವಲ್ಲದೆ, ಸಮಾಜದ ಸಮತೋಲನಕ್ಕೆ ಅತ್ಯಗತ್ಯವಾಗಿದೆ ಎಂದರು.

ಪಟ್ಟಣದ ಮುಖ್ಯ ರಸ್ತೆ ವಿಸ್ತರಣೆಯಿಂದ ಈಗಾಗಲೇ ಸಾಕಷ್ಟು ಸಣ್ಣಪುಟ್ಟ ವ್ಯಾಪಾರಿಗಳು ಮಳಿಗೆ ಇಲ್ಲದೆ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದಾರೆ. ಈಗ ಮಾರ್ಟ್ ಬಂದರೆ ಮತ್ತಷ್ಟು ಹೊಡೆತ ಬೀಳುತ್ತದೆ. ಆದ್ದರಿಂದ ಅಧಿಕಾರಿಗಳು ಕೂಡಲೇ ಇದನ್ನು ಪರಿಶೀಲಿಸಿ, ಮಲ್ಟಿ ಮಾರ್ಟ್ ಪ್ರಾರಂಭಿಸುವ ಪ್ರಸ್ತಾವನೆಯನ್ನು ರದ್ದುಪಡಿಸಬೇಕು ಎಂದು ಒತ್ತಾಯಿಸಿದರು.

ಈ ಪ್ರತಿಭಟನೆಯಲ್ಲಿ ವರ್ತಕರ ಸಂಘದ ಪದಾಧಿಕಾರಿಗಳಾದ ಎಸ್.ಎಸ್. ಮಾರ್ಟ್ ಮಹಮದ್ ಹಫೀಜ್ ಉಲ್ಲಾ, ಆಯಿಲ್ ಬಾಬಣ್ಣ, ಬಿ.ಆರ್. ಹರ್ಷ, ಅಜ್ಜಪ್ಪ ನಾಡಿಗರ್, ಕರ್ನಾಟಕ ರಕ್ಷಣಾ ವೇದಿಕೆ ಅಧ್ಯಕ್ಷ ಮಹಾಂತೇಶ್, ಎಂ. ರೇವಣ್ಣ, ವೀರಭದ್ರೇಶ್ವರ, ಜೆ. ಮಂಜುನಾಥ್, ಮಹಾಂತೇಶ್, ಕೆ.ಡಿ.ಪ್ರಭು ಮತ್ತಿತರರು ಪಾಲ್ಗೊಂಡಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net