

ಹರಿಹರ: ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಶಿಕ್ಷಣವೇ ಪ್ರಮುಖ ಅಸ್ತ್ರವಾಗಿದ್ದು, ಇದರಿಂದ ವಿಮುಖರಾಗದಿರಿ ಎಂದು ಜಗಳೂರು ಶಾಸಕ ದೇವೇಂದ್ರಪ್ಪ ಯುವಕರಿಗೆ ಸಲಹೆ ನೀಡಿದರು.
ನಗರದ ಹೊರವಲಯದಲ್ಲಿರುವ ಪ್ರೊ.ಬಿ. ಕೃಷ್ಣಪ್ಪ ಭವನದಲ್ಲಿ ಶುಕ್ರವಾರ ಮಾನವ ಬಂಧುತ್ವ ವೇದಿಕೆ ಹಾಗೂ ಕರ್ನಾಟಕ ವಾಲ್ಮೀಕಿ ಯುವ ವೇದಿಕೆಯಿಂದ ಎರಡು ದಿನಗಳ ಕಾಲ ಹಮ್ಮಿಕೊಂಡಿದ್ದ ವಾಲ್ಮೀಕಿ ಸಮುದಾಯದ ಯುವಕರಿಗೆ ನಾಯಕತ್ವ ಮತ್ತು ಕೌಶಲ ಶಿಬಿರ ಉದ್ಘಾಟಿಸಿ ಮಾತನಾಡಿದರು.
ನಿರಂಕುಶ ಪ್ರಭುತ್ವ ವ್ಯವಸ್ಥೆಯಲ್ಲಿ ಕತ್ತಿಯನ್ನು ಹಿಡಿದು ಹೋರಾಟ ಮಾಡುತ್ತಿದ್ದರು ಎನ್ನುವುದನ್ನು ನಾವು ಓದಿದ್ದೇವೆ. ಆದರೆ ಪ್ರಜಾಪ್ರಭುತ್ವದ ಆಡಳಿತದಲ್ಲಿ ಖಡ್ಗಕ್ಕಿಂತ ಲೇಖನಿಗೆ ಹೆಚ್ಚಿನ ಮಹತ್ವವಿದೆ. ಆದ್ದರಿಂದ ಎಲ್ಲರೂ ಶಿಕ್ಷಣಕ್ಕೆ ಹೆಚ್ಚಿನ ಒತ್ತು ನೀಡಬೇಕು ಎಂದರು.
ಬದುಕಿನಲ್ಲಿ ಎತ್ತರದ ಸ್ಥಾನಕ್ಕೆ ಹೋದಾಗ ಕುಟುಂಬದ ಶ್ರೇಯೋಭಿವೃದ್ಧಿಗೆ ಮಾತ್ರ ಶ್ರಮಿಸದೇ ಸಮಾಜದ ಕಟ್ಟಕಡೆಯ ವ್ಯಕ್ತಿ ಬಗ್ಗೆ ಗಮನಹರಿಸಬೇಕು. ಉತ್ತಮ ನಾಯಕನಾಗಬೇಕಾದರೆ ಎಲ್ಲ ವರ್ಗಗಳ ಜನರ ವಿಶ್ವಾಸಗಳಿಸಬೇಕು ಎಂದು ತಿಳಿಸಿದರು.
ಮಾನವ ಬಂಧುತ್ವ ವೇದಿಕೆ ಸಂಚಾಲಕ ಎ.ಬಿ. ರಾಮಚಂದ್ರಪ್ಪ ಮಾತನಾಡಿ, ನಮ್ಮ ವೇದಿಕೆ ವತಿಯಿಂದ ಜಾತ್ಯತೀತವಾಗಿ ಎಲ್ಲ ಸಮುದಾಯದ ಜಾಗೃತಿಗಾಗಿ ಸಚಿವ ಸತೀಶ್ ಜಾರಕಿಹೊಳಿಯವರ ನೇತೃತ್ವದಲ್ಲಿ ಹಲವಾರು ಕಾರ್ಯಕ್ರಮಗಳನ್ನು ಆಯೋಜನೆ ಮಾಡಲಾಗುತ್ತಿದೆ ಎಂದರು.
ಮುಖಂಡ ಹೊದಿಗೆರೆ ರಮೇಶ್ ಮಾತನಾಡಿ, ಸಮುದಾಯದ ಯುವಕರು ನಾಯಕತ್ವದ ಗುಣಗಳನ್ನು ಬೆಳೆಸಿಕೊಳ್ಳಬೇಕು. ಮುಂದಿನ ದಿನಗಳಲ್ಲಿ ಸತೀಶ್ ಜಾರಕಿಹೊಳಿ ಅವರು ರಾಜ್ಯದ ಮುಖ್ಯಮಂತ್ರಿಯಾಗುವ ಸಂಭವವಿದ್ದು, ಎಲ್ಲ ಶೋಷಿತ ವರ್ಗದ ಜನರಿಗೆ ನ್ಯಾಯ ದೊರಕುವ ವಿಶ್ವಾಸವಿದೆ ಎಂದು ಹೇಳಿದರು.
ಮುಖಂಡ ಬಿ. ವೀರಣ್ಣ ಅಧ್ಯಕ್ಷತೆವಹಿಸಿದ್ದರು. ಆರಂಭದಲ್ಲಿ ಸಂವಿಧಾನ ಪೀಠಿಕೆಯನ್ನು ಓದಲಾಯಿತು. ಡಾ. ಮುತ್ತಯ್ಯ ಹಾಗೂ ಡಾ. ಪ್ರಶಾಂತ ನಾಯಕ್ ಅವರು ಶಿಬಿರದಲ್ಲಿ ತರಬೇತಿ ನೀಡಿದರು. ಮುಖ್ಯಮಂತ್ರಿ ಪದಕ ಪುರಸ್ಕೃತ ಹರಿಹರ ಗ್ರಾಮಾಂತರ ಪಿಎಸ್ಐ ಮಂಜುನಾಥ್ ಕುಪೆಲೂರ ಅವರನ್ನು ಸನ್ಮಾನಿಸಲಾಯಿತು.
ದಾವಣಗೆರೆ ತಾಪಂ ಮಾಜಿ ಅಧ್ಯಕ್ಷ ಕೆ.ಎನ್. ಮಂಜುನಾಥ್, ವಾಣಿಜ್ಯ ತೆರಿಗೆ ಇಲಾಖೆಯ ನಿವೃತ್ತ ಅಧಿಕಾರಿ ಮಾರಣ್ಣ ನಾಯಕ, ಜಿಗಳಿ ಆನಂದಪ್ಪ, ಮಾಡಾಳ್ ಶಿವಕುಮಾರ್, ಪ್ರಕಾಶ್ ಹಾದಿಮನೆ, ಜಿಗಳಿ ಪ್ರಕಾಶ್ ಹಾಗೂ ಇತರರಿದ್ದರು.