ಹಿರೇಅರಕೆರೆಯ ಕೋಡಿ ಬಂಡ್‌ನಲ್ಲಿ ಬಿರುಕು

jagaluru
Published on

ಜಗಳೂರು: ತಾಲೂಕಿನ ಹಿರೇಅರಕೆರೆ ಗ್ರಾಮದ ಕೆರೆಯ ಕೋಡಿ ಬಳಿ ಬಂಡ್‌ನಲ್ಲಿ ಬಿರುಕು ಕಾಣಿಸಿಕೊಂಡು ಸಾಕಷ್ಟು ನೀರು ಪೋಲಾಗಿ ಜಮೀನುಗಳಿಗೆ ನೀರು ನುಗ್ಗುತ್ತಿರುವುದು ರೈತರನ್ನು ಆತಂಕಕ್ಕೆ ದೂಡಿದೆ.

ಕಳೆದ ಎರಡು ವಾರಗಳಿಂದ ಸುರಿಯುತ್ತಿರುವ ಧಾರಾಕಾರ ಮಳೆಗೆ ಕೆರೆ, ಕಟ್ಟೆಗಳೆಲ್ಲ ಭರ್ತಿಯಾಗಿ ನೀರು ಹರಿಯುತ್ತಿರುವುದು ಸಂಭ್ರಮ ಮನೆ ಮಾಡಿದೆ. ಆದರೆ, ಮತ್ತೊಂದೆಡೆ ಕೆರೆ ಏರಿ, ಬಂಡ್‌ಗಳು ಬಿರುಕು ಕಾಣಿಸಿಕೊಂಡು ಸಂಕಷ್ಟಕ್ಕೆ ಸಿಲುಕುವಂತೆ ಮಾಡಿವೆ.

ಹಿರೇಅರಕೆರೆಯ ಕೆರೆ 193 ಎಕರೆ ವಿಸ್ತೀರ್ಣವಿದ್ದು, ಈಗಾಗಲೇ 15 ದಿನಗಳಿಂದಲೂ ಕೋಡಿ ಬಿದ್ದಿದೆ. ಆದರೆ, ಕೋಡಿಯ ಪಕ್ಕದಲ್ಲಿ ಕಟ್ಟಲಾಗಿರುವ ಮೂಲ ಬಂಡ್‌ನಲ್ಲಿ ಸಣ್ಣದಾಗಿ ಬಿರುಕು ಕಾಣಿಸಿಕೊಂಡಿತ್ತು. ಅಲ್ಲಿಂದ ಸೋರಿಕೆಯಾಗುತ್ತಿದ್ದು, ರಸ್ತೆಯ ಮೇಲೆ ಹರಿದು ರೈತರ ಜಮೀನುಗಳ ಮೂಲಕ ಚದರಗೊಳ್ಳ ಕೆರೆ ಸೇರುತ್ತಿದೆ.

ಮೆಕ್ಕೆಜೋಳ, ರಾಗಿ ಮತ್ತಿತರ ಬೆಳೆಗಳ ನೂರಾರು ಎಕರೆ ಜಮೀನು ಜಲಾವೃತಗೊಂಡಿದೆ. ಡಾಂಬರ್ ರಸ್ತೆ ಕೊಚ್ಚಿಕೊಂಡು ಹೋಗಿದೆ. ಜಿಪಂ ವ್ಯಾಪ್ತಿಗೆ ಒಳಪಡುವ ಈ ಕೆರೆಯ ಏರಿಯ ಬಿರುಕನ್ನು ಆದಷ್ಟು ಬೇಗ ಸರಿಪಡಿಸದಿದ್ದರೆ ದೊಡ್ಡ ಅನಾಹುತ ಉಂಟಾಗಲಿದೆ ಎಂದು ಗ್ರಾಮದ ರೈತರಾದ ಬಸವರಾಜಪ್ಪ, ಚನ್ನಬಸಪ್ಪ, ರಾಜಪ್ಪ, ರುದ್ರೇಶ್ ನಾಗರಾಜ್ ಆಗ್ರಹಿಸಿದ್ದಾರೆ.

Related Stories

No stories found.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net