ಡೆಂಘೆ ಜ್ವರ ತಡೆಯಲು ಮುನ್ನೆಚ್ಚರಿಕೆ ಕ್ರಮ

jagaluru
Published on

ಜಗಳೂರು: ಮಳೆಗಾಲ ಆರಂಭವಾಗಿದ್ದು ಡೆಂಘೆ ಜ್ವರ ವ್ಯಾಪಕವಾಗಿ ಹರಡುತ್ತಿರುವುದು ಜನರಲ್ಲಿ ಆತಂಕವನ್ನುಂಟು ಮಾಡಿದೆ. ಹಾಗಾಗಿ, ಈ ಬಗ್ಗೆ ಜಾಗೃತಿ ಮೂಡಿಸಿ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಶಾಸಕ ಚಿಕ್ಕಮ್ಮನಹಟ್ಟಿ ಬಿ. ದೇವೇಂದ್ರಪ್ಪ ಅಧಿಕಾರಿಗಳಿಗೆ ಸೂಚಿಸಿದರು.

ಪಟ್ಟಣದ ಪ್ರವಾಸಿ ಮಂದಿರದ ಸಭಾಂಗಣದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಡೆಂೆ ಜಾಗೃತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಪ್ರಾಥಮಿಕ ಆರೋಗ್ಯ ಕೇಂದ್ರ ಮತ್ತು ಉಪ ಕೇಂದ್ರಗಳಲ್ಲಿ ಅಧಿಕಾರಿ, ಸಿಬ್ಬಂದಿ ಆರೋಗ್ಯ ಸೇವೆ ನೀಡಬೇಕು. ಡೆಂಘೆ ಪ್ರಕರಣಗಳ ಮಾಹಿತಿ ತಿಳಿದ ತಕ್ಷಣವೇ ಎಚ್ಚೆತ್ತುಕೊಂಡು ಜೀವ ರಕ್ಷಣೆಗೆ ಮುಂದಾಗಬೇಕು. ಆರೋಗ್ಯ ಇಲಾಖೆಯ ಬಗ್ಗೆ ಸಾಕಷ್ಟು ದೂರುಗಳು ಬರುತ್ತಿವೆ. ಎಚ್ಚರಿಕೆ ವಹಿಸುವಂತೆ ಸಲಹೆ ನೀಡಿದರು.

ತಾಯಿ ಜನ್ಮ ನೀಡಿದರೆ ವೈದ್ಯರು ಪುನರ್ಜನ್ಮ ನೀಡುತ್ತಾರೆ. ಆಸ್ಪತ್ರೆಗಳಲ್ಲಿ ನೂರಾರು ರೋಗಿಗಳಿಗೆ ಚಿಕಿತ್ಸೆ ನೀಡುತ್ತಾರೆ. ಅವರಿಗೂ ಕುಟುಂಬ, ಮಕ್ಕಳು ಇದ್ದಾರೆ. ಅವರಿಗೆ ಸಾರ್ವಜನಿಕರು ಸಹಕಾರ ನೀಡಬೇಕು ಎಂದರು.

ತಾಲೂಕು ಆರೋಗ್ಯಾಧಿಕಾರಿ ವಿಶ್ವನಾಥ್ ಮಾತನಾಡಿ, ನಮ್ಮ ಸಿಬ್ಬಂದಿ ನಿಷ್ಠೆಯಿಂದ ಕರ್ತವ್ಯ ಮಾಡುತ್ತಿದ್ದು, ಜಗಳೂರಿನಲ್ಲಿ ಈವರೆಗೆ 12 ಡೆಂಘೆ ಪ್ರಕರಣಗಳು ಕಂಡುಬಂದಿವೆ. ಪ್ರತಿ ಹಳ್ಳಿಯಲ್ಲೂ ಆಶಾ ಕಾರ್ಯಕರ್ತೆಯರಿಂದ ಮನೆ ಮನೆಗಳಲ್ಲಿ ಲಾರ್ವಾ ಪರೀಕ್ಷೆ ಮಾಡಿಸಲಾಗುತ್ತಿದೆ. ನೀರು ನಿಲ್ಲುವ ಪ್ರದೇಶಗಳಲ್ಲಿ ಹಾಗೂ ಚರಂಡಿಗಳಿಗೆ ಬ್ಲೀಚಿಂಗ್ ಪೌಡರ್ ಸಿಂಪಡಣೆ ಮಾಡಿಸಲಾಗುತ್ತಿದೆ. ಈ ಎಲ್ಲ ಮುನ್ನೆಚ್ಚರಿಕೆ ಕ್ರಮಗಳಿಂದ ಪ್ರಕರಣಗಳು ಕಡಿಮೆ ಇವೆ ಎಂದರು.

ಮನೆ ಪರಿಸರ ಸ್ವಚ್ಛತೆಗೆ ವೈದ್ಯರ ಸಲಹೆ: ಜನರಲ್ಲಿ ತೀವ್ರತರ ಜ್ವರ, ತಲೆನೋವು, ವಾಂತಿ ಲಕ್ಷಣಗಳು ಕಂಡುಬಂದರೆ ನಿರ್ಲಕ್ಷೃ ತೋರದೆ ಚಿಕಿತ್ಸೆ ಪಡೆದುಕೊಂಡು ಡೆಂಘೆ ಪರೀಕ್ಷೆ ಮಾಡಿಸಿಕೊಳ್ಳಬೇಕು. ಮನೆ ಸುತ್ತಲಿನ ಪರಿಸರ ಸ್ವಚ್ಛತೆ ಕಾಪಾಡಿಕೊಂಡು ಮಳೆ ನೀರು ಸಂಗ್ರಹವಾಗದಂತೆ ನೋಡಿಕೊಳ್ಳಬೇಕು ಎಂದು ತಾಲೂಕು ಆರೋಗ್ಯಾಧಿಕಾರಿ ವಿಶ್ವನಾಥ್ ಸಾರ್ವಜನಿಕರಿಗೆ ಸಲಹೆ ನೀಡಿದರು.

ಸಾರ್ವಜನಿಕ ಆಸ್ಪತ್ರೆ ವೈದ್ಯಾಧಿಕಾರಿ ಷಣ್ಮುಖಪ್ಪ, ನೌಕರ ಸಂಘದ ಅಧ್ಯಕ್ಷ ನಾಗರಾಜ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net