ಹನುಮಂತಾಪುರ ಗ್ರಾಪಂಗೆ ಬೀಗ

JLR Pratibatane Jul 20
Published on

ಜಗಳೂರು: ನರೇಗಾ ಯೋಜನೆಯಡಿ ದನದ ಕೊಟ್ಟಿಗೆ ನಿರ್ಮಿಸಿಕೊಂಡ ಫಲಾನುಭವಿಗಳ ಖಾತೆಗೆ ಹಣ ಹಾಕದೇ ಅಧಿಕಾರಿಗಳು ಅಲೆದಾಡಿಸುತ್ತಿರುವುದಾಗಿ ಆರೋಪಿಸಿ ತಾಲೂಕಿನ ತಮಲೇಹಳ್ಳಿ ಗ್ರಾಮಸ್ಥರು ಹನುಮಂತಾಪುರ ಗ್ರಾಪಂಗೆ ಸೋಮವಾರ ಬೀಗ ಹಾಕಿ ಪ್ರತಿಭಟನೆ ನಡೆಸಿದರು.

ಗ್ರಾಮದಲ್ಲಿ ಖಾತ್ರಿ ಯೋಜನೆ ಸದ್ಬಳಕೆ ಮಾಡಿಕೊಂಡು ರೈತರು 46 ದನದ ಕೊಟ್ಟಿಗೆಗಳನ್ನು ನಿರ್ಮಿಸಿಕೊಂಡಿದ್ದಾರೆ. ಕಾಮಗಾರಿ ಪೂರ್ಣಗೊಂಡು ಎರಡು ತಿಂಗಳಾದರೂ ಒಂದು ರೂಪಾಯಿ ಹಣ ಕೊಟ್ಟಿಲ್ಲ. ಈ ಬಗ್ಗೆ ಹಲವು ಬಾರಿ ಇಒ ಅವರ ಗಮನಕ್ಕೂ ತರಲಾಗಿತ್ತು. ಆದರೆ ಗ್ರಾಪಂ ಅಭಿವೃದ್ಧಿ ಅಧಿಕಾರಿ ಮಾತ್ರ ಇದಕ್ಕೆ ಸೊಪ್ಪು ಹಾಕದೇ ಸುಖಸುಮ್ಮನೆ ಅಲೆದಾಡಿಸುತ್ತಿದ್ದಾರೆಂದು ಮುಖಂಡ ರಮೇಶ್ ಆರೋಪಿಸಿದರು.

ಕರೊನಾ ಭೀತಿಯಿಂದ ಹೊರಗೆ ಓಡಾಡುವುದೇ ಕಷ್ಟವಾಗಿದೆ. ಎರಡು ತಿಂಗಳಿಂದ ಕಚೇರಿಗೆ ಮನೆಗೆ ಓಡಾಡಿ ಚಪ್ಪಲಿ ಸವೆದಿವೆ. ಪ್ರತಿ ದಿನ ಒಂದೊಂದು ಕಾರಣ ಹೇಳುತ್ತಾ ಕಾಲಹರಣ ಮಾಡುತ್ತಿದ್ದಾರೆ. ಸಾಲ ಮಾಡಿ ದನದ ಕೊಟ್ಟಿಗೆ ನಿರ್ಮಿಸಿಕೊಂಡಿರುವ ರೈತರು ಹಣಕ್ಕೆ ಬಡ್ಡಿ ಕಟ್ಟಲು ಸಾಧ್ಯವಾಗುತ್ತಿಲ್ಲ. ಕೂಲಿ ಕೆಲಸವಿಲ್ಲದೇ ಜೀವನ ನಡೆಸುವುದು ಕಷ್ಟವಾಗಿದೆ. ಆದ್ದರಿಂದ ತಕ್ಷಣ ನಮಗೆ ಬರಬೇಕಾದ ಹಣ ಕೊಡಬೇಕೆಂದು ರೈತರು ಮನವಿ ಮಾಡಿದರು.

ಜಿಪಂ ಸಿಇಒ ಪದ್ಮಾ ಬಸವಂತಪ್ಪ ನಿರ್ಮಿಸಿಕೊಂಡ ಎಲ್ಲ ದನದ ಕೊಟ್ಟಿಗೆಗಳಿಗೆ ಹಣ ತುಂಬುವುದಾಗಿ ಫೋನಿನಲ್ಲಿ ಭರವಸೆ ನೀಡಿದ್ದರಿಂದ ಗ್ರಾಮಸ್ಥರು ಪ್ರತಿಭಟನೆ ಹಿಂಪಡೆದರು.

ಗ್ರಾಮದ ಮುಖಂಡರಾದ ರಮೇಶ್, ಶ್ರೀನಿವಾಸ್, ಲಂಕೇಶ್, ಮಾರಣ್ಣ, ಗ್ರಾಪಂ ಮಾಜಿ ಸದಸ್ಯ ಬಸವರಾಜ್, ಪರಮೇಶ್, ಶಿವಣ್ಣ, ಕರಿಯಪ್ಪ, ಪುರಾಣಿ ಹನುಮಂತಪ್ಪ ಮತ್ತಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net