

ಜಗಳೂರು: ತಾಲೂಕಿನ ಕೆಚ್ಚೇನಹಳ್ಳಿಯಿಂದ ಪುಣ್ಯ ಕ್ಷೇತ್ರ ಕೊಡದಗುಡ್ಡದ ಶ್ರೀ ವೀರಭದ್ರಸ್ವಾಮಿ ದೇಗುಲ ಸಂಪರ್ಕಿಸುವ ರಸ್ತೆ ಸಂಪೂರ್ಣ ಹದಗೆಟ್ಟಿದ್ದು ದುರಸ್ತಿಪಡಿಸಬೇಕೆಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.
ಡಾಂಬರ್ ಕಿತ್ತ ಕಲ್ಲುಗಳು ಮೇಲೆದ್ದಿರುವ ದುರ್ಗಮ ರಸ್ತೆಯಲ್ಲಿ ಸಂಚಾರ ಕಷ್ಟಕರವಾಗಿದೆ. ಆಳುದ್ದದ ಗುಂಡಿಯಲ್ಲಿ ವಾಹನ ಸವಾರಿ ಮಾಡುವುದು ಸಾಹಸ ಮಾಡಿದಂತಾಗುತ್ತದೆ. ಗುಂಡಿಗಳಲ್ಲಿ ಮಳೆ ನೀರು ತುಂಬಿಕೊಳ್ಳುವುದರಿಂದ ತಗ್ಗಾಗುವುದು, ಸಮ ರಸ್ತೆ ಯಾವುದೆಂಬುದೇ ತಿಳಿಯದಾಗಿದೆ. ಮೈಮರೆತು ವಾಹನ ಓಡಿಸಿದರೆ ಯಮನ ಪಾದ ಸೇರುವಷ್ಟು ಮಾರ್ಗ ಹದಗೆಟ್ಟಿದೆ.
ಈ ಮಾರ್ಗ ಕೊಡದಗುಡ್ಡ ವೀರಭದ್ರಸ್ವಾಮಿ, ಐನಳ್ಳಿ ಚೌಡೇಶ್ವರಿ ದೇವಸ್ಥಾನಕ್ಕೆ ಸಂಪರ್ಕ ಕಲ್ಪಿಸುತ್ತಿದ್ದು, ದಾವಣಗೆರೆಗೂ ಸಮೀಪದ ರಸ್ತೆಯಾಗಿದೆ. ಇದು ಬಳ್ಳಾರಿ, ಹೊಸಪೇಟೆ, ಕೂಡ್ಲಿಗಿ, ಕೊಟ್ಟೂರು, ಉಜ್ಜಯಿನಿ ಇತರ ನಗರ ಗ್ರಾಮಗಳ ಸಂಪರ್ಕ ರಸ್ತೆಯೂ ಆಗಿದೆ. ಇಲ್ಲಿ ನಿತ್ಯ ನೂರಾರು ವಾಹನ ಸಂಚರಿಸುತ್ತಿದ್ದು ಕೂಡಲೇ ದುರಸ್ತಿಪಡಿಸಬೇಕೆಂದು ಆಗ್ರಹಿಸಿದ್ದಾರೆ.
ನೆಪಕ್ಕೆ ತ್ಯಾಪೆ: ಕೆಚ್ಚೇನಹಳ್ಳಿಯಿಂದ ಕೆಳಗೋಟೆ, ಐನಹಳ್ಳಿ, ಮುಷ್ಟಿಗರಹಳ್ಳಿ, ಮಿನಿಗರಹಳ್ಳಿ, ಮೆದಕೆರೆನಹಳ್ಳಿ ವರೆಗೆ ಲೋಕೋಪಯೋಗಿ ಇಲಾಖೆ ಕೆಲ ತಿಂಗಳ ಹಿಂದೆ ಲಕ್ಷಾಂತರ ರೂ. ಖರ್ಚು ಮಾಡಿ ದೊಡ್ಡ ಗುಂಡಿಗಳನ್ನು ಮುಚ್ಚಲು ತೇಪೆ ಕೆಲಸ ಮಾಡಿತ್ತು. ಮಳೆ, ಬೃಹತ್ ವಾಹನಗಳ ಓಡಾಟದಿಂದ ರಸ್ತೆಯ ಸ್ಥಿತಿ ಮೊದಲಿನಂತೆಯೇ ಆಗಿದೆ. ಈ ಬಗ್ಗೆ ಸಂಬಂಧಿಸಿದ ಅಧಿಕಾರಿಗಳ ಗಮನಕ್ಕೆ ತಂದರೂ ಪ್ರಯೋಜನವಾಗಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಪ್ರತಿ ವರ್ಷ ಕೊಡದಗುಡ್ಡ ವೀರಭದ್ರೇಶ್ವರ ಸ್ವಾಮಿ ದೊಡ್ಡ ರಥೋತ್ಸವ ನಡೆಯುವುದರಿಂದ ಶ್ರೀಸ್ವಾಮಿ ದೇಗುಲ ಸಂಪರ್ಕಿಸುವ ರಸ್ತೆಯಲ್ಲಿ ಸಾವಿರಾರು ವಾಹನಗಳು ಸಂಚರಿಸುತ್ತವೆ. ಈ ದುಸ್ಥಿತಿಯ ಮಾರ್ಗದಲ್ಲಿ ಸಂಚರಿಸುವಾಗ ಅಪಘಾತ ಸಂಭವಿಸುವ ಸಾಧ್ಯತೆ ಹೆಚ್ಚಿದೆ. ಹೀಗಾಗಿ ರಸ್ತೆಯನ್ನು ಹೊಸದಾಗಿಯೇ ನಿರ್ಮಿಸಲು ಸಂಬಂಧಿಸಿದ ಅಧಿಕಾರಿಗಳು ಮುಂದಾಗಬೇಕು.
> ಪ್ರಕಾಶ್‌ಗೌಡ, ಪ್ರದೀಪ್, ಜಗಳೂರು
ತಾಲೂಕಿನ ಬಹುತೇಕ ರಸ್ತೆಗಳನ್ನು ಹೊಸದಾಗಿ ನಿರ್ಮಿಸಲಾಗಿದೆ. ಕೆಚ್ಚೇನಹಳ್ಳಿ-ಮೆದಕೆರೆನಹಳ್ಳಿ ಸೇರಿ ಮೂರು ರಸ್ತೆಗಳಿಗೆ ಎಷ್ಟೇ ತ್ಯಾಪೆ ಹಾಕಿದರು ಪ್ರಯೋಜನವಾಗುತ್ತಿಲ್ಲ. ಯಾವುದಾದರು ಅನುದಾನ ಬಳಸಿ ಶೀಘ್ರವೇ ರಸ್ತೆ ದುರಸ್ತಿಪಡಿಸಲಾಗುವುದು.
> ರುದ್ರಪ್ಪ, ಎಇಇ ಲೋಕೋಪಯೋಗಿ ಇಲಾಖೆ