

ನರಗುಂದ: ಜಗಜ್ಯೋತಿ ಬಸವಣ್ಣನವರು 12ನೇ ಶತಮಾನದಲ್ಲಿಯೇ ಸ್ತ್ರೀ ಸ್ವಾತಂತ್ರ್ಯ ತಂದುಕೊಡಲು ಅವಿರತವಾಗಿ ಶ್ರಮಿಸಿದ್ದರು ಎಂದು ವಿಶ್ರಾಂತ ಉಪನ್ಯಾಸಕ ಎಂ.ಎಸ್. ಯಾವಗಲ್ ಹೇಳಿದರು.
ಪಟ್ಟಣದ ಸಿದ್ಧೇಶ್ವರ ಕಾಲೇಜ್‌ನಲ್ಲಿ ಶ್ರೀ ಸಿದ್ಧೇಶ್ವರ ಸರ್ಕಾರಿ ಪ್ರಥಮ ದರ್ಜೆ ಕಾಲೇಜ್ ಹಾಗೂ ಸ್ನಾತಕೋತ್ತರ ಅಧ್ಯಯನ ಕೇಂದ್ರ, ಶರಣ ಸಾಹಿತ್ಯ ಪರಿಷತ್ತು, ಕದಳಿ ಮಹಿಳಾ ವೇದಿಕೆ ಆಶ್ರಯದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಬಸವ ಜಯಂತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ವಿಶ್ವಗುರು ಬಸವಣ್ಣವರ ಆದರ್ಶಗಳನ್ನು ಜಗತ್ತು ಕೊಂಡಾಡುತ್ತದೆ. ಇಗ್ಲೆಂಡ್‌ನ ಥೇಮ್ಸ್ ನದಿ ದಡದಲ್ಲಿ ಬಸವಣ್ಣನವರ ಮೂರ್ತಿ ಪ್ರತಿಷ್ಠಾಪಿಸಿರುವುದು ಭಾರತೀಯರಲ್ಲಿ ಹೆಮ್ಮೆ ಮೂಡಿಸಿದೆ ಎಂದರು.
ಶ್ರೀ ಸಿದ್ಧೇಶ್ವರ ಸರ್ಕಾರಿ ಪ್ರಥಮ ದರ್ಜೆಕಾಲೇಜ್ ಪ್ರಾಚಾರ್ಯ ಆನಂದ ಲಾಳಸಂಗಿ ಮಾತನಾಡಿ, ಸಮಾಜ ಸುದಾರಣೆಯಲ್ಲಿ ಬಸವಣ್ಣನವರ ಪಾತ್ರ ಹಿರಿದಾದದ್ದು. ಅವರ ಅರ್ಥಗರ್ಭಿತ ಹಿತ ವಚನಗಳಿಂದಲೇ ಇಡೀ ಜಗತ್ತಿನಾದ್ಯಂತ ಶಾಂತಿಯ ಜ್ಯೋತಿ ಬೆಳಗಿಸಿದ್ದಾರೆ. ನುಡಿದಂತೆ ನಡೆಯಬೇಕು. ಇದು ಮಾನವ ಧರ್ಮದ ಗುರಿಯಾಗಿರಬೇಕು ಎಂದರು.
ಎಸ್.ವಿ.ಮನಗುಂಡಿ ಮಾತನಾಡಿದರು. ದ್ಯಾಮಣ್ಣ ಗೊಬ್ಬರಗುಂಪಿ, ಡಾ. ಬಿ.ಎಂ. ಜಾಬಣ್ಣವರ, ಸಿ.ಎಸ್. ಸಾಲೂಟಗಿಮಠ, ಎಸ್.ಜಿ.ಮಣ್ಣೂರಮಠ, ಡಾ.ಶಿದ್ಲಿಂಗಪ್ಪ, ಶ್ರೀದೇವಿ, ಎಸ್.ಎನ್. ಪಾಟೀಲ, ಬಿ.ಡಿ. ಕೊಣ್ಣೂರ, ಎಂ.ಪಿ. ಕುಲಕರ್ಣಿ, ನಾಗಪ್ಪ ಸೂಳಿಕೇರಿ, ಮಂಜುನಾಥ ಗಾಳಿ ಇತರರಿದ್ದರು. ರಾಮು ಎಂ.ಎಸ್. ಪರಿಚಯಿಸಿದರು. ಗಂಗಾಧರಯ್ಯ ಸ್ವಾಗತಿಸಿದರು. ಎಂ.ಎಸ್.ನಿಂಗನಗೌಡ್ರ ನಿರೂಪಿಸಿದರು. ನಾಗರಾಜ ಸೂಳಿಕೇರಿ ವಂದಿಸಿದರು.