

ಚಿಕ್ಕಮಗಳೂರು: ಸಾಧನೆ ಮಾಡಬೇಕೆಂಬ ಛಲ, ಸಮಾಜಕ್ಕೆ ಏನಾದರೂ ಕೊಡುಗೆ ನೀಡಬೇಕೆಂಬ ಆತ್ಮವಿಶ್ವಾಸವಿದ್ದರೆ ಎಷ್ಟೇ ಕಷ್ಟವಿದ್ದರೂ ಅದನ್ನು ಮೆಟ್ಟಿನಿಂತು ಉತ್ತಮ ಸಾಧನೆ ಮಾಡಬಹುದು ಎಂಬುದಕ್ಕೆ ಡಾ.ಬಾಬು ಜಗಜೀವನರಾಮ್ ಜೀವನವೇ ನಿದರ್ಶನ ಎಂದು ಜಿಲ್ಲಾಧಿಕಾರಿ ಕೆ.ಎನ್.ರಮೇಶ್ ಹೇಳಿದರು. ನಗರದ ಕುವೆಂಪು ಕಲಾ ಮಂದಿರದಲ್ಲಿ ಸೋಮವಾರ ಜಿಲ್ಲಾಡಳಿತ ಹಮ್ಮಿಕೊಂಡಿದ್ದ ಡಾ.ಬಾಬು ಜಗಜೀವನರಾಮ್ ಜನ್ಮ ದಿನಾಚರಣೆ ಉದ್ಘಾಟಿಸಿ ಮಾತನಾಡಿದರು.
ವಿದ್ಯಾರ್ಥಿಯಾಗಿದ್ದಾಗಲೇ ಧ್ವನಿ ಎತ್ತಿದ್ದರು:
ಬಡ ಕುಟುಂಬದಲ್ಲಿ ಜನಿಸಿದ ಜಗಜೀವನರಾಮ್ ವಿದ್ಯಾರ್ಥಿ ಜೀವನದಲ್ಲೇ ಅನ್ಯಾಯ, ಅಸ್ಪೃಶ್ಯತೆ ವಿರುದ್ಧ ಧ್ವನಿ ಎತ್ತಿದ್ದರು. ಕಷ್ಟಪಟ್ಟು ಕಲ್ಕತ್ತ ಯುನಿವರ್ಸಿಟಿಯಲ್ಲಿ ಪದವಿ ಪಡೆದು, ಸ್ವಾತಂತ್ರ್ಯ ಹೋರಾಟಗಳಲ್ಲಿ ಭಾಗವಹಿಸಿ ಉಪ ಪ್ರಧಾನಿಯಾಗುವ ಮೂಲಕ ದೇಶದ ಅತ್ಯುನ್ನತ ಹುದ್ದೆ ಅಲಂಕರಿಸಿದ್ದಾರೆ. ಇದು ಇಂದಿನ ವಿದ್ಯಾರ್ಥಿಗಳು ಹಾಗೂ ಯುವಪೀಳಿಗೆ ಮೊದಲು ಕಲಿಯಬೇಕಾದ ಪಾಠ ಎಂದರು. ಜಗಜೀವನರಾಮ್ ಅವರು ಶೋಷಿತ ವರ್ಗದವರ ಬೆನ್ನೆಲುಬಾಗಿ ನಿಂತು ಸಮಾಜದ ಕಟ್ಟಕಡೆಯ ವ್ಯಕ್ತಿ ಅನುಭವಿಸಿದ ಕಷ್ಟಗಳನ್ನು ತಮ್ಮ ಕಷ್ಟವೆಂದು ಪರಿಗಣಿಸಿ ಹೋರಾಡಿದ್ದರು. ಸಾಧನೆ ಮಾಡಿ ಅವರ ಪರಿಸ್ಥಿತಿ ಸುಧಾರಣೆ ಮಾಡಿದವರು. ಸ್ವಾತಂತ್ರ್ಯ ಸಂಗ್ರಾಮದ ಸತ್ಯಾಗ್ರಹಗಳಲ್ಲಿ ಪಾಲ್ಗೊಂಡು ವೈಯಕ್ತಿಕ ಬದುಕಿಗಿಂತ ಸಮಾಜ ಉದ್ಧಾರಕ್ಕಾಗಿ ಹೆಗಲು ಕೊಟ್ಟಿದ್ದರು ಎಂದು ಹೇಳಿದರು.
ಸಾಮರ್ಥ್ಯ ಬೆಳೆಸಿಕೊಳ್ಳಬೇಕು:
ಯಾವುದೆ ಜವಾಬ್ದಾರಿ ನೀಡಿದಾಗ ಸರಿಯಾಗಿ ನಿಭಾಯಿಸಬೇಕಾದ ಸಾಮರ್ಥ್ಯ ಬೆಳೆಸಿಕೊಳ್ಳಬೇಕು. ಸಣ್ಣಪುಟ್ಟ ಭಿನ್ನಾಭಿಪ್ರಾಯ ಬದಿಗೊತ್ತಿ ಮಹಾನ್ ವ್ಯಕ್ತಿಗಳ ಆದರ್ಶ ಮೈಗೂಡಿಸಿಕೊಂಡು ಸಮಾಜದ ಒಳಿತಿಗಾಗಿ ಒಗ್ಗೂಡಿ ಕೆಲಸ ಮಾಡಿದಾಗ ಇಂತಹ ಕಾರ್ಯಕ್ರಮ ಸಾರ್ಥಕತೆ ಕಾಣುತ್ತದೆ ಎಂದು ತಿಳಿಸಿದರು. ಜಿಪಂ ಉಪಾಧ್ಯಕ್ಷ ಬಿ.ಜೆ.ಸೋಮಶೇಖರಪ್ಪ ಮಾತನಾಡಿ ನಾಡಿ, ಕೇಂದ್ರ ಸಚಿವರಾಗಿದ್ದ ಜಗಜೀವನರಾಮ್ ಅವರನ್ನು ಪ್ರಧಾನಿ ಮಾಡಬೇಕೆಂದು ಪಕ್ಷಾತೀತವಾಗಿ ಕೂಗೆದ್ದಿತ್ತು. ಅವರು ಅಂತಹ ವ್ಯಕ್ತಿತ್ವ ಹೊಂದಿದ್ದರು. ಶೋಷಿತರ ದನಿಯಾಗಿದ್ದರು. ಅವರನ್ನು ಅನುಕರಣೆ ಮಾಡಿದರೆ ಅದೇ ನಾವು ಅವರಿಗೆ ಕೊಡುವ ಗೌರವ ಎಂದರು.
ಎಂದಿಗೂ ಕೋಪಿಸಿಕೊಂಡವರಲ್ಲ:
ಶಿವಮೊಗ್ಗ ಡಯಟ್ ಕಾಲೇಜು ಹಿರಿಯ ಉಪನ್ಯಾಸಕ ಬಿ.ವಿ.ಹರಿಪ್ರಸಾದ್ ಮಾತನಾಡಿ, ಬಾಬು ಜಗಜೀವನರಾಮ್ ಅವರಿಗೆ ಅನೇಕ ಅವಮಾನಗಳಾಗಿದ್ದರೂ ಎಂದಿಗೂ ಕೋಪಿಸಿಕೊಂಡವರಲ್ಲ. ಮತ್ತೊಬ್ಬರನ್ನು ನೋಯಿಸಿದ್ದು ಬಹಳ ಕಡಿಮೆ. ಆದ್ದರಿಂದ ಶಿಕ್ಷಣ ಇಲಾಖೆಯವರು ಅಧ್ಯಯನ ಮಾಡುವಾಗ ಅವರನ್ನು ಅಂತರಾವಲೋಕನದ ವ್ಯಕ್ತಿ ಎಂದು ಗುರುತಿಸುತ್ತೇವೆ. ವಿದ್ಯಾರ್ಥಿ ಜೀವನದಲ್ಲಿ ಅಮಾನವೀಯವಾದ ವ್ಯತ್ಯಾಸಗಳು ಕಂಡಾಗ ಅಸ್ಪೃಶ್ಯತೆಯ ಬಿಸಿ, ನೋವು, ತಾಕಲಾಟಗಳು ಏನೆಂಬುದು ಜಗಜೀವನರಾಮ್‍ಗೆ ಅರಿವಾಗಿ ಅದರ ವಿರುದ್ಧ ಧ್ವನಿ ಎತ್ತಿದ್ದರು ಎಂದರು.
4.10 ಲಕ್ಷ ರೂ. ಚೆಕ್ ವಿತರಣೆ:
ಎರಡು ಜೋಡಿ ಅಂತರ್ಜಾತಿ ವಿವಾಹಿತರಿಗೆ ಇದೇ ಸಂದರ್ಭ ತಲಾ 2.5 ಲಕ್ಷ ರೂ. ಮೊತ್ತದ ಚೆಕ್ ನೀಡಿದರು. ಜಿಪಂ ಅಧ್ಯಕ್ಷೆ ಸುಜಾತ ಕೃಷ್ಣಪ್ಪ, ಸದಸ್ಯೆ ಜಸಂತಾ ಅನಿಲ್‍ಕುಮಾರ್, ತಾಪಂ ಅಧ್ಯಕ್ಷೆ ದಾಕ್ಷಾಯಿಣಿ ಪೂರ್ಣೇಶ್, ಡಿವೈಎಸ್‍ಪಿ ಡಿ.ಟಿ.ಪ್ರಭು ಇದ್ದರು. ಸಿಇಒ ಎಸ್.ಪೂವಿತಾ, ತಹಸೀಲ್ದಾರ್ ಕೆ.ಜೆ.ಕಾಂತರಾಜ್, ಪೌರಾಯುಕ್ತ ಬಿ.ಸಿ.ಬಸವರಾಜ್, ಸಮಾಜ ಕಲ್ಯಾಣ ಇಲಾಖೆ ಉಪ ನಿರ್ದೇಶಕಿ ಬಿ.ವಿ.ಚೈತ್ರಾ, ತಾಪಂ ಇಒ ಎಚ್.ಡಿ.ರೇವಣ್ಣ, ಸಂಘಟನೆ ಮುಖಂಡರಾದ ಕೆ.ಟಿ.ರಾಧಾಕೃಷ್ಣ, ರಮೇಶ್ ಇದ್ದರು. ಮಲ್ಲಿಗೆ ಸುಧೀರ್ ತಂಡ ಗಾಯನ ಕಾರ್ಯಕ್ರಮ ನಡೆಸಿಕೊಟ್ಟಿತು.