

ವಿಜಯವಾಣಿ ಸುದ್ದಿಜಾಲ ಬೆಂಗಳೂರು ಗ್ರಾಮಾಂತರ
ಡಾ.ಬಾಬು ಜಗಜೀವರಾಮ್ ಅವರು ಶೋಷಿತ ವರ್ಗಗಳ ಏಳಿಗೆಗಾಗಿ ದುಡಿದ ಮಹಾನ್ ವ್ಯಕ್ತಿಯಾಗಿದ್ದರು. ಜತೆಗೆ ವಿಶೇಷವಾಗಿ ಕೃಷಿ ಕ್ಷೇತ್ರದಲ್ಲಿ ಕ್ರಾಂತಿ ಮಾಡಿದವರು, ಹಾಗಾಗಿ ಇವರು ಹಸಿರು ಕ್ರಾಂತಿಯ ಹರಿಕಾರ ಎಂದು ಜನಪ್ರಿಯರಾಗಿದ್ದಾರೆ ಎಂದು ಜಿಲ್ಲಾಧಿಕಾರಿ ಎ.ಬಿ.ಬಸವರಾಜು ಸ್ಮರಿಸಿದರು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ ಮತ್ತು ಸಮಾಜ ಕಲ್ಯಾಣ ಇಲಾಖೆಯ ವತಿಯಿಂದ ದೇವನಹಳ್ಳಿಯ ಜಿಲ್ಲಾಡಳಿತ ಭವನದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಏರ್ಪಡಿಸಲಾಗಿದ್ದ ಡಾ.ಬಾಬು ಜಗಜೀವರಾಮ್ ಅವರ 39ನೇ ಪುಣ್ಯಸ್ಮರಣೆ ಅಂಗವಾಗಿ ಜಿಲ್ಲಾಧಿಕಾರಿ ಎ.ಬಿ ಬಸವರಾಜು ಜಗಜೀವನರಾಮ್ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಿ ಮಾತನಾಡಿದರು.
ಇವರ ಬಾಲ್ಯದಿಂದಲೂ ಅಸಮಾನತೆ ಮತ್ತು ಅಸ್ಪೃಶ್ಯತೆಯನ್ನು ಅನುಭವಿಸಿದ್ದರು. ಇವರು ಅಲ್ಲಿಗೆ ನಿಲ್ಲದೆ ರಾಜಕೀಯದಲ್ಲಿ ತಮ್ಮನ್ನು ಸಕ್ರಿಯವಾಗಿ ತೊಡಗಿಸಿಕೊಂಡಿದ್ದರು. 30 ವರ್ಷಗಳಿಗೂ ಹೆಚ್ಚು ಕಾಲ ರಾಜಕೀಯದಲ್ಲಿ ಸಕ್ರಿಯರಾಗಿದ್ದ ಅವರು 1979ರಲ್ಲಿ ಭಾರತದ ಉಪ ಪ್ರಧಾನ ಮಂತ್ರಿಯಾಗಿಯೂ ಸೇವೆ ಸಲ್ಲಿಸಿದರು ಎಂದರು. 1971ರ ಇಂಡೋ-ಪಾಕ್ ಯುದ್ಧದ ಸಮಯದಲ್ಲಿ ಭಾರತದ ರಕ್ಷಣಾ ಸಚಿವರಾಗಿ ಪ್ರಮುಖ ಪಾತ್ರ ವಹಿಸಿದರು, ಹಾಗಯೇ ಕೇಂದ್ರ ಕೃಷಿ ಸಚಿವರಾಗಿ ಹಸಿರು ಕ್ರಾಂತಿ ಮತ್ತು ಭಾರತೀಯ ಕೃಷಿಯ ಆಧುನೀಕರಣಕ್ಕೆ ಗಮನಾರ್ಹವಾಗಿ ಕೊಡುಗೆ ನೀಡಿದರು. ವಿಶೇಷವಾಗಿ 1974ರ ಬರಗಾಲದ ಸಮಯದಲ್ಲಿ ತೀವ್ರ ಆಹಾರ ಬಿಕ್ಕಟ್ಟನ್ನು ಪರಿಹರಿಸುವ ನಿಟ್ಟಿನಲ್ಲಿ ಅತ್ಯುತ್ತಮ ಕಾರ್ಯಸಾಧನೆ ಮಾಡಿದವರು. ಇಂತಹ ಮಹಾನ್ ವ್ಯಕ್ತಿಯ ಆದರ್ಶ ತತ್ವಗಳನ್ನು ನಾವೆಲ್ಲರೂ ಪಾಲಿಸಬೇಕು ಎಂದು ಹೇಳಿದರು.