

ಬೆಂಗಳೂರು: ಯಾವುದೇ ಸ್ಥಾನದಲ್ಲಿ ಕುಳಿತ ವ್ಯಕ್ತಿ ಬದಲಾಗಬಹುದು ಆದರೆ ಆ ಪರಂಪರೆಯನ್ನು ಬದಲಿಸಲು ಸಾಧ್ಯವಿಲ್ಲ ಎಂದು ಕೇದಾರ ಪೀಠದ ಜಗದ್ಗುರು ರಾವಲ್ ಶ್ರೀಭೀಮಾಶಂಕರಲಿಂಗ ಶಿವಾಚಾರ್ಯ ಭಗವತ್ಪಾದರು ಅಭಿಪ್ರಾಯಿಸಿದ್ದಾರೆ. ರಾಜರಾಜೇಶ್ವರಿ ನಗರದ ಘಂಟಾಕರ್ಣ ಭವನದಲ್ಲಿ ಇತ್ತಿಚೆಗೆ ಹಮ್ಮಿಕೊಂಡಿದ್ದ ಕೇದಾರ ಜಗದ್ಗುರು ಜನ್ಮದಿನೋತ್ಸವ ಮತ್ತು ಗುರುವಂದನೆ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಅವರು ಆಶೀರ್ವಚನ ನೀಡಿದರು.
ಹಿಮಾಲಯದ ಮೇಲಿರುವ ಕೇದಾರನಾಥನ ಬಾಗಿಲು ತೆರೆಯುವ ಮತ್ತು ಮುಚ್ಚುವ ಅಧಿಕಾರ ಕೇದಾರ ಜಗದ್ಗುರುಗಳಿಗೆ ಮಾತ್ರ ಇದೆ. ಇತ್ತೀಚೆಗೆ ಈ ಪರಂಪರೆಯನ್ನು ಪ್ರಶ್ನಿಸಿ ಕೆಲವರು ಭಕ್ತರಲ್ಲಿ ಗೊಂದಲ ಸೃಷ್ಟಿಸುವ ಪ್ರಯತ್ನ ನಡೆಸಿದ್ದರು. ಬಹಳ ಹಿಂದಿನಿಂದ ಇಂತಹ ಪ್ರಯತ್ನ ನಡೆದಿದ್ದು, ಯಾರು ಎಷ್ಟೇ ಪ್ರಯತ್ನಿಸಿದರೂ ಪರಂಪರೆಯನ್ನು ಬದಲಿಸಲು ಸಾಧ್ಯವಿಲ್ಲ. ಇತ್ತೀಚೆಗೆ ಕೇದಾರನಾಥ ಧಾಮದಲ್ಲಿ ಸಾಕ್ಷಾತ್ ಕೇದಾರನಾಥನೇ ಓರ್ವ ಸಾಧು ರೂಪದಲ್ಲಿ ಬಂದು ಜಗದ್ಗುರು ಘಂಟಾಕರ್ಣ ಪರಂಪರೆ, ಕೇದಾರ ಪೀಠದ ಇತಿಹಾಸವನ್ನು ತಿಳಿಸಿರುವ ವೀಡಿಯೋ ಜಗತ್ತಿನಾದ್ಯಂತ ವೈರಲ್ ಆಗಿತ್ತು.
ಕೇದಾರ ಪೀಠದ ಸದ್ಯದ ಜಗದ್ಗುರುಗಳು 324ನೇಯವರಾಗಿದ್ದು, ಈ 324 ಜನ ರಾವಲ್‌ರ ಪ್ರಾಚೀನ ದಾಖಲೆ ಇತ್ತೀಚೆಗೆ ಲಭ್ಯವಾಗಿದೆ. ಕೇದಾರ ಪೀಠದ ಇತಿಹಾಸ ಕನಿಷ್ಟ 6 ಸಾವಿರ ವರ್ಷಗಳ ಹಿಂದಿನದು ಎಂದು ಉತ್ತರಾಖಂಡದ ಅಧಿಕಾರಿಗಳೇ ಅಂದಾಜಿಸಿದ್ದಾರೆ ಎಂದು ಕೇದಾರ ಜಗದ್ಗುರುಗಳು ಪ್ರಾಚೀನ ದಾಖಲೆಯ ಪ್ರತಿಯನ್ನು ಬಿಡುಗಡೆ ಮಾಡಿದರು.
ಸಮಾರಂಭಕ್ಕೂ ಮುನ್ನ ಕೇದಾರ ಜಗದ್ಗುರುಗಳ ಇಷ್ಟಲಿಂಗ ಮಹಾಪೂಜೆ ಹಾಗೂ ಭಕ್ತರಿಗೆ ಪ್ರಸಾದ ವಿತರಿಸಲಾಯಿತು. ನಂತರ ನಡೆದ ಗುರುವಂದನೆ ಕಾರ್ಯಕ್ರಮದಲ್ಲಿ ಭಕ್ತರು ಜಗದ್ಗುರುಗಳಿಗೆ ಪುಷ್ಪವೃಷ್ಟಿಗೈದು ಭಕ್ತಿ ಸಮರ್ಪಿಸಿದರು. ಕಾರ್ಯಕ್ರಮದಲ್ಲಿ ಕೇದಾರ ಜಗದ್ಗುರುಗಳ ಪೂಜಾ ಸಮಿತಿಯ ಶಿವಪ್ರಕಾಶ್, ಬೀರೂರು ಶಿವಸ್ವಾಮಿ, ಗಾನಸುಧೆ ಭಜನಾ ಮಂಡಳಿಯ ಶಿವಶಂಕರ ಶಾಸಿ, ಚಂದ್ರು ಶಾಸಿ ಮತ್ತಿತರರು ಉಪಸ್ಥಿತರಿದ್ದರು.
6 ತಿಂಗಳ ನಂತರ ಕೇದಾರನಾಥನ ಬಾಗಿಲು ತೆರೆಯಲಾಗಿದ್ದು, ದೇಶದ ಲಕ್ಷಾಂತರ ಭಕ್ತರು ಕೇದಾರನಾಥನ ದರ್ಶನಕ್ಕೆ ಹರಿದು ಬರುತ್ತಿದ್ದಾರೆ. ಒಮ್ಮೆಗೆ ನಿರೀಕ್ಷೆಗಿಂತ ಹೆಚ್ಚಿನ ಜನರು ಆಗಮಿಸಿದ್ದರಿಂದ ಹಿಮಾಲಯದಲ್ಲಿ ಸ್ವಲ್ಪಮಟ್ಟಿನ ಅವ್ಯವಸ್ಥೆ ಉಂಟಾಗಿತ್ತು. ಕೂಡಲೇ ಉತ್ತರಾಖಂಡದ ಮುಖ್ಯಮಂತ್ರಿಗಳೊಂದಿಗೆ ಮಾತನಾಡಿ ಹಂತ ಹಂತವಾಗಿ ಭಕ್ತರನ್ನು ಬಿಡುವ ವ್ಯವಸ್ಥೆ ಮಾಡಿದ್ದೇವೆ. ಈಗ ಕೇದಾರನಾಥನ ಸಾನಿಧ್ಯದಲ್ಲಿ ಎಲ್ಲವೂ ವ್ಯವಸ್ಥಿತವಾಗಿ ನಡೆಯುತ್ತಿದ್ದು, ಮುಂದಿನ ದಿನಗಳಲ್ಲಿ ಕೇದಾರನಾಥ ಯಾತ್ರೆಯ ನಿಯಮಗಳನ್ನು ಮತ್ತಷ್ಟು ಸರಳಗೊಳಿಸುವುದಾಗಿ ಕೇದಾರ ಜಗದ್ಗುರುಗಳು ತಿಳಿಸಿದರು.