

ರಾಯಚೂರು ಮನುಷ್ಯ ಭೌತಿಕವಾಗಿ ಬೆಳೆದರೂ ಧಾರ್ಮಿಕವಾಗಿ ಸಾಂಸ್ಕೃತಿಕ ಚಟುವಟಿಕೆಯಲ್ಲಿ ತೊಡಗಿಸಿಕೊಳ್ಳುವುದು ಅಗತ್ಯವಿದೆ. ಮೈಸೂರಿಗೆ ದಸರಾ ಉತ್ಸವ ಮಾದರಿ ಆದರೆ ರಾಯಚೂರಿಗೆ ಮುನ್ನೂರು ಕಾಪು ಸಮಾಜದಿಂದ ಅಯೋಜಿಸುವ ಮುಂಗಾರು ಸಾಂಸ್ಕೃತಿಕ ಬೆಳ್ಳಿ ಹಬ್ಬ ಮಾದರಿಯಾಗಿದೆ ಎಂದು ಸುತ್ತೂರಿನ ಜಗದ್ಗುರು ಶ್ರೀ ಶಿವರಾತ್ರಿ ದೇಶಿಕೇಂದ್ರ ಮಹಾಸ್ವಾಮೀಜಿಗಳು ಹೇಳಿದರು.
ಮುನ್ನೂರು ಕಾಪು ಸಮಾಜದಿಂದ ಆಯೋಜನೆ ಮಾಡಲಾಗಿದ್ದ ಎರಡನೇ ದಿನದ ಎತ್ತುಗಳಿಂದ ಎರಡು ಟನ್ ಭಾರ ಎಳೆಯುವ ಸ್ಪರ್ಧೆಗೆ ಬುಧವಾರ ಚಾಲನೆ ನೀಡಿ ಆಶೀರ್ವಚನ ನೀಡಿದರು. ಮಾಜಿ ಶಾಸಕ ಎ. ಪಾಪಾರೆಡ್ಡಿ ನೇತೃತ್ವದಲ್ಲಿ ಮುಂಗಾರು ಸಾಂಸ್ಕೃತಿಕ ರಾಯಚೂರು ಬೆಳ್ಳಿ ಹಬ್ಬದ ನಿಮಿತ್ತ ಎಂಟು ದಿನಗಳ ಕಾಲ ವಿವಿಧ ಕಾರ್ಯಕ್ರಮಗಳು ಹಮ್ಮಿಕೊಂಡಿರುವುದು ಶ್ಲಾಘನೀಯ. ಇದರಿಂದ ಜನರಿಗೆ ಉತ್ತಮ ವೇದಿಕೆ ಕಲ್ಪಿಸಿದ್ದು, ಧಾರ್ಮಿಕ, ಸಂಸ್ಕೃತಿ, ಕಲೆ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳ ಮೂಲಕ ಮುನ್ನೂರು ಕಾಪು ಸಮಾಜ ಜನರಿಗೆ ಮನರಂಜನೆ ನೀಡುತ್ತದೆ ಎಂದರು.
ಮನುಷ್ಯನಿಗೆ ಶಾಂತಿ ನೆಮ್ಮದಿ ಮಲಿನ ಸ್ವಚ್ಛವಾಗಿರುತ್ತದೆ. ಧಾರ್ಮಿಕ ಆಚರಣೆಗಳಿಂದ ದೇವರ ಆಶೀರ್ವಾದ ಪಡೆಯಲು ಈ ಮಹತ್ವದ ಕಾರ್ಯ ಮುನ್ನೂರುಕಾಪು ಸಮಾಜ ನಿರಂತರವಾಗಿ ಮಾಡುತ್ತಿದೆ. ಮುನ್ನೂರು ಕಾಪು ಕೃಷಿ ಪಾರಂಪರಿಕ ಕಾರ ಹುಣ್ಣಿಮೆಯನ್ನು ಜನ ಆಕರ್ಷಿಸುವ ರೀತಿಯಲ್ಲಿ ಆಯೋಜನೆ ಮಾಡುವುದರ ಮೂಲಕ ರೈತರನ್ನು ಖುಷಿ ಪಡುಸುವದರ ಜೊತೆಗೆ ಮುಂಗಾರು ಸಾಂಸ್ಕೃತಿಕ ರಾಯಚೂರು ಬೆಳ್ಳಿ ಹಬ್ಬವನ್ನು ಅತ್ಯಂತ ಅದ್ದೂರಿಯಾಗಿ ಆಚರಣೆ ಮಾಡುವುದರ ಮೂಲಕ ಮುನ್ನೂರು ಕಾಪು ಸಮಾಜ ಇತರೆ ಸಮಾಜಗಳಿಗೆ ಆದರ್ಶವಾಗಿದೆ ಎಂದರು.
ಕಾಶಿಪೀಠದ ಜಗದ್ಗುರು ಶ್ರೀ ಡಾ.ಮಲ್ಲಿಕಾರ್ಜುನ ವಿಶ್ವಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಅವರು ಆಶೀರ್ವಚನ ನೀಡಿ, ಭಾರತ ಕೃಷಿ ಪ್ರಧಾನ ದೇಶ ಇಲ್ಲಿ ರೈತರು ಸುಖವಾಗಿದ್ದರೆ ಮಾತ್ರ ದೇಶ ಸುಭದ್ರವಾಗಲಿದೆ. ದೇಶದಲ್ಲಿ ಶೇ.70 ರಷ್ಟು ಕೃಷಿಕರು ಇದ್ದಾರೆ. ಆಧುನಿಕ ಜಗತ್ತಿನಲ್ಲಿ ಕೃಷಿ ಕ್ಷೇತ್ರ ಕಣ್ಮರೆಯಾಗುತ್ತಿದ್ದು ವ್ಯಾಪಾರ ಮತ್ತು ಉದ್ಯಮ ಕ್ಷೇತ್ರಕ್ಕೆ ಹೆಚ್ಚಿನ ಒಲವು ನೀಡಲಾಗುತ್ತಿದೆ. ದೇಶದ ಪ್ರಧಾನಿ ಮಂತ್ರಿಗಳು ಜೈ ಜವಾನ್ ಜೈ ಕಿಸಾನ್ ಎಂದು ಘೋಷಣೆ ಮಾಡಿದ್ದಾರೆ.
ಒಂದು ರೈತಾಪಿ ವರ್ಗ ಇನ್ನೊಂದು ದೇಶ ಕಾಯುವ ಸೈನಿಕ ಇವರಿಬ್ಬರೇ ದೇಶಕ್ಕೆ ಬಹಳ ಮುಖ್ಯ. ಇತಿಹಾಸದಲ್ಲಿ ಕೃಷಿ ಕ್ಷೇತ್ರ ಉತ್ತಮ ಮೈಲಿಗಲ್ಲು ಸಾಧಿಸಿದೆ. ತಂತ್ರಜ್ಞಾನ ಇಲ್ಲದಿದ್ದರೂ ದೇಶ ನಡೆಯುತ್ತದೆ ಆದರೆ ಕೃಷಿ ಕ್ಷೇತ್ರ ಇಲ್ಲದಿದ್ದರೆ ದೇಶ ಸುಭದ್ರವಾಗಿರಲು ಅಸಾಧ್ಯ ಎಂದರು. ಆದರೆ ಎ.ಪಾಪಾರೆಡ್ಡಿ ಅವರ ನೇತೃತ್ವದಲ್ಲಿ ಮುನ್ನೂರು ಕಾಪು ಸಮಾಜ 25ನೇ ವರ್ಷದ ಬೆಳ್ಳಿ ಸಂಭ್ರಮೋತ್ಸವ ಮಾಡುತ್ತಿರುವುದು ಅತ್ಯಂತ ಸಂತೋಷದಾಯಕವಾಗಿದೆಂದರು.
ಈ ಸಂದರ್ಭದಲ್ಲಿ ಬಿಚ್ಚಾಲಿಯ ಶ್ರೀ ವೀರಭದ್ರ ಶಿವಾಚಾರ್ಯ ಮಹಾಸ್ವಾಮೀಜಿ, ಸಿದ್ದಲಿಂಗ ಮಹಾಸ್ವಾಮಿಗಳು, ಅಭಿನವ ರಾಚೋಟಿ ಮಹಾಸ್ವಾಮಿಗಳು,ನವಲಕಲ್‌ನ ಶ್ರೀ ಅಭಿನವ ಸೋಮನಾಥ ಶಿವಾಚಾರ್ಯ ಸ್ವಾಮೀಜಿಗಳು, ಹಬ್ಬದ ರೂವಾರಿ ಎ.ಪಾಪರೆಡ್ಡಿ. ಸಮಾಜ ಅಧ್ಯಕ್ಷ ಬೆಲ್ಲಂ ನರಸ ರೆಡ್ಡಿ, ವಿಧಾನ ಪರಿಷತ್ ಸದಸ್ಯ ಎ. ವಸಂತ ಕುಮಾರ ಮುನ್ನೂರು ಕಾಪು ಸಮಾಜದ ಮುಖಂಡರು ಇದ್ದರು.
10 ಜೋಟಿ ಎತ್ತುಗಳು ಭಾಗಿ
2 ಟನ್ ಭಾರದ ಕಲ್ಲು ಎಳೆಯುವ ಸ್ಪರ್ಧೆಯಲ್ಲಿ ತೆಲಂಗಾಣ, ಆಂಧ್ರ ಪ್ರದೇಶದಿಂದ ಒಟ್ಟು 10 ಜೋಡು ಎತ್ತುಗಳು ಸ್ಪರ್ಧೆಯಲ್ಲಿ ಪಾಲ್ಗೊಂಡಿದ್ದವು. ಆಂಧ್ರದ ನಂದ್ಯಾಲ ಜಿಲ್ಲೆಯ ಸಂತಮಾಗಲೂರು ಗ್ರಾಮದ ವಜ್ರಲ ತೇಜಸ್ವಿರೆಡ್ಡಿ ಅವರ ಜೋಡಿ ಎತ್ತುಗಳು ಮೊದಲ ಬಹುಮಾನ ಗೆದ್ದುಕೊಂಡವು. 20 ನಿಮಿಷದಲ್ಲಿ 3,913 ಅಡಿ ದೂರದ ವರೆಗೆ ಭಾರ ಎಳೆದು ಪ್ರಥಮ ಸ್ಥಾನ ಪಡೆದಿದ್ದು, ಎತ್ತುಗಳ ಮಾಲೀಕ ವಜ್ರಲ ತೇಜಸ್ವಿರೆಡ್ಡಿಗೆ ಹಬ್ಬದ ರೂವಾರಿ ಎ.ಪಾಪರೆಡ್ಡಿ ಅವರು 90,000 ಸಾವಿರ ನಗದು ಹಾಗೂ ಸ್ಮರಣಿಗೆ ಪ್ರದಾನ ಮಾಡಲಾಯಿತು. 3,900 ಅಡಿ ದೂರ ಭಾರ ಎಳೆದ ಕರ್ನೂಲ್ ಜಿಲ್ಲೆಯ ಚಂದ್ರಕಲಾ ಗ್ರಾಮದ ಶ್ರಾವಣ ಕುಮಾರ ಅವರ ಜೋಡಿ ಎತ್ತುಗಳಿಗೆ ದ್ವಿತೀಯ ಬಹುಮಾನವಾಗಿ 65 ಸಾವಿರ ನಗದು ಹಾಗೂ 3,163 ಅಡಿ ಭಾರ ಎಳೆದ ಸೂರ್ಯಪೇಟೆ ಜಿಲ್ಲೆಯ ಹುದುರ ನಗರ ಗ್ರಾಮದ ಜಕ್ಕಲ ಸಹಸ್ರ ಯಾದವ ಅವರ ಜೋಡಿ ಎತ್ತುಗಳಿಗೆ ತೃತೀಯ ಬಹುಮಾನವಾಗಿ 55 ಸಾವಿರ ನಗದು ನೀಡಲಾಯಿತು. ಹಬ್ಬವನ್ನು ಸಾರ್ವಜನಿಕರು ತೀವ್ರ ಕುತೂಹಲದಿಂದ ನಿರೀಕ್ಷಿಸುತ್ತಿದ್ದರು. ಮುಂಗಾರು ಸಾಂಸ್ಕೃತಿಕ ಬೆಳ್ಳಿ ಹಬ್ಬವನ್ನು ನೋಡಲು ನಿರೀಕ್ಷೆಗೆ ಮೀರಿ ಅಪಾರ ಸಂಖ್ಯೆಯಲ್ಲಿ ಜನರು ಗಂಜ್ ಆವರಣದಲ್ಲಿ ಜಮಾಯಿಸಿದ್ದರು.
ಹಬ್ಬದ ರೂವಾರಿ ಎ. ಪಾಪಾರೆಡ್ಡಿ ಮಾತನಾಡಿ, ಮುನ್ನೂರು ಕಾಪು ಸಮಾಜದ 25ನೇ ವರ್ಷದ ಮುಂಗಾರು ಸಾಂಸ್ಕೃತಿಕ ರಾಯಚೂರು ಬೆಳ್ಳಿ ಹಬ್ಬಕ್ಕೆ ಸುತ್ತೂರಿನ ಜಗದ್ಗುರು ಶ್ರೀ ಶಿವರಾತ್ರಿ ದೇಶಿಕೇಂದ್ರ ಮಹಾಸ್ವಾಮೀಜಿಗಳು ಪ್ರಪ್ರಥಮ ಬಾರಿಗೆ ಆಗಮಿಸಿರುವುದು ಮುನ್ನೂರು ಕಾಪು ಸಮಾಜದ ಭಾಗ್ಯವಾಗಿದೆ. ಕಳೆದ ಮುಂಗಾರು ಹಬ್ಬದ ವರ್ಷದಲ್ಲಿ 25ನೇ ಬೆಳ್ಳಿ ಹಬ್ಬಕ್ಕೆ ಸುತ್ತೂರಿನ ಜಗದ್ಗುರು ಶ್ರೀ ಶಿವರಾತ್ರಿ ದೇಶಿಕೇಂದ್ರ ಮಹಾಸ್ವಾಮೀಜಿಗಳನ್ನು ಕರೆ ತರಬೇಕೆಂದು ನಿರ್ಧರಿಸಿದೆ. ನಾನು ಅವರನ್ನು ಭೇಟಿಯಾಗಿ ಮುಂಗಾರು ಹಬ್ಬಕ್ಕೆ ಆಹ್ವಾನಿಸಲಾಗಿತ್ತು. ಅದರಂತೆ ಸ್ವಾಮೀಜಿಗಳು ಆಗಮಿಸಿರುವುದು ನನಗೆ ಬಹಳ ಖುಷಿಯಾಗಿದೆ ಎಂದು ಹರ್ಷ ವ್ಯಕ್ತಪಡಿಸಿದರು.