

ನರಗುಂದ: ಸತ್ಸಂಗವೆಂದರೆ ಸತ್ಯದಿಂದ ಒಳ್ಳೆಯ ಜನರೊಂದಿಗೆ ಬೇರೆಯುವುದು. ಆಧ್ಯಾತ್ಮಿಕ ಜ್ಞಾನ ಹೆಚ್ಚಿಸಿಕೊಳ್ಳಬೇಕಾದರೆ ಸತ್ಯದ ಅನ್ವೇಷಣೆಗಳೊಂದಿಗೆ ಉತ್ತಮ ಗುರುಗಳ ಸಹವಾಸ, ಸಂಸ್ಕಾರ, ಭಕ್ತಿ ಪರಂಪರೆ ಹೊಂದಿರಬೇಕು ಎಂದು ಶಿರಹಟ್ಟಿ ಫಕೀರೇಶ್ವರ ಸಂಸ್ಥಾನ ಮಠದ ಜಗದ್ಗುರು ಫಕೀರ ಸಿದ್ಧರಾಮ ಮಹಾಸ್ವಾಮಿಗಳು ಹೇಳಿದರು.
ದಸರಾ ಹಬ್ಬದ ಪ್ರಯುಕ್ತ ಪಟ್ಟಣದ ಸೋಮಾಪೂರ ಬಡಾವಣೆಯ ಶ್ರೀ ನಾಗಲಿಂಗ ನಿಲಯದಲ್ಲಿ ಸೋಮವಾರದಿಂದ ಪ್ರಾರಂಭಗೊಂಡಿರುವ ದೇವಿ ಪುರಾಣ ಪ್ರವಚನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಮಾನವನಿಗೆ ನೆಮ್ಮದಿ ಪ್ರಾಪ್ತಿಯಾಗಬೇಕಾದರೆ ಆತನಲ್ಲಿ ಭಕ್ತಿ, ಆಧ್ಯಾತ್ಮಿಕ ಒಲವು, ಪುರಾಣ ಪುಣ್ಯ ಕಥೆಗಳನ್ನು ಕೇಳುವುದರ ಜತೆಗೆ ಒಳ್ಳೆಯ ಧಾಮಿರ್ಕ ಸಂಗೀತ ಕಾರ್ಯಕ್ರಮ ಆಲಿಸಬೇಕು. ಇದರಿಂದ ಮನಸ್ಸಿನ ದು:ಖ ಕಡಿಮೆಯಾಗಿ ಶಾಂತಿಯ ಸತ್ಸಂಗ ಉತ್ತುಂಗಕ್ಕೇರುತ್ತದೆ ಎಂದು ತಿಳಿಸಿದರು.
ಭಾರತೀಯ ಸಂಗೀತ ವಿದ್ಯಾಲಯದ ಪ್ರಾಚಾರ್ಯ ಶ್ರೀನಿವಾಸ ಇನಾಮದಾರ, ಮಹೇಶ ಬಡಿಗೇರ ಮಾತನಾಡಿದರು. ಪುರಾಣ ಪ್ರವಚನಕಾರ ಮೌನೇಶ ಪತ್ತಾರ ಅವರಿಂದ ಪ್ರಣವ ಧ್ವಜಾರೋಹಣ ನೆರವೇರಿಸಿದರು. ಹುಬ್ಬಳ್ಳಿಯ ಸೋಮಾಚಾರ್ಯ ಕಡ್ಲಾಸ್ಕರ ನೇತೃತ್ವದಲ್ಲಿ ಪುರಾಣ ಪ್ರಾರಂಭೋತ್ಸವದ ವಿವಿಧ ಪೂಜೆ, ಪುನಸ್ಕಾರ ನೆರವೇರಿಸಲಾಯಿತು.
ವೆಂಕರಡ್ಡಿ ಹೂಲಿ, ರಾಜು ಆಚಾರ್ಯ, ಮೌನೇಶ ಪತ್ತಾರ, ರಾಚನಗೌಡ ಪಾಟೀಲ, ಈರಣ್ಣ ಪಲ್ಲೇದ, ಎಸ್.ಐ.ಅಂಕಲಿ, ವಾಸುರಡ್ಡಿ ಹೆಬ್ಬಾಳ, ನಭಿಸಾಬ ಕಿಲ್ಲೇದಾರ, ಮಾಲಾ ಪಾಟೀಲ, ಯಲ್ಲಪ್ಪ ತಳವಾರ, ಹನುಮಂತ ಯಮ್ಮಡಗಿ, ಮುತ್ತು ಹುಲಜೋಗಿ, ಸಾಗರ ಬಡಿಗೇರ, ಉಜ್ಜಲ್ ಕೆರೂರ ಉಪಸ್ಥಿತರಿದ್ದರು.