ಜ.14 ಇಷ್ಟಲಿಂಗ ಕಂಡು ಹಿಡಿದ ದಿನ

KSM NEWS 14-3
Published on

ಕೂಡಲಸಂಗಮ: ಬಸವಣ್ಣನವರು ಸಾಕ್ಷಾತ್ಕಾರ ಹೊಂದಿ, ಸೃಷ್ಟಿಕರ್ತ ದೇವರಿಗೆ ಲಿಂಗದೇವ ಎಂಬ ತಾತ್ವಿಕ ಹೆಸರನ್ನು ನೀಡಿ ಸೃಷ್ಟಿಕರ್ತ ಲಿಂಗದೇವನ ಕುರುಹಾಗಿ ಇಷ್ಟಲಿಂಗ ಕಂಡು ಹಿಡಿದು ಮಕರ ಸಂಕ್ರಾಂತಿಯಂದು ಲಿಂಗಾಯತ ಧರ್ಮ ಸಂಸ್ಥಾಪನೆ ಮಾಡಿದರು. ಆದ್ದರಿಂದ ಜನವರಿ 14ನ್ನು ಬಸವ ಕ್ರಾಂತಿದಿನ, ಲಿಂಗಾಯತ ಧರ್ಮ ಸಂಸ್ಥಾಪನಾ ದಿನ ಎಂದು ಕರೆಯಲಾಗುತ್ತದೆ ಎಂದು ಕೂಡಲಸಂಗಮ ಬಸವ ಧರ್ಮ ಪೀಠದ ಪೀಠಾಧ್ಯಕ್ಷೆ ಜಗದ್ಗುರು ಡಾ.ಮಾತೆ ಗಂಗಾದೇವಿ ಹೇಳಿದರು.

ಕೂಡಲಸಂಗಮ ಬಸವ ಧರ್ಮ ಪೀಠದ ಆವರಣದಲ್ಲಿ ನಡೆದ 33ನೇ ಶರಣಮೇಳದ ಸಮುದಾಯ ಪ್ರಾರ್ಥನೆ ಮತ್ತು ವಚನ ಪಠಣ ಸಮಾರಂಭದ ಸಾನ್ನಿಧ್ಯ ವಹಿಸಿ ಮಂಗಳವಾರ ಮಾತನಾಡಿ, ಬಸವತತ್ವ ಅನುಯಾಯಿಗಳು ಸಹೋದರ ಭಾವನೆಯಿಂದ ಒಂದೆಡೆ ಸೇರಿ ಧಾರ್ಮಿಕ ಅನುಯಾಯಿತ್ವ ಸ್ಥಿರೀಕರಿಸಬೇಕು ಎಂಬುದೇ ಪ್ರಾರ್ಥನೆ ಉದ್ದೇಶವಾಗಿದೆ. ಶರಣಮೇಳದ 4 ದಿನಗಳ ಕಾರ್ಯಕ್ರಮದಲ್ಲಿ ಭಾಗಿಯಾಗಲು ಸಾಧ್ಯವಿಲ್ಲದ ಶರಣ ಬಂಧುಗಳು ಕನಿಷ್ಠ ಪಕ್ಷ ಜನವರಿ 14 ರಂದು ಒಂದು ದಿನದ ಮಟ್ಟಿಗಾದರೂ ಸಮುದಾಯ ಪ್ರಾರ್ಥನೆ, ವಚನ ಪಠಣದಲ್ಲಿ ಭಾಗವಹಿಸಬೇಕು ಎಂದು ಹೇಳಿದರು.

ಬಸವ ಧ್ವಜಾರೋಹಣವನ್ನು ಮಾತೆ ಗಂಗಾದೇವಿ ನೆರವೇರಿಸಿದರು. ಮಾಹಾದೇಶ್ವರ ಸ್ವಾಮೀಜಿ, ಬಸವಕುಮಾರ ಸ್ವಾಮೀಜಿ, ಚನ್ನಬಸವಾನಂದ ಸ್ವಾಮೀಜಿ, ಪ್ರಭುಲಿಂಗ ಸ್ವಾಮೀಜಿ, ಮಾತೆ ಸತ್ಯಾದೇವಿ, ಮಾತೆ ಜ್ಞಾನೇಶ್ವರಿ ಮುಂತಾದವರು ಇದ್ದರು.

ಭೋಜನ ಸವಿದ ಭಕ್ತರು
ಶರಣ ಮೇಳದಲ್ಲಿ ಉತ್ತರ ಕರ್ನಾಟಕದ ಬಿಳಿಜೋಳ ಹಾಗೂ ಸಜ್ಜೆ ರೊಟ್ಟಿ, ಲಾಡು, ಹುಗ್ಗಿ, ಶ್ಯಾವಿಗೆ ಪಾಯಸ, ಕುಂಬಳಕಾಯಿ ಪಾಯಸ, ಮೈಸೂರು ಪಾಕ್, ಜಾಮೂನ್ ಮುಂತಾದ ಸಿಹಿತಿಂಡಿಗಳ ಜತೆಗೆ ಮೊಸರು, ಮಜ್ಜಿಗೆ ಭಕ್ತರು ಸವಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net