

ಹೊಸದುರ್ಗ: ತಾಲೂಕಿನ ಬೆಲಗೂರು ಗ್ರಾಮದಲ್ಲಿ ಶ್ರೀಲಕ್ಷ್ಮೀ ಅಮ್ಮನವರ ಶೀಲಾಮೂರ್ತಿಗೆ ಸ್ವರ್ಣ ಕಿರೀಟ ಸಮರ್ಪಣೆ ಹಿನ್ನೆಲೆಯಲ್ಲಿ ಶೃಂಗೇರಿ ಶಾರದಾ ಪೀಠದ ಜಗದ್ಗುರು ಶ್ರೀ ವಿಧುಶೇಖರ ಭಾರತೀ ಸ್ವಾಮಿಜಿ ಅವರ ಪುರಪ್ರವೇಶ ಕಾರ್ಯಕ್ರಮ ಬುಧವಾರ ಸಂಜೆ ವಿಜೃಂಭಣೆಯಿಂದ ನೆರವೇರಿತು.
ಕಡೂರು ರಸ್ತೆಯ ಬಿಎಸ್‌ಎನ್‌ಎಲ್ ಕಚೇರಿ ಬಳಿ ಶ್ರೀಗಳನ್ನು ಮಾರುತಿ ಪೀಠದ ಪೀಠಾಧೀಪತಿ ಶ್ರೀ ವಿಜಯ ಮಾರುತಿ ಶರ್ಮ ಸ್ವಾಮೀಜಿ ಬರಮಾಡಿಕೊಂಡರು. ಬಳಿಕ ಪೂರ್ಣಕುಂಭದೊಂದಿಗೆ ಸ್ವಾಗತಿಸಲಾಯಿತು.
ಪುರಪ್ರವೇಶದ ನಂತರ ಅಲಂಕೃತ ವಾಹನದಲ್ಲಿ ಶ್ರೀಗಳನ್ನು ಮೆರವಣಿಗೆ ನಡೆಸಲಾಯಿತು. ಗ್ರಾಮದ ಪ್ರಮುಖ ರಸ್ತೆಗಳ ಮೂಲಕ ಸಾಗಿ ಬಂದ ಉತ್ಸವ, ವೀರಪ್ರತಾಪ ಅಂಜನೇಯ ಸ್ವಾಮಿ ದೇವಾಲಯದಲ್ಲಿ ಮುಕ್ತಾಯಗೊಂಡಿತು.
ನಂತರ ದೇವಾಲಯದಲ್ಲಿ ವಿಶೇಷ ಧೂಳಿ ಪಾದಪೂಜೆ ಹಾಗೂ ಚಂದ್ರಮೌಳಿಶ್ವರ ಪೂಜಾ ಕಾರ್ಯಕ್ರಮಗಳು ನೆರವೇರಿದವು.
ಮೆರವಣಿಗೆ ಸಾಗಿಬಂದ ರಸ್ತೆಗಳನ್ನು ತಳಿರು ತೋರಣ ಹಾಗೂ ಶೃಂಗೇರಿಯ ಉಭಯ ಜಗದ್ಗುರುಗಳ ಬೃಹತ್ ಫೋಟೋಗಳೊಂದಿಗೆ ಅಲಂಕರಿಸಲಾಗಿತ್ತು.
ವಿಶೇಷವಾದ ಉಡುಗೆ ತೊಟ್ಟ ಮಹಿಳೆಯರು ಪೂರ್ಣಕುಂಭ ಹಿಡಿದು ಮೆರವಣಿಗೆಯಲ್ಲಿ ಹೆಜ್ಜೆ ಹಾಕಿ ಗಮನಸೆಳೆದರು. ಡೋಲು, ಮೃಂದಗ, ಮದ್ದಳೆ ಸೇರಿ ಜನಪದ ಕಲಾ ಮೇಳಗಳು ಮೆರವಣಿಗೆಯಲ್ಲಿ ಸಾಗಿ ಬಂದವು.
ಸ್ವರ್ಣ ಕೀರಿಟ ಸಮರ್ಪಣೆ: ಗುರುವಾರ ಮುಂಜಾನೆಯಿಂದ ಸಂಜೆಯವರೆಗೆ ವಿಶೇಷ ಕಾರ್ಯಕ್ರಮಗಳು ನಡೆಯಲಿವೆ. ಬೆಳಗ್ಗೆ 9ಕ್ಕೆ ವೀರ ಪ್ರತಾಪ ಅಂಜನೇಯ ಸ್ವಾಮಿಗೆ ಮಹಾರುದ್ರಾಭಿಷೇಕ, ಕಲ್ಪೋಕ್ತ ಪೂಜೆ ನಡೆಯಲಿದೆ. 9.45ಕ್ಕೆ ಶೃಂಗೇರಿ ಜಗದ್ಗುರುಗಳಿಂದ ದೇವಿಗೆ ನವರತ್ನ ಖಚಿತ ಸುವರ್ಣ ಕೀರಿಟಧಾರಣೆ ನೆರವೇರಲಿದೆ.
11 ಗಂಟೆಗೆ ಸಭಾ ಕಾರ್ಯಕ್ರಮ ಆಯೋಜನೆಯಾಗಿದ್ದು, ಜಗದ್ಗುರುಗಳಿಗೆ ಗುರುವಂದನೆ, ಫಲಸರ್ಮಪಣೆ, ಶ್ರೀಗಳಿಂದ ಅನುಗ್ರಹ ಸಂದೇಶ ನೆರವರಲಿದೆ. ಮಧ್ಯಾಹ್ನ 3 ಗಂಟೆಗೆ ಲಕ್ಮೀ ನಾರಾಯಣ ಸ್ವಾಮಿ ದೇವಾಲಯದಲ್ಲಿ ಪುಷ್ಪಾರ್ಚನೆ ಹಾಗೂ ಮಹಾಮಂಗಳಾರತಿ ನಡೆಯಲಿದೆ.