

ಮುಳಬಾಗಿಲು: ಕೋಲಾರ ಜಿಲ್ಲೆಯ ಮುಳಬಾಗಿಲು ತಾಲೂಕಿನ ಆವನಿ ಗ್ರಾಮದ ಶೃಂಗೇರಿ ಮಠದ ಜಗದ್ಗುರು ಅಭಿನವ ವಿದ್ಯಾಶಂಕರ ಭಾರತಿ ಸ್ವಾಮೀಜಿ (55) ಬ್ರಹ್ಮೆಕ್ಯರಾಗಿದ್ದಾರೆ.
ಬೆಂಗಳೂರಿನ ರಾಜಾಜಿನಗರದ ಆವನಿ ಶೃಂಗೇರಿ ಶಾಖಾ ಮಠದಲ್ಲಿ ಶನಿವಾರ ಬೆಳಗ್ಗೆ 5.30ರ ಸುಮಾರಿನಲ್ಲಿ ಶ್ರೀಗಳಿಗೆ ಹೃದಯಾಘಾತವಾಗಿ ಕೊನೆಯುಸಿರೆಳೆದರು.
ಧಾರವಾಡದ ವೇ.ಬ್ರ.ದಕ್ಷಣಾಮೂರ್ತಿ ಶಾಸ್ತ್ರಿ ಮತ್ತು ಶ್ರೀಮತಿ ವತ್ಸಲಾಂಬಾ ದಂಪತಿ ಜಗದ್ಗುರು ಅಭಿನವ ವಿದ್ಯಾಶಂಕರ ಭಾರತಿ ಸ್ವಾಮೀಜಿಯವರ ಪೂರ್ವಾಶ್ರಮದ ತಂದೆ-ತಾಯಿ. 1987ರಲ್ಲಿ ಆವನಿ ಶೃಂಗೇರಿ ಮಠದ ಜಗದ್ಗುರುಗಳಾಗಿ ಮಠದ ಕೀರ್ತಿ ಹೆಚ್ಚಿಸಿದ್ದರು. ಆವನಿಯಲ್ಲಿ ಶಾರದಾಂಬೆ ದೇವಾಲಯ ನಿರ್ಮಾಣದ ರೂವಾರಿಯೂ ಆಗಿದ್ದರು. ಅಲ್ಲದೆ ಭಕ್ತರು ಶಾರದಾಂಬೆಗೆ ಪೂಜೆ ಸಲ್ಲಿಸಲು ಅವಕಾಶ ಮಾಡಿಕೊಟ್ಟಿದ್ದರು. ಶನಿವಾರ ಮಧ್ಯಾಹ್ನ ಮಠದ ವೇದಿಕೆ ಸ್ಥಳದಲ್ಲಿ ಅಂತ್ಯಕ್ರಿಯೆ ನೆರವೇರಿತು.